ಇಂಫಾಲ : ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮುಂದುವರಿದಿದ್ದು, ಸಧ್ಯ ಬಿಜೆಪಿಯ ಪ್ರಮುಖ ನಾಯಕರು ಮತ್ತು ಮುಖಂಡರ ಮನೆಗಳನ್ನೇ ಟಾರ್ಗೆಟ್ ಮಾಡಿಕೊಳ್ಳಲಾಗಿದ್ದು, ಭದ್ರತಾ ಪಡೆಗಳಿಗೆ ಹೊಸ ಸವಾಲು ಎದುರಾಗಿದೆ.
ಮೈತೇಯಿ ಮತ್ತು ಬುಡಕಟ್ಟು ಸಮುದಾಯಗಳ ನಡುವಿನ ಹಿಂಸಾತ್ಮಕ ಸಂಘರ್ಷಕ್ಕೆ ಹಿಂಸಾಚಾರಕ್ಕೆ ಹೊಸ ತಿರುವು ಎಂಬಂತೆ ಇಂಫಾಲ್‌ನಲ್ಲಿ ಕರ್ಫ್ಯೂ ಹೇರಿದ್ದರೂ ಗುರುವಾರ ರಾತೋರಾತ್ರಿ ಕೇಂದ್ರ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ರಂಜನ್ ಸಿಂಗ್ ಅವರ ಮನೆಗೆ ನುಗ್ಗಿದ 1,200 ಮಂದಿಯ ಗುಂಪೊಂದು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿತ್ತು. ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿತ್ತು.
ಇಂಫಾಲದಲ್ಲಿ ರಾತ್ರೋರಾತ್ರಿ ಭದ್ರತಾ ಪಡೆಗಳೊಂದಿಗೆ ಗುಂಪು ಘರ್ಷಣೆಯ ನಂತರ ಮಣಿಪುರದಲ್ಲಿ ಹೊಸ ಸುತ್ತಿನ ಹಿಂಸಾಚಾರದಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಗುಂಪುಗಳು ಬಿಜೆಪಿ ನಾಯಕರ ಮನೆಗಳಿಗೆ ಬೆಂಕಿ ಹಚ್ಚಲು ಯತ್ನಿಸಿದವು.
ಪ್ರತ್ಯೇಕ ಘಟನೆಗಳಲ್ಲಿ,ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಮತ್ತು ಚುರಾಚಂದ್‌ಪುರ ಜಿಲ್ಲೆಯ ಕಾಂಗ್ವೈನಲ್ಲಿ ರಾತ್ರಿಯಿಡೀ ಗುಂಡಿನ ದಾಳಿ ವರದಿಯಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇಂಫಾಲ್ ವೆಸ್ಟ್‌ನ ಇರಿಂಗ್‌ಬಾಮ್ ಪೊಲೀಸ್ ಠಾಣೆಯಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲು ಪ್ರಯತ್ನಿಸಲಾಗಿದೆ.
ಶಾಸಕ ಬಿಸ್ವಜೀತ್ ಅವರ ನಿವಾಸದ ಬಳಿ ಗುಂಪೊಂದು ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದು, RAF ಪಡೆಗಳು ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದು ಗುಂಪು ಮಧ್ಯರಾತ್ರಿಯ ನಂತರ ಸಿಂಜೆಮೈಯಲ್ಲಿ ಬಿಜೆಪಿ ಕಚೇರಿಯನ್ನು ಸುತ್ತುವರೆದಿತ್ತು.ಸೇನಾ ಪಡೆಗಳು ಗುಂಪನ್ನು ಚದುರಿಸಿದ ಕಾರಣ ಯಾವುದೇ ಹಾನಿ ಮಾಡಲು ಸಾಧ್ಯವಾಗಲಿಲ್ಲ.
ಮಧ್ಯರಾತ್ರಿ ಇಂಫಾಲ್ ನಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಅಧಿಕಾರಿಮಾಯುಮ್ ಶಾರದಾ ದೇವಿ ಅವರ ನಿವಾಸವನ್ನು ಗುಂಪು ಧ್ವಂಸ ಮಾಡಲು ಪ್ರಯತ್ನಿಸಿತು, ಆದರೆ ಅದನ್ನು ಸೇನೆ ಮತ್ತು ಆರ್‌ಎಎಫ್ ಆ ಯತ್ನವನ್ನು ತಡೆಯಿತು.
ಮಣಿಪುರ ವಿಧಾನಸಭಾ ಸ್ಪೀಕರ್ ತೊಕ್ಚೋಮ್ ಸತ್ಯಬರ್ತ ಸಿಂಗ್ ಅವರು ಶಾಸಕರೊಂದಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಹಿಂಸಾಚಾರ ಪೀಡಿತ ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ನಂತರ ಇತ್ತೀಚೆಗೆ ರಚಿಸಲಾದ ಶಾಂತಿ ಸಮಿತಿಯ ಮೇಲೆ ಸಭೆ ಕೇಂದ್ರೀಕೃತವಾಗಿದೆ.