Advertisement

ಆಳ್ವಾಸ್‌ನಲ್ಲಿ “ಶಾಜ್ಬೂ  ಚರೋಬಾ’ಮಣಿಪುರಿ ಯುಗಾದಿ ಆಚರಣೆ

08:21 AM Apr 02, 2018 | Team Udayavani |

ಮೂಡಬಿದಿರೆ: ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ  ಪರಿಹಾರ ಸೂಚಿಸುತ್ತದೆ. ಉತ್ತಮ ಶಿಕ್ಷಣ ಉತ್ತಮ ಭವಿಷ್ಯದ ನಿರ್ಮಾಣಕ್ಕೆ ಬುನಾದಿ ಎಂದು ಮಣಿಪುರದ ಶಿಕ್ಷಣ ಸಚಿವ ರಾಧೆಶ್ಯಾಮ್‌ ಅಭಿಪ್ರಾಯಪಟ್ಟರು.

Advertisement

ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ಎಂ.ಬಿ.ಎ. ಸಭಾಂಗಣದಲ್ಲಿ ರವಿವಾರ ಜರಗಿದ “ಶಾಜೂº ಚರೋಬಾ’ ಮಣಿಪುರಿ ಯುಗಾದಿ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣಕ್ಕೂ ಸಾಕ್ಷರತೆಗೂ ವ್ಯತ್ಯಾಸವಿದೆ. ಸಾಕ್ಷರತೆ ಶಿಕ್ಷಣದ ಒಂದು ಸಣ್ಣ ಭಾಗವಷ್ಟೆ. ಅಂಕ ಗಳಿಕೆಯನ್ನು ಬೌದ್ಧಿಕ ಮಾಪಕವಾಗಿ ಪರಿಗಣಿಸಲಾಗುವುದಿಲ್ಲ. ಅಂಕ ಗಳಿಕೆಯಲ್ಲಿ ಮುಂದಿರುವವರು ಜೀವನದಲ್ಲಿ ವಿಫಲರಾದ ಉದಾಹರಣೆಗಳಿವೆ. ಸಂಕಲ್ಪ ರಹಿತ ಶಿಕ್ಷಣದಲ್ಲಿ ಯಾವ ಅರ್ಥವೂ ಇಲ್ಲ. ಹಾಗಾಗಿ ವಿದ್ಯಾಭ್ಯಾಸವು ನಿಶ್ಚಿತ ಗುರಿಯನ್ನು ಹೊಂದಿರುವುದು ಅಗತ್ಯ ಎಂದು ಅವರು ತಿಳಿಸಿದರು.

ನಾನೂ ಒಬ್ಬ ವಿದ್ಯಾರ್ಥಿ
ಮಣಿಪುರ ಮೂಲಭೂತ ಸಮಸ್ಯೆಗಳಿಂದ ಮುಕ್ತವಾಗಿದ್ದರೂ ಹಲವು ಕ್ಷೇತ್ರಗಳಲ್ಲಿ ನಾವಿನ್ನೂ ಸಾಧಿಸುವುದು ಸಾಕಷ್ಟಿದೆ. ಹಾಗಾಗಿ ನಾನು ಭೇಟಿ ನೀಡಿದ ಜಾಗಗಳಲ್ಲಿನ ಉತ್ತಮ ಅಂಶಗಳನ್ನು ನನ್ನ ರಾಜ್ಯದಲ್ಲಿ ಜಾರಿಗೊಳಿಸಲು ಪ್ರಯತ್ನಿಸುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯಿಂದಲೂ ಒಳ್ಳೆಯ ಆಲೋಚನೆಗಳನ್ನು ಕಲಿಯಲಿಚ್ಛಿಸುತ್ತೇನೆ ಎಂದು ರಾಧೆಶ್ಯಾಮ್‌ ಹೇಳಿದರು.

ಆಳ್ವಾಸ್‌ ಕಾಲೇಜಿನ ಮ್ಯಾನೇಜಿಂಗ್‌ ಟ್ರಸ್ಟಿ ವಿವೇಕ್‌ ಆಳ್ವ ಮಾತನಾಡಿ, ಪೂರ್ವಾಂಚಲ ರಾಜ್ಯಗಳ ಕಲೆ-ಸಂಸ್ಕೃತಿಯ ಮಹತ್ವವನ್ನು ಅರಿತು ನಮ್ಮ ಸಂಸ್ಥೆ ಎರಡು ದಶಕಗಳಿಂದ ಅದರ ಬೆಳವಣಿಗೆಯಲ್ಲಿ ಕೈ ಜೋಡಿಸಿದೆ. ಈ ಕಾರ್ಯಕ್ರಮವೂ ಅದರ ಒಂದು ಸಾಕ್ಷಿರೂಪವಷ್ಟೇ. ಸಣ್ಣಸಣ್ಣ ಹೆಜ್ಜೆಗಳಿಂದ ಆರಂಭವಾದ ನಮ್ಮ ಪ್ರಯತ್ನ ಇಂದು ಮಹತ್ತರ ಬದಲಾವಣೆಗೆ ನಾಂದಿಯಾಗಿದೆ. ಇದು ನಮ್ಮಲ್ಲಿನ ಸಾಮರಸ್ಯವನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ಪೂರ್ವಾಂಚಲ ವಿಕಾಸ ಸಂಘದ ಸಂಯೋಜಕ ಪುಷ್ಪರಾಜ್‌, ಗೋರಕ್‌ಚಂದ್ರ ಶರ್ಮ, ಉದ್ಯಮಿಗಳಾದ ಅಶ್ವಥ್‌ ಹೆಗ್ಡೆ ಮತ್ತು ಡಾ| ಎಡ್ಮಂಡ್‌, ಆಳ್ವಾಸ್‌ ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸ್‌ ಕಾಲೇಜಿನ ಪ್ರಾಂಶುಪಾಲೆ ವನಿತಾ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಣಿಪುರಿ ನೃತ್ಯ, ಡೊಳ್ಳು ಕುಣಿತ, ಸ್ಟಿಕ್‌ ಡಾನ್ಸ್‌, ಪೆನಾ ಮತ್ತು ಲಾಂದೆ ವಾದ್ಯ ಪ್ರದರ್ಶನ, ಸಮೂಹ ಗಾಯನ ಗಮನ ಸೆಳೆದವು. ಯೆನ್‌, ಪನ್ನೀರ್‌, ಎರೊಂಬಾ, ಕಾಂಗೌ, ಚಾಂಫ‌ುಟ್‌, ಹೈ ತೊಂಬಾ, ಸಿಂಜೂ, ಮಂಗಲ ಊಟಿ ಸೇರಿದಂತೆ ಮಣಿಪುರಿ ಖಾದ್ಯಗಳ ಭೋಜನ ಕೂಟವನ್ನು ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next