Advertisement

ಮಣಿಪಾಲ- ಉಡುಪಿ ರಾ.ಹೆ.: ಅಪಘಾತಗಳಿಗೆ ಆಹ್ವಾನ

12:09 AM May 07, 2019 | sudhir |

ಉಡುಪಿ: ಮಣಿಪಾಲ-ಉಡುಪಿ ನಿರ್ಮಾಣದ ಹಂತದಲ್ಲಿರುವ ರಾ.ಹೆ. 169ಎ ಕಾಮಗಾರಿಯ ದೋಷದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.

Advertisement

ಈ ಹಿಂದಿನ ಮಣಿಪಾಲ- ಉಡುಪಿ ರಸ್ತೆಯಲ್ಲಿ ವಾಹನ ದಟ್ಟಣೆ ನಿಗದಿತ ಸಮಯದಲ್ಲಿ ಮಾತ್ರವಿತ್ತು. ಇದೀಗ ಕಾಮಗಾರಿ ಆರಂಭವಾದ ಬಳಿಕ ದಿನಪೂರ್ತಿ ಟ್ರಾಫಿಕ್‌ ಸಮಸ್ಯೆ ಎದುರಾಗಿದೆ. ವಾಹನ ಸವಾರರಿಗೆ 10 ಕಿ.ಮೀ. ವೇಗದಲ್ಲಿ ವಾಹನವನ್ನು ಚಲಾಯಿಸಲೂ ಸಾಧ್ಯವಾಗುತ್ತಿಲ್ಲ.

ಸೂಚನೆ ಫ‌ಲಕವೇ ಇಲ್ಲ
ಮಣಿಪಾಲದ ಹೆದ್ದಾರಿ ಕಾಮಗಾರಿ ಆರಂಭದಲ್ಲಿ ಕಾಮಗಾರಿ ಮಾಡುತ್ತಿರುವ ಪ್ರದೇಶದಲ್ಲಿ ಸೂಚನಾ ಫ‌ಲಕ ಅಳವಡಿಸಲಾಗಿತ್ತು. ಅನಂತರ ಅವಧಿಯಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಎಚ್ಚರಿಕೆ ಸೂಚನಾ ಫ‌ಲಕಗಳು ಕಣ್ಮರೆಯಾಗಿವೆ.

ಏಳು ಪ್ರಕರಣಗಳು
ಕಾಮಗಾರಿ ದೋಷದಿಂದ ಇಬ್ಬರು ಈಗಾಗಲೇ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 8 ರಸ್ತೆ ಅಪಘಾತಗಳು ಸಂಭವಿಸಿದ್ದು, ವಾಹನ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತಕ್ಕೆ ಆಹ್ವಾನ
ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ಒಂದು ರಸ್ತೆ ಎತ್ತರ ಹಾಗೂ ಇನ್ನೊಂದು ರಸ್ತೆ ಕುಗ್ಗಿಸಲಾಗಿದೆ.ಇಲ್ಲಿ ಯಾವುದೇ ತಡೆಗೋಡೆ ನಿರ್ಮಿಸಿಲ್ಲ. ಇದ‌ರಿಂದಾಗಿ ಉಡುಪಿಯಿಂದ ಮಣಿಪಾಲ ಕಡೆ ಸಂಚರಿಸುವ ವಾಹನ ಸವಾರ ಕೊಂಚ ಎಚ್ಚರ ತಪ್ಪಿದರೂ ವಾಹನ ಕೆಳ ರಸ್ತೆಗೆ ಬೀಳುವುದು ಖಂಡಿತ. ಇನ್ನೂ ಮಣಿಪಾಲದ ಎಂಐಟಿ ಬಳಿ ಸಹ ಇದೇ ಸಮಸ್ಯೆಯಿದೆ.

Advertisement

ಮಳೆಗಾಲದಲ್ಲಿ ತೊಂದರೆ
ಮಳೆಗಾಲದ ಒಳಗಾಗಿ ಕಾಮಗಾರಿ ಮುಗಿಯಬೇಕು. ಇಲ್ಲವೇ ರಸ್ತೆ ಕಾಮಗಾರಿ ಒಂದು ಸುರಕ್ಷಿತ ಹಂತಕ್ಕೆ ತಲುಪಬೇಕು. ಒಮ್ಮೆ ಮಳೆ ಶುರುವಾದರೆ ಕಾಮಗಾರಿ ಮುಂದುವರಿಸುವುದು ಕಷ್ಟಸಾಧ್ಯವಾಗಲಿದೆ.

ಮುಗಿಯದ ಗೋಳು
ರಸ್ತೆ ಕಾಮಗಾರಿ ಆರಂಭಗೊಂಡು 4 ತಿಂಗಳು ಕಳೆದಿವೆ. ಅಲ್ಲಲ್ಲಿ ರಸ್ತೆ ಅಗೆದಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯಲ್ಲಿ ಉಂಟಾಗುವ ಧೂಳಿನಿಂದಾಗಿ ಶ್ವಾಸಕೋಶ ತೊಂದರೆ ಕೂಡ ಉಂಟಾಗುತ್ತಿದೆ.

ಕೈಗೊಳ್ಳಬೇಕಾದ ಸುರಕ್ಷಾ ಕ್ರಮ
– ಕಾಮಗಾರಿ ಸ್ಥಳದಲ್ಲಿ ನಿಗದಿತ ಅಂತರದಲ್ಲಿ ರಿಫ್ಲೆಕ್ಟರ್‌ ಇರುವ ಬ್ಯಾರಿಕೇಡ್‌ ಅಳವಡಿಸಬೇಕು.

– ಕಾಮಗಾರಿ ಸ್ಥಳದಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದರೆ ಮಿಣುಕು ದೀಪ ಬೆಳಗಿಸಬೇಕು.

– ಪರ್ಯಾಯ ಸಂಚಾರದ ರಸ್ತೆಗಳ ಬಗ್ಗೆ ಸೂಕ್ತ ಮಾಹಿತಿ ನೀಡುವ ಫ‌ಲಕವಿರಬೇಕು.

– ಗುತ್ತಿಗೆದಾರರು ನಿಯಮಾನುಸಾರ ಸುರಕ್ಷಾ ಕ್ರಮ ಕೈಗೊಳ್ಳಬೇಕು.

– ಕಾಮಗಾರಿ ಸ್ಥಳದಲ್ಲಿ ಸಿಬಂದಿ ನಿಯೋಜಿಸಿ ಕ್ರಮವಹಿಸಬೇಕು.

ಪ್ರಕರಣ ದಾಖಲು
ಅಪಘಾತ ಹಾಗೂ ಜೀವ ಹಾನಿಗೆ ಸಂಬಂಧಿಸಿದಂತೆ ಕಾಮಗಾರಿ ಗುತ್ತಿಗೆದಾರರ ಹಾಗೂ ಎಂಜಿನಿಯರ್‌ ಮೇಲೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.
-ಪ್ರಶಾಂತ ಜತ್ತನ್‌, ಸ್ಥಳೀಯರು

ಫ‌ಲಕ ಅಳವಡಿಸಿ
ಮಣಿಪಾಲದ ಮಾರ್ಗವಾಗಿ ಸಂಚರಿಸಲು ಭಯವಾಗುತ್ತಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಪರ್ಯಾಯ ಸಂಚಾರದ ರಸ್ತೆಗಳ ಯಾವುದೇ ರೀತಿಯಾದ ಫ‌ಲಕಗಳು ಅಳವಡಿಸಿಲ್ಲ.
-ರವೀಂದ್ರ, ವಾಹನ ಸವಾರ

Advertisement

Udayavani is now on Telegram. Click here to join our channel and stay updated with the latest news.

Next