Advertisement

Manipur ಪೊಲೀಸ್‌ ಮುಖ್ಯಸ್ಥರ ಬದಲಾವಣೆ; ಗಲಭೆ ಹತ್ತಿಕ್ಕುವ ನಿಟ್ಟಿನಲ್ಲಿ ಮಹತ್ವದ ಕ್ರಮ

12:19 AM Jun 02, 2023 | Team Udayavani |

ಇಂಫಾಲ್‌/ಹೊಸದಿಲ್ಲಿ: ಮಣಿಪುರದಲ್ಲಿ ಕಳೆದ ತಿಂಗಳು ಆರಂಭವಾದ ಹಿಂಸಾಚಾರವು ಈವರೆಗೆ 80 ಮಂದಿಯನ್ನು ಬಲಿತೆಗೆದುಕೊಂಡಿರುವುದಲ್ಲದೇ, ಪದೇಪದೆ ಗಲಭೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಗುರುವಾರ ಪೊಲೀಸ್‌ ಇಲಾಖೆಯಲ್ಲಿ ದೊಡ್ಡಮಟ್ಟದ ಬದಲಾವಣೆಯನ್ನು ಮಾಡಿದೆ.

Advertisement

ಮಣಿಪುರ ಪೊಲೀಸ್‌ ಮುಖ್ಯಸ್ಥರಾಗಿದ್ದ ಪಿ.ದೌಂಗೆಲ್‌ರನ್ನು ಗೃಹ ಇಲಾಖೆಗೆ ಎತ್ತಂಗಡಿ ಮಾಡಿ, ತ್ರಿಪುರ ಕೇಡರ್‌ನ ಐಪಿಎಸ್‌ ಅಧಿಕಾರಿ ರಾಜೀವ್‌ ಸಿಂಗ್‌ರನ್ನು ರಾಜ್ಯದ ಹೊಸ ಪೊಲೀಸ್‌ ಮಹಾನಿರ್ದೇಶಕ(ಡಿಜಿಪಿ)ರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಬುಡಕಟ್ಟೇತರ ಹಾಗೂ ಮೈತೇಯಿ ಸಮುದಾಯದವರಲ್ಲದ ಪೊಲೀಸ್‌ ಮುಖ್ಯಸ್ಥರನ್ನು ಮಣಿಪುರಕ್ಕೆ ನೇಮಿಸುವ ಮೂಲಕ ಸಂಭಾವ್ಯ ವಿವಾದವನ್ನು ತಡೆಯುವ ಕೆಲಸವನ್ನೂ ಕೇಂದ್ರ ಗೃಹ ಸಚಿವಾಲಯ ಮಾಡಿದೆ. ಸಿಂಗ್‌ ಅವರು ಈ ಹಿಂದೆ ಸಿಆರ್‌ಪಿಎಫ್ ಐಜಿಯಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮಣಿಪುರ ಭೇಟಿ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆದಿದೆ.

ಮೇ 3ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಸಮಯದಲ್ಲಿ ಕೇಂದ್ರ ಸರಕಾರವು ಸಿಆರ್‌ಪಿಎಫ್ನ ಮಾಜಿ ಮುಖ್ಯಸ್ಥ ಕುಲದೀಪ್‌ ಸಿಂಗ್‌ರನ್ನು ಮಣಿಪುರ ಸರಕಾರದ ಭದ್ರತಾ ಸಲಹೆಗಾರರನ್ನಾಗಿ ನೇಮಕ ಮಾಡಿತ್ತು.

ಗುಂಡಿನ ಚಕಮಕಿ, ಮೂವರು ಪೊಲೀಸರಿಗೆ ಗಾಯ: ಬಿಷ್ಣುಪುರ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಕುಂಬಿ ಪೊಲೀಸ್‌ ಠಾಣೆ ವ್ಯಾಪ್ತಿಯ ಟಾಂಗ್‌ಜೆಂಗ್‌ನಲ್ಲಿ ಈ ಚಕಮಕಿ ನಡೆದಿದೆ.

ತನಿಖೆಗೆ ಸಮಿತಿ
ಹಿಂಸಾಚಾರ ಕುರಿತ ತನಿಖೆಗಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಸಮಿತಿಯನ್ನು ರಚಿಸುವುದಾಗಿ ಸಚಿವ ಶಾ ಘೋಷಿಸಿದ್ದಾರೆ. ಅಲ್ಲದೇ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ರಾಜ್ಯಪಾಲರು, ಭದ್ರತಾ ಸಲಹೆಗಾರ ಕುಲದೀಪ್‌ ಸಿಂಗ್‌ ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಒಳಗೊಂಡ ಶಾಂತಿ ಸಮಿತಿಯನ್ನು ರಚಿಸುವ ನಿರ್ಧಾರವನ್ನೂ ಕೈಗೊಂಡಿದ್ದಾರೆ. ಹಿಂಸೆಗೆ ಸಂಚು ರೂಪಿಸಿದ 6 ಪ್ರಕರಣ ಗಳನ್ನು ಮಾತ್ರ ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ.

Advertisement

ಸಚಿವ ಶಾ ಖಡಕ್‌ ಎಚ್ಚರಿಕೆ
4 ದಿನಗಳ ಮಣಿಪುರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಕುಕಿ ಬಂಡುಕೋರರ ಗುಂಪಿಗೆ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ. ಕಾರ್ಯಾಚರಣೆ ಸ್ಥಗಿತ ಒಪ್ಪಂದ (ಸಸ್ಪೆನ್ಶನ್‌ ಆಫ್ ಆಪರೇಶ‌ನ್‌)ವನ್ನು ಯಾರೇ ಉಲ್ಲಂ ಸಿದರೂ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಶಾಂತಿ ಮರಳಬೇಕೆಂದರೆ ಪ್ರತಿಯೊಬ್ಬರು ಒಪ್ಪಂದವನ್ನು ಚಾಚೂತಪ್ಪದೇ ಪಾಲಿಸಬೇಕು ಎಂದಿದ್ದಾರೆ. ಶಸ್ತ್ರಾಸ್ತ್ರ ಕೋಠಿಯಿಂದ ಲೂಟಿ ಮಾಡಲಾದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಕುಕಿ ಬಂಡುಕೋರರಿಗೆ ಹಸ್ತಾಂತರಗೊಂಡಿರುವ ಸಾಧ್ಯತೆಯಿದೆ ಎಂದು ರಾಜ್ಯ ಸರಕಾರ ಮತ್ತು ಗುಪ್ತಚರ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾ ಈ ಎಚ್ಚರಿಕೆ ನೀಡಿದ್ದಾರೆ. ಶಸ್ತ್ರಾಸ್ತ್ರಗಳನ್ನು ಮರಳಿಸದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next