Advertisement
ಮಣ್ಣಪಳ್ಳ ಕೆರೆಯ ಸುತ್ತ 10 ವರ್ಷದ ಹಿಂದೆಯೇ ಒಳ್ಳೆಯ ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ. ಟ್ರ್ಯಾಕ್ ಸುಮಾರು ಐದು ಅಡಿಗಳಷ್ಟು ಅಗಲವಿದೆ. ಇಲ್ಲಿ ನಡಿಗೆಗೆ ಮಣಿಪಾಲದ ಪ್ರತಿಷ್ಠಿತ ಸಂಸ್ಥೆಗಳ ಪ್ರಮುಖರು, ಉದ್ಯೋಗಿಗಳು, ಗೃಹಿಣಿಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಬರುತ್ತಾರೆ. ಆದರೆ, ಇಲ್ಲಿನ ದೊಡ್ಡ ಸಮಸ್ಯೆ ಎಂದರೆ ಹೆಚ್ಚಿನ ಕಡೆಗಳಲ್ಲಿ ಟ್ರ್ಯಾಕ್‌ನ ನಿರ್ವಹಣೆ ಸರಿಯಾಗಿಲ್ಲ. ಇಲ್ಲಿ ನಡಿಗೆ ಟ್ರ್ಯಾಕ್‌ನ ಸುತ್ತ ಭಯದ ಬೇಲಿ ಆವರಿಸಿದೆ.
Related Articles
Advertisement
ವಾಕಿಂಗ್ ಟ್ರ್ಯಾಕ್‌ನಲ್ಲಿ ನಾಯಿಗಳ ಕಾಟ ವಾಕಿಂಗ್ ಮಾಡುವವರ ಪಾಲಿಗೆ ನಾಯಿಗಳು ಅತ್ಯಂತ ದೊಡ್ಡ ಭಯೋತ್ಪಾದಕರು! ಟ್ರ್ಯಾಕ್‌ನ ಹಲವು ಭಾಗಗಳಲ್ಲಿ ನಾಲ್ಕೈದು ನಾಯಿಗಳು ದಾರಿಗೆ ಅಡ್ಡವಾಗಿ ಮಲಗಿಕೊಂಡಿರುತ್ತವೆ. ಇವುಗಳನ್ನು ದಾಟಿಕೊಂಡೇ ಮುಂದೆ ಸಾಗಬೇಕಾದ ಅನಿವಾರ್ಯತೆ. ಕೆಲವೊಂದು ನಾಯಿಗಳು ನಿದ್ದೆಯಲ್ಲಿದ್ದಂತೆ ಮಲಗಿರುತ್ತವೆ. ಆದರೆ, ಹತ್ತಿರ ಬರುತ್ತಿದ್ದಂತೆಯೇ ಗುರ್ ಎನ್ನಲು ಆರಂಭಿಸುತ್ತವೆ. ಕೆಲವು ತಣ್ಣಗೆ ಮಲಗಿರುತ್ತವೆ. ಆದರೆ, ಯಾವಾಗ ಅವು ಮೈಮೇಲೆ ಎಗರುತ್ತವೋ ಎನ್ನುವ ಭಯದಲ್ಲೇ ನಡೆಯಬೇಕು. ಇಲ್ಲಿಯೇ ಮನೆ ಮಾಡಿಕೊಂಡ ನಾಯಿಗಳು ಒಂದೆಡೆಯಾದರೆ ಆಗಾಗ ಹೊಸ ಹೊಸ ನಾಯಿಗಳನ್ನು ಪಳ್ಳದಲ್ಲಿ ಬಿಟ್ಟು ಹೋಗುವ ಪರಿಪಾಠವೂ ಇದೆ. ಕೆಲವು ನಾಯಿಗಳು ನಡೆಯುವವರನ್ನೇ ಹಿಂಬಾಲಿಸುತ್ತವೆ. ಕೆಲವೊಮ್ಮೆ ಮೂರ್ನಾಲ್ಕು ಸೇರಿ ಬೆದರಿಸುತ್ತವೆ. ಈ ನಾಯಿಗಳ ಕಾಟದಿಂದ ರಕ್ಷಿಸಿಕೊಳ್ಳಲು ಕೆಲವರು ದೊಡ್ಡ ಕೋಲುಗಳನ್ನು, ಮಡಚಬಲ್ಲ ಕೋಲುಗಳನ್ನು ತರಬೇಕಾದ ಸ್ಥಿತಿ ಇದೆ. ಇದರ ನಡುವೆ ಕೆಲವು ನಡಿಗೆದಾರರು ಟ್ರ್ಯಾಕ್‌ನಲ್ಲೇ ನಾಯಿಗಳಿಗೆ ಬಿಸ್ಕತ್ತು ಹಾಕುವ ಮೂಲಕ ಅವುಗಳಿಗೆ ಸಲುಗೆ ನೀಡುತ್ತಾರೆ. ಇಂಥವರಿಂದಾಗಿ ನಾಯಿಗಳು ಪಳ್ಳವನ್ನೇ ಖಾಯಂ ವಾಸ ಮಾಡಿಕೊಂಡಿವೆ. ಕೆರೆಯ ಸುತ್ತ ಮಾತ್ರವಲ್ಲ, ಹಲವಾರು ಮಂದಿ ಆಟವಾಡುವ ಕ್ರೀಡಾಂಗಣದಲ್ಲಂತೂ 20ರಷ್ಟು ನಾಯಿಗಳು ಮಲಗಿಕೊಂಡು ಮಕ್ಕಳು ಮತ್ತು ಒಬ್ಬೊಬ್ಬರೇ ಹೋದವರನ್ನು ಬೆದರಿಸುತ್ತವೆ. ನಡಿಗೆದಾರರ ಬೇಡಿಕೆಗಳು
01 ಕೆಲವೊಂದು ತಿರುವುಗಳಲ್ಲಿ ತುಂಬಾ ಪೊದೆಗಳು ಬೆಳೆದಿವೆ. ಇವುಗಳನ್ನು ಸ್ವತ್ಛಗೊಳಿಸಿದರೆ ನಿರ್ಭಯವಾಗಿ ಓಡಾಡಬಹುದು.
02ಕೆಲವು ಕಡೆ ನಾಯಿಗಳು ಟ್ರ್ಯಾಕ್‌ನಲ್ಲೇ ಮಲಗಿರುತ್ತವೆ. ಇವುಗಳನ್ನು ಓಡಿಸಿದರೆ ತಿರುಗಿಬೀಳುತ್ತವೆ. ನಾಯಿಗಳ ಮೇಲೆ ನಿಗಾ ಬೇಕು.
03 ಕೆಲವು ನಡಿಗೆದಾರರು ನಾಯಿಗಳಿಗೆ ಬಿಸ್ಕೆಟ್ ಆಸೆ ಹುಟ್ಟಿಸುತ್ತಾರೆ. ಅವರನ್ನು ಪ್ರಶ್ನೆ ಮಾಡುವವರು ಯಾರೂ ಇಲ್ಲ.
04ವಾಕಿಂಗ್ ವೇಳೆ ಮಕ್ಕಳನ್ನು ಕರೆದುಕೊಂಡು ಬಂದರೆ ಹೆಚ್ಚುವರಿ ಎಚ್ಚರಿಕೆ ಬೇಕು, ಮಕ್ಕಳು ಓಡುವಾಗ ನಾಯಿಗಳು ಬೆದರಿಸುತ್ತವೆ.
05 ಮಣ್ಣಪಳ್ಳದಲ್ಲಿ ತುರ್ತಾಗಿ ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡಬೇಕಾಗಿದೆ. ಹಾಳಾಗಿರುವುದು ಸರಿ ಆಗಬೇಕು. ವ್ಯವಸ್ಥಿತ ಟಾಯ್ಲೆಟ್ ವ್ಯವಸ್ಥೆ ಇಲ್ಲದೆ ಸಂಕಟ
ಮಣ್ಣಪಳ್ಳದ ನಡಿಗೆದಾರರಿಗೆ ಕಾಡುವ ಅತಿ ದೊಡ್ಡ ಸಮಸ್ಯೆ ಏನೆಂದರೆ ಸರಿಯಾದ ಟಾಯ್ಲೆಟ್ ಇಲ್ಲದಿರುವುದು. ಬೆಳಗ್ಗೆ ನಡಿಗೆಗೆ ಬರುವವರು ಸಾಮಾನ್ಯವಾಗಿ ಸರಿಯಾಗಿ ನೀರು ಕುಡಿದುಕೊಂಡು ಬರುತ್ತಾರೆ. ಅಂಥವರಿಗೆ ನಡಿಗೆಯ ವೇಳೆ ಮೂತ್ರ ವಿಸರ್ಜನೆಯ ಅಗತ್ಯ ಕಾಡುತ್ತದೆ. ಇನ್ನು ಕೆಲವರು ಪಳ್ಳಕ್ಕೆ ನಾಲ್ಕಾರು ಸುತ್ತು ಬರುತ್ತಾರೆ. ಅವರಿಗೂ ಈ ಅವಧಿಯಲ್ಲಿ ಪ್ರಕೃತಿಯ ಕರೆಗೆ ಓಗೊಡುವ ಧಾವಂತ ಸೃಷ್ಟಿಯಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಪಳ್ಳಕ್ಕೆ ಬರುವ ಹಿರಿಯರಿಗೆ ಮೂತ್ರ ಕಟ್ಟಿಕೊಳ್ಳುವುದು ಕಷ್ಟದ ಕೆಲಸ. ಮಹಿಳೆಯರಿಗೆ ಅವರದ್ದೇ ಆದ ಸಮಸ್ಯೆಗಳಿಂದಾಗಿ ವಾಷ್ ರೂಮ್‌ನ ಆವಶ್ಯಕತೆ ಇರುತ್ತದೆ. ನಿಜವೆಂದರೆ ಪಳ್ಳದ ನಾಲ್ಕೂ ದಿಕ್ಕಿನಲ್ಲಿ ಶೌಚಾಲಯಗಳ ವ್ಯವಸ್ಥೆ ಇರಬೇಕಿತ್ತು. ಆದರೆ, ದುರಂತವೆಂದರೆ ಇಲ್ಲಿ ಒಂದೇ ಒಂದು ಸರಿಯಾದ ಶೌಚಾಲಯವಿಲ್ಲ. ಬೋಟಿಂಗ್ ತಾಣದ ಪಕ್ಕದಲ್ಲಿ ಟಾಯ್ಲೆಟ್ ಎಂದು ದೊಡ್ಡ ಬೋರ್ಡ್ ಹಾಕಲಾಗಿದೆ. ಆದರೆ, ಒಳಗೆ ಹೋಗಿ ನೋಡಿದರೆ ಆ ಟಾಯ್ಲೆಟ್‌ಗೆ ಬಾಗಿಲೇ ಇಲ್ಲ. ಅಲ್ಲಿ ನೀರಿನ ವ್ಯವಸ್ಥೆ ಇಲ್ಲ. ಹೆಚ್ಚು ಹೇಳಬೇಕೆಂದರೆ ಕಮೋಡೇ ಇಲ್ಲ! ಆಸರೆಯಾಗಿದ್ದ ರೇಲಿಂಗ್ಸ್ ಮಾಯ!
ಮಣ್ಣಪಳ್ಳಕ್ಕೆ ಅನಂತನಗರ ಭಾಗದಿಂದ ಪ್ರವೇಶ ಮಾಡುವ ಇಳಿಜಾರಿನಲ್ಲಿ ಹಿರಿಯ ನಾಗರಿಕರಿಗೆ ಹತ್ತಿಳಿಯಲು ಅನುಕೂಲವಾಗುವ ರೇಲಿಂಗ್ಸ್ ಅಳವಡಿಸಲಾಗಿತ್ತು. ಆದರೆ, ಅದನ್ನು ಯಾರೋ ಮುರಿದು ಹಾಕಿದ್ದಲ್ಲದೆ, ಈಗ ಅದು ಮಾಯವೇ ಆಗಿ ಹೋಗಿದೆ!