ಉಡುಪಿ: ಸಮಯ ಮೀರಿ ಪಬ್‌ಗಳು ಕಾರ್ಯಚರಿಸುತ್ತಿದ್ದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿನ ಅಕ್ರಮ ಪಬ್‌ನ ಡಿಜೆ ಸದ್ದಿಗೆ ಶನಿವಾರ ಮಣಿಪಾಲ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಣಿಪಾಲದಲ್ಲಿ ಪ್ರವಾಸೋದ್ಯಮ ಇಲಾಖೆ ನೀಡುವ ಸಿಎಲ್.7 ಪರವಾನಿಗೆಯ ಹೆಸರಿನಲ್ಲಿ ಅನಧಿಕೃತವಾಗಿ ಆರು ಪಬ್ ಕಾರ್ಯಾಚರಿಸುತ್ತಿತ್ತು. ಈ ಪಬ್‌ಗಳಲ್ಲಿ ರಾಜಕೀಯ ನಾಯಕರ ಬೆಂಬಲದಿಂದ ತಡರಾತ್ರಿವರೆಗೂ ಮದ್ಯ, ಗಾಂಜಾ, ಧ್ವನಿವರ್ಧಕ ಬಳಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ ಒಂದರಂದು ಉಡುಪಿ ಜಿಲ್ಲಾ ಭೇಟಿ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ವಾರಾಂತ್ಯದಲ್ಲಿ ಮಣಿಪಾಲದಲ್ಲಿ ಪಬ್‌ಗಳಿಗೆ ನಿಗದಿತ ಅವಧಿ ರಾತ್ರಿ 12 ಗಂಟೆಯ ಒಳಗೆ ಮುಚ್ಚಲು ಪೊಲೀಸರು ತಾಕೀತು ಮಾಡಿದ್ದಾರೆ. ಮದ್ಯ ಹೊರತು ಯಾವುದೇ ಧ್ವನಿವರ್ಧಕ ಬಳಕೆ ಮಾಡದಂತೆ ಖಡಕ್ ಸೂಚನೆ ನೀಡಿದ್ದಾರೆ.
ತಡರಾತ್ರಿ ಮೂರು ಕಡೆ ಚೆಕ್ ಪೋಸ್ಟ್
ಮಣಿಪಾಲದ ಜಿಲ್ಲಾಧಿಕಾರಿ ರಸ್ತೆ, ಸಿಂಡಿಕೇಟ್ ವೃತ್ತ, ಎಂಐಟಿ ರಸ್ತೆಗಳಲ್ಲಿ ವಾಹನ ತಪಾಸಣೆ ಮಾಡಲಾಗುವುದು. ಈ ಸಂದರ್ಭದಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್, ಓವರ್ ಸ್ಪೀಡ್ ವಾಹನಗಳ ತಡೆದು ಕೇಸು ದಾಖಲಿಸಲಾಗುವುದು ಎಂದು ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.