ಇಂಫಾಲ: ಮಣಿಪುರದ ಕಾಂಗ್ಪೋಗ್ಪಿ ಜಿಲ್ಲೆಯ ಸಪೋರ್ಮಿನಾದಲ್ಲಿ ಭದ್ರತಾ ಪಡೆಗಳ ಎರಡು ಬಸ್‌ಗಳನ್ನು ಉದ್ರಿಕ್ತರ ಗುಂಪು ಸುಟ್ಟು ಹಾಕಿವೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ದಿಮಾಪುರದಿಂದ ಭದ್ರತಾ ಪಡೆಗಳ ಬಸ್‌ಗಳು ತೆರಳುತ್ತಿದ್ದಾಗ ಸಪೋರ್ಮಿನಾದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.
“ಒಂದು ಸಮುದಾಯಕ್ಕೆ ಸೇರಿದ ಗುಂಪಿನವರು ಸೇನೆಯ ಬಸ್‌ಗಳನ್ನು ತಡೆದರು. ಅಲ್ಲದೇ ಬೇರೆ ಸಮುದಾಯದವರು ಬಸ್‌ನಲ್ಲಿ ಇದ್ದಾರೆಯೇ ಎಂಬುದನ್ನು ಪರಿಶೀಲಿಸಿದರು. ನಂತರ ಕೆಲವರು ಬಸ್‌ಗಳಿಗೆ ಬೆಂಕಿ ಹಚ್ಚಿದರು” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇ 3ರ ನಂತರ ಮಣಿಪುರದಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೂ 160ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಎಸ್‌ಟಿ ಸ್ಥಾನಮಾನದ ಬೇಡಿಕೆ ನೀಡಬೇಕೆಂಬ ಮೈತೇಯಿ ಸಮುದಾಯದ ಆಗ್ರಹದ ವಿರುದ್ಧ ಮೇ 3ರಂದು ಮಣಿಪುರದ ವಿವಿಧ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನಾ ಧರಣಿಯ ನಂತರ ರಾಜ್ಯದಲ್ಲಿ ಹಿಂಸಾಚಾರ ಭುಗಿಲ್ಲೆದಿತು. ರಾಜ್ಯದಲ್ಲಿ ಮೈತೇಯಿ ಸಮುದಾಯದವರು ಶೇ.53ರಷ್ಟಿದ್ದು, ಬಹುತೇಕ ಇಂಫಾಲ ಕಣಿವೆಯಲ್ಲಿ ವಾಸಿಸುತ್ತಾರೆ. ಬುಡಕಟ್ಟು ಸಮುದಾಯಗಳಾದ ಕುಕಿ ಮತ್ತು ನಾಗಾಗಳು ಶೇ.40ರಷ್ಟಿದ್ದು, ಬೆಟ್ಟಗಳಿಂದ ಕೂಡಿದ ಜಿಲ್ಲೆಗಳಲ್ಲಿ ವಾಸಿಸುತ್ತಾರೆ.
ಮಹಿಳೆಯರ ಬೆತ್ತಲೆ ಮೆರವಣಿಗೆ ಅಘಾತಕಾರಿ: ಅಮೆರಿಕ
ಮಣಿಪುರದ ಕಾಂಗ್ಪೋಗ್ಪಿ ಜಿಲ್ಲೆಯಲ್ಲಿ ಪುರುಷರ ಒಂದು ಗುಂಪು ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ, ಮೆರವಣಿಗೆ ನಡೆಸಿದ ಘಟನೆಗೆ ಅಮೆರಿಕ ಆಘಾತ ವ್ಯಕ್ತಪಡಿಸಿದೆ. ಈ ಘಟನೆಯು ಮೇ 4ರಂದು ನಡೆದಿದ್ದು, ಜು.19ಕ್ಕೆ ಬೆಳಕಿಗೆ ಬಂದಿತ್ತು.
“ಮಣಿಪುರದಲ್ಲಿ ಇಬ್ಬರು ಮಹಿಳೆಯರ ಮೇಲಿನ ಅಮಾನವೀಯ ದಾಳಿಯ ವಿಡಿಯೋದಿಂದ ನಾವು ಆಶ್ಚರ್ಯ ಮತ್ತು ಆಘಾತಕ್ಕೊಳಗಾಗಿದ್ದೇವೆ. ಈ ಲಿಂಗ ಆಧಾರಿತ ಹಿಂಸಾಚಾರದಲ್ಲಿ ಬದುಕುಳಿದವರಿಗೆ ನಾವು ಸಹಾನುಭೂತಿಯನ್ನು ತಿಳಿಸುತ್ತೇವೆ. ಇವರಿಗೆ ನ್ಯಾಯವನ್ನು ಒದಗಿಸುವ ಭಾರತ ಸರ್ಕಾರದ ಪ್ರಯತ್ನಗಳಿಗೆ ನಾವು ಬೆಂಬಲಿಸುತ್ತೇವೆ” ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ಉಪ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.