ಇಂಫಾಲ್: ಮಣಿಪುರದ ನೋನೆ ಜಿಲ್ಲೆಯ ಟುಫುಲ್ ಯಾರ್ಡ್ ನ ರೈಲ್ವೆ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಶನಿವಾರ (ಜುಲೈ 02) 24ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 18 ಮಂದಿ ಯೋಧರು ಸೇರಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಚಿತ್ರದುರ್ಗ: ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಶಿಕ್ಷಕ ಸ್ಥಳದಲ್ಲೇ ಸಾವು
ರಕ್ಷಣಾ ಕಾರ್ಯಾಚರಣೆಯಲ್ಲಿ ಈವರೆಗೆ ಟೆರಿಟೋರಿಯಲ್ ಆರ್ಮಿಯ 13 ಸಿಬ್ಬಂದಿ ಹಾಗೂ ಐವರು ನಾಗರಿಕರನ್ನು ರಕ್ಷಿಸಲಾಗಿದೆ. ಸುಮಾರು 33 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭೂ ಕುಸಿತದಿಂದಾಗಿ ಅವಶೇಷಗಳಡಿ ಹಲವಾರು ಮಂದಿ ಸಿಲುಕಿದ್ದು, ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್, ಟೆರಿಟೋರಿಯಲ್ ಆರ್ಮಿ ಮತ್ತು ಕೇಂದ್ರ, ರಾಜ್ಯ ವಿಪತ್ತು ನಿರ್ವಹಣಾ ತಂಡ ಅವಿರತವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ ಎಂದು ಅಧಿಕಾರಿಗಳು ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರೀ ಮಳೆ ಮತ್ತು ಇನ್ನಿತರ ಕಾರಣಗಳಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಭೂಕುಸಿತದಿಂದಾಗಿ ಅವಶೇಷಗಳಡಿ ಸಿಲುಕಿರುವ ದೇಹಗಳ ಪತ್ತೆಗಾಗಿ ವಾಲ್ ರೇಡಾರ್ ಅನ್ನು ಬಳಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಇದೇ ವೇಳೆ ಅಸ್ಸಾಂನಲ್ಲಿಯೂ ಪ್ರವಾಹ ಸ್ಥಿತಿ ಮುಂದುವರಿದಿದೆ. ರಾಜ್ಯದಲ್ಲಿ ಗುರುವಾರ 8 ಮಂದಿ ಸಾವನ್ನಪ್ಪಿದ್ದು, ಏಪ್ರಿಲ್ ನಿಂದ ಈವರೆಗೆ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 159ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.