ಮಣಿಪಾಲ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಿದ್ಧಾಂತ್ ಫೌಂಡೇಶನ್ ಆಶ್ರಯದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಸಹ ಪ್ರಾಯೋಜಕತ್ವದಲ್ಲಿ ವೃತ್ತಿಪರ ವಿದ್ಯಾರ್ಥಿಗಳಿಗಾಗಿ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ರವಿವಾರ “ಜ್ಞಾನ ಮಂಥನ’ ಎನ್ನುವ ವಿಶೇಷ ಅಧಿವೇಶನ ಆಯೋಜಿಸಲಾಯಿತು.
ಅದ್ವಿತ್ ಐ.ಟೆಕ್ ಸಂಸ್ಥಾಪಕ ಕೃಷ್ಣ ಉಪಾಧ್ಯಾಯ ಮಾತನಾಡಿ, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆ, ತಂತ್ರಜ್ಞಾನಗಳೊಂದಿಗೆ ಒಗ್ಗಿಕೊಂಡಾಗ ಮಾತ್ರ ಹೊಸತನವನ್ನು ಕಾಣಲು ಸಾದ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಗೋಪಾಲಕೃಷ್ಣ ಭಟ್ ಅವರು, ಉದ್ಯೋಗಾವಕಾಶಗಳು ಜಾಗತಿಕವಾಗಿ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಿರುವಾಗ ವಿದ್ಯಾರ್ಥಿಗಳೂ ತಮ್ಮ ಅವಕಾಶಗಳ ಬಗ್ಗೆ, ನೂತನ ಕಲಿಕೆಗಳ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
ತ್ರಿಶಾ ಸಮೂಹ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರ ಡಾ| ನಾರಾಯಣ್ ಕಾಯರಕಟ್ಟೆ, ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ನಾರಾಯಣ ರಾವ್ ಉಪಸ್ಥಿತರಿದ್ದರು.
ವೃತ್ತಿಪರರೊಂದಿಗೆ ಸಂವಾದ, ಪೇಪರ್ ಪ್ರಸೆಂಟೇಶನ್, ಮೋಟಿವೇಶನ್, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲೆಯಲ್ಲಿ ಹೊಸತಾಗಿ ವಿಭಿನ್ನ ರೀತಿಯಲ್ಲಿ ಆಯೋಜನೆಯಾದ ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ಮಂಗಳೂರಿನ 800ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಗುರುಪ್ರಸಾದ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಶಾನಲ್ ಡಿ’ಸೋಜಾ, ನಿಶಿತಾ ಶೆಟ್ಟಿ, ಸಮೀಕ್ಷಾ ನಿರೂಪಿಸಿ, ವಂದಿಸಿದರು.