ಉಡುಪಿ: ಮಣಿಪಾಲ ವಿ.ವಿ. ಮತ್ತು ಟಿ.ಎ.ಪೈಯವರು 1978ರಲ್ಲಿ ಸ್ಥಾಪಿಸಿದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ನಡುವೆ ಸ್ವ
ಉದ್ಯೋಗದ ಮೂಲಕ ಗ್ರಾಮೀಣ ಅಭಿವೃದ್ಧಿ ಸಾಧಿಸುವ ಒಪ್ಪಂದಕ್ಕೆ ಮಂಗಳವಾರ ಸಹಿ ಮಾಡಲಾಯಿತು.
ವಿ.ವಿ. ಕುಲಸಚಿವ ಡಾ| ನಾರಾಯಣ ಸಭಾಹಿತ್, ಬಿವಿಟಿ ನಿರ್ವಾಹಕ ವಿಶ್ವಸ್ತ ಕೆ.ಎಂ.ಉಡುಪ ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಿದರು. ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕ ಟಿ.ಸತೀಶ್ ಯು. ಪೈ, ವಿ.ವಿ. ಸಹಕುಲಾಧಿಪತಿ ಡಾ|ಎಚ್.ಎಸ್.ಬಲ್ಲಾಳ್, ಕುಲಪತಿ ಡಾ|ಎಚ್.ವಿನೋದ ಭಟ್ ಉಪಸ್ಥಿತರಿದ್ದರು.
ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣವೇ ಮೊದಲಾದ ಬಿವಿಟಿಯ ಉದ್ದೇಶವನ್ನು ಸಾಕಾರಗೊಳಿಸಲು ಮೂಲಸೌಕರ್ಯ, ತಾಂತ್ರಿಕ ಮಾರ್ಗದರ್ಶನ, ಮಾನವ ಸಂಪನ್ಮೂಲದ ಮೂಲಕ ವಿ.ವಿ. ದೀರ್ಘಕಾಲೀನ ಪ್ರೋತ್ಸಾಹವನ್ನು ನೀಡಲಿದೆ. ವಿ.ವಿ.ಯು ಗ್ರಾಮೀಣಾಭಿವೃದ್ಧಿ, ನವೀಕರಿಸ ಬಹುದಾದ ಇಂಧನ, ಸಮುದಾಯ ಅಭಿವೃದ್ಧಿ, ಪಠ್ಯಕ್ರಮ, ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರಲ್/ ಸಂಶೋಧನೆ, ಸರ್ಟಿ ಫಿಕೇಟ್ ಕೋರ್ಸುಗಳನ್ನು ಆರಂಭಿಸಲಿದೆ. ಬಿವಿಟಿ ಮೂಲಸಂಪನ್ಮೂಲ, ಸೌಲಭ್ಯಗಳನ್ನು ನೀಡಲಿದೆ.