ಇಂಫಾಲ: ಮಣಿಪುರ ಹೈಕೋರ್ಟ್ 2023 ಮಾರ್ಚ್ 27 ರಂದು ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ಶಿಫಾರಸು ಕಳುಹಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದ ತನ್ನ ವಿವಾದಾತ್ಮಕ ಆದೇಶದ ಪ್ಯಾರಾಗ್ರಾಫ್ ಅನ್ನು ಅಳಿಸಿ ಹಾಕಿದೆ.
ಹೈಕೋರ್ಟ್ ಆದೇಶವು ಮಣಿಪುರದಲ್ಲಿ ಭಾರೀ ಜನಾಂಗೀಯ ಹಿಂಸಾಚಾರಕ್ಕೆ ಕಾರಣವಾಗಿ ನೂರಾರು ಜನರ ಸಾವಿಗೆ ಕಾರಣವಾಗಿತ್ತು. ಬುಡಕಟ್ಟು ಕುಕಿ ಸಮುದಾಯವು ನ್ಯಾಯಾಲಯದ ನಿರ್ದೇಶನವನ್ನು ವಿರೋಧಿಸಿತ್ತು.
ನ್ಯಾಯಮೂರ್ತಿ ಗೊಲ್ಮೆಯ್ ಗೈಫುಲ್‌ಶಿಲು ಅವರ ಪೀಠವು, ”ಕಾನೂನಿನ ತಪ್ಪು ಕಲ್ಪನೆಯಲ್ಲಿ ತೀರ್ಪು ನೀಡಲಾಯಿತು, ಏಕೆಂದರೆ ಅರ್ಜಿದಾರರು ಈ ರಿಟ್ ಅರ್ಜಿಯ ವಿಚಾರಣೆಯ ಸಮಯದಲ್ಲಿ ಅವರ ಸತ್ಯ ಮತ್ತು ಕಾನೂನಿನ ತಪ್ಪು ಕಲ್ಪನೆಯಿಂದಾಗಿ ನ್ಯಾಯಾಲಯಕ್ಕೆ ಸರಿಯಾಗಿ ಸಹಾಯ ಮಾಡಲು ವಿಫಲರಾಗಿದ್ದಾರೆ” ಎಂದು ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಣಿಪುರದ ಬುಡಕಟ್ಟು ಸಂಘಟನೆಗಳಿಗೆ ಮಾರ್ಚ್ 27ರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿತ್ತು. ಇದನ್ನು ಅನುಸರಿಸಿ, ಆಲ್ ಮಣಿಪುರ ಬುಡಕಟ್ಟು ಒಕ್ಕೂಟದಿಂದ ಮನವಿ ಸಲ್ಲಿಸಲಾಗಿತ್ತು. ಈ ವರ್ಷ ಜನವರಿ 20 ರಂದು, ಹೈಕೋರ್ಟ್ ತನ್ನ ಮಾರ್ಚ್ 27 ರ ಆದೇಶವನ್ನು ಮಾರ್ಪಡಿಸಲು ಕೋರಿದ ಮರುಪರಿಶೀಲನಾ ಅರ್ಜಿಯನ್ನು ಅಂಗೀಕರಿಸಿದ ಬಳಿಕ ಪ್ರತಿಕ್ರಿಯೆಯನ್ನು ಕೋರಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು.