Advertisement

Manipal: ಐವರು ಸಾಧಕರಿಗೆ ಇಂದು ಹೊಸ ವರ್ಷ ಪ್ರಶಸ್ತಿ ಪ್ರದಾನ

10:55 AM Jan 19, 2024 | Team Udayavani |

ಮಣಿಪಾಲ: ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌, ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌, ಮಣಿಪಾಲ್‌ ಎಜುಕೇಶನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌, ಡಾ| ಟಿ.ಎಂ.ಎ. ಪೈ ಫೌಂಡೇಶನ್‌ ಮತ್ತು ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ. ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೊಡಮಾಡುವ “ಹೊಸ ವರ್ಷ ಪ್ರಶಸ್ತಿ-2024’ಕ್ಕೆ ವಿವಿಧ ಕ್ಷೇತ್ರಗಳ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಜ. 19ರ ಸಂಜೆ 5.30ಕ್ಕೆ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

Advertisement

ಸಾಧಕರ ಪರಿಚಯ

ಬ್ಯಾಂಕರ್‌ ಡಾ| ಎಂ. ನರೇಂದ್ರ:

1954ರ ಜುಲೈ 12ರಂದು ಜನಿಸಿದ ಡಾ| ನರೇಂದ್ರ ವಾಣಿಜ್ಯ ಮತ್ತು ಕಾನೂನು ಪದವೀಧರರು. ಚೆನ್ನೈಯ ಹಿಂದೂಸ್ಥಾನ್‌ ವಿ.ವಿ. ಮತ್ತು ಕೊಯಮತ್ತೂರಿನ ಕಲ್ಪಗಂ ವಿ.ವಿ.ಯಲ್ಲಿ ಡಾಕ್ಟರೆಟ್‌ ಪಡೆದಿದ್ದಾರೆ. 1975ರಿಂದ 2008ರ ವರೆಗೆ ಕಾರ್ಪೊರೇಶನ್‌ ಬ್ಯಾಂಕ್‌ನಲ್ಲಿ ಚೀಫ್‌ ಜನರಲ್‌ ಮ್ಯಾನೇಜರ್‌, ಬ್ಯಾಂಕ್‌ ಆಫ್‌ ಇಂಡಿಯದಲ್ಲಿ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಹೀಗೆ ಉನ್ನತ ಹುದ್ದೆಗಳನ್ನು ನಿರ್ವಹಿಸಿ ಮುಂದೆ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿ ವಿತ್ತೀಯ ಕ್ಷೇತ್ರದ ಮಹತ್ವದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕಾರ್ಪೋರೆಟ್‌ ಆಡಳಿತದ ಸಲಹೆಗಾರರಾಗಿ, ಉದ್ಯಮದ ಕಾರ್ಯತಂತ್ರದ ರೂಪಕರಾಗಿ, ಮಾನವಸಂಪದ ಅಭಿವೃದ್ಧಿಯ ಹರಿಕಾರರಾಗಿ, ಸಾಂಸ್ಥಿಕ ಪ್ರಗತಿಗೆ ಪ್ರೇರಕರಾಗಿ, ತರಬೇತಿ ಮತ್ತು ಅಭಿವೃದ್ಧಿಯ ತಜ್ಞರಾಗಿ, ಮೌಲ್ಯವರ್ಧನೆಯ ಪ್ರೋತ್ಸಾಹಕರಾಗಿ, ವಿತ್ತೀಯ ಕ್ಷೇತ್ರದ ಅನುಭವಿ ಮಾರ್ಗದರ್ಶಕರಾಗಿ, ಸಾಲ ಪ್ರಕ್ರಿಯೆಯಿಂದ ಆಗುವ ತೊಂದರೆಗಳನ್ನು ಕಡಿಮೆಗೊಳಿಸುವ ಪರಿಣತರಾಗಿ ಆಡಳಿತ ವಿಭಾಗದಲ್ಲಿ ಕೌಶಲ ಹೊಂದಿದ್ದಾರೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕರ್ನ ಸದಸ್ಯರೂ ಆಗಿದ್ದು, ಮುಂಬಯಿಯಲ್ಲಿ ನೆಲೆಸಿದ್ದಾರೆ.

ವೈದ್ಯ ಡಾ| ಎಚ್‌. ಮಂಜುನಾಥ ಹಂದೆ:

Advertisement

ಮಣಿಪಾಲದ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಜನರಲ್‌ ಮೆಡಿಸಿನ್‌ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿರುವ ಡಾ| ಎಚ್‌. ಮಂಜುನಾಥ ಹಂದೆ ಅವರು ಆರೋಗ್ಯಸೇವಾ ಕ್ಷೇತ್ರದಲ್ಲಿ ವೈದ್ಯರಾಗಿ ಮತ್ತು ಪ್ರಾಧ್ಯಾಪಕರಾಗಿ ಸಹೋದ್ಯೋಗಿಗಳ, ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಪ್ರೀತಿಗೆ ಪಾತ್ರರಾದವರು. 1959ರ ಜೂ. 1ರಂದು ಕೋಟದಲ್ಲಿ ಜನಿಸಿದ ಅವರು ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಪದವಿ, ಎಂಡಿ ಪದವಿ ಪೂರೈಸಿ ನಿಮ್ಹಾನ್ಸ್‌ನಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿ ಮುಂದೆ ಬಿಇಎಲ್‌ ಆಸ್ಪತ್ರೆಯಲ್ಲಿ ವೃತ್ತಿಜೀವನ ಮುಂದುವರಿಸಿದರು. 1988ರಲ್ಲಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿಗೆ ವೈದ್ಯ-ಪ್ರಾಧ್ಯಾಪಕನಾಗಿ ಸೇರಿದರು. ಜನರಲ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥರಾಗಿ ಸಮರ್ಥವಾಗಿ ಹೊಣೆಯನ್ನು ನಿರ್ವಹಿಸಿದರು. ಬಳಿಕ ಮಲೇಷ್ಯಾದಲ್ಲಿ ಮಲೇಕಾ-ಮಣಿಪಾಲ್‌ ಮೆಡಿಕಲ್‌ ಕಾಲೇಜಿನ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿದ್ದರು. ಕೆಎಂಸಿ ಮತ್ತು ವಿ.ವಿ.ಯ ಪ್ರಮುಖ ಸಮಿತಿಗಳ ಕಾರ್ಯನಿರ್ವಹಣೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

ನಟಿ, ನಿರ್ಮಾಪಕಿ ಡಾ| ಜಯಮಾಲಾ:

ತುಳು, ಕನ್ನಡ, ತಮಿಳು, ತೆಲುಗು, ಮಲಯಾಳ ಭಾಷೆಗಳ ಚಲನಚಿತ್ರಗಳಲ್ಲಿ ನಟಿಯಾಗಿ 70-80ರ ದಶಕದಲ್ಲಿ ಮನೆಮಾತಾಗಿದ್ದ ಡಾ| ಜಯಮಾಲಾ ಮೂಲತಃ ದಕ್ಷಿಣ ಕನ್ನಡದವರು. 1959ರ ಫೆ. 28ರಂದು ಪಣಂಬೂರಿನಲ್ಲಿ ಜನಿಸಿದ ಅವರ ಮೂಲ ಹೆಸರು ಜಯಂತಿ. 13ರ ಹರೆಯದಲ್ಲಿ “ಕಾಸ್‌ದಾಯೆ ಕಂಡನಿ’ ಚಿತ್ರದ ಮೂಲಕ ಕಲಾಬದುಕನ್ನು ಪ್ರವೇಶಿಸಿ, ಮೊದಲ ಚಿತ್ರದಲ್ಲಿಯೇ “ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದರು. 75 ಚಿತ್ರಗಳಲ್ಲಿ ನಟಿಸಿದ್ದಾರೆ. 1986ರಲ್ಲಿ ಈ ವರೆಗೆ 5 ಚಿತ್ರಗಳನ್ನು ತಯಾರಿಸಿದ್ದಾರೆ. ಅವರ ನಿರ್ಮಾಣದ ಚಿತ್ರ “ತಾಯಿ ಸಾಹೇಬ’ 24 ರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳನ್ನು ಪಡೆದಿದೆ. ಪ್ರತಿಷ್ಠಿತ “ಸ್ವರ್ಣಕಮಲ’ ಪ್ರಶಸ್ತಿಗೂ ಪಾತ್ರವಾಗಿದೆ. “ತುತ್ತೂರಿ’ ಮಕ್ಕಳ ಚಲನಚಿತ್ರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಬೆಂಗಳೂರು ವಿ.ವಿ.ಯಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪೂರೈಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಹಿತ ವಿವಿಧ ಆಯ್ಕೆ ಸಮಿತಿಯಲ್ಲೂ ಅಧ್ಯಕ್ಷೆ, ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಜಯಮಾಲಾ ಅವರ ಪತಿ ರಾಮಚಂದ್ರ ಎಚ್‌.ಎಂ. ಪ್ರಸಿದ್ಧ ಸಿನೆಮಾಟೋಗ್ರಾಫರ್‌.

ಕೃಷಿ ಋಷಿ ಬಿ.ಕೆ. ದೇವರಾವ್‌:

ಕೇದಾರ ಕೃಷಿ ಋಷಿ ಬಿ.ಕೆ. ದೇವರಾವ್‌ ಅವರು ಭತ್ತದ ಬೆಳೆಯ ನಂಟನ್ನು ಬಿಡದೇ ಬೆಳೆದುಕೊಂಡು ಬಂದವರು. ಸಾಗುವಳಿ ಮತ್ತು ಪಶುಸಂಗೋಪನೆ ಭಾರತೀಯ ಜೀವನಪದ್ಧತಿಯ ಅವಿಭಾಜ್ಯ ಅಂಗಗಳು ಎಂಬುದಕ್ಕೆ ದೃಷ್ಟಾಂತವಾಗಿ ಬದುಕುತ್ತಿರುವ ದೇವರಾಯರು 1945ರ ಮೇ 31ರಂದು ಜನಿಸಿದ್ದು, ಬೆಳ್ತಂಗಡಿಯ ಮಿತ್ತಬಾಗಿಲು ಗ್ರಾಮದಲ್ಲಿ ವಾಸವಾಗಿದ್ದಾರೆ. 3 ಸಾವಿರ ಮುಡಿ ಅಕ್ಕಿ ಬೆಳೆಯುತ್ತಿದ್ದ ಅಜ್ಜ ಸುಬ್ಬರಾಯರಿಂದ ಪ್ರಭಾವಿತರಾದವರು. ಪ್ರಸ್ತುತ ವಂಶ ಪರಂಪರೆಯಿಂದ ಬಳುವಳಿಯಾಗಿ ಬಂದ 30 ಎಕರೆ ಜಮೀನಿನ ಬಹುಭಾಗದಲ್ಲಿ ಭತ್ತದ ವಿವಿಧ ತಳಿಗಳನ್ನು ಉಳಿಸಿ, ಬೆಳೆಸಿ, ಸಂರಕ್ಷಿಸುವ ತಪಸ್ಸಿನಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಭತ್ತದ ಬೀಜ ಮೇಳಗಳಲ್ಲಿ ಭಾಗವಹಿಸಿ, ಕೃಷಿಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ತಮ್ಮದೇ “ನಮನ ಬೀಜ ಬ್ಯಾಂಕ್‌’ ಆರಂಭಿಸಿ, “ಮುಷ್ಟಿಬೀಜ’ದ ಪರಿಕಲ್ಪನೆಯಲ್ಲಿ ಅಶಕ್ತ ರೈತರಿಗೆ ಪ್ರತೀರ್ಷ ಎರಡು ಮುಷ್ಟಿ ಬೀಜ ನೀಡುವ ಪರಿಪಾಠವನ್ನು ನಡೆಸಿಕೊಂಡು ಬರುತ್ತಿದ್ದಾರೆ. 100ಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ಕಾಳಜಿಯಿಂದ ಬೆಳೆಸಿ ಮನೆಯಂಗಳವನ್ನು ಆಯುರ್ವೇದ ವನವಾಗಿಸಿಕೊಂಡಿದ್ದಾರೆ. 2020-21ರಲ್ಲಿ ಸಸ್ಯ ತಳಿಗಳ ಸಂರಕ್ಷಣೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಅವರ ಪತ್ನಿ ಶಾರದಾ.

ಪ್ಲಾಸ್ಟಿಕ್‌ ಶಸ್ತ್ರಚಿಕಿತ್ಸೆ ತಜ್ಞ ಡಾ| ವೈ.ಎಸ್‌. ರೈ:

ಮಣಿಪಾಲ ಕೆಎಂಸಿಯಲ್ಲಿ ವೈದ್ಯಕೀಯ ಪದವಿಯ ಇಂಟರ್ನ್ಶಿಪ್‌ ಪೂರೈಸುವ ವೇಳೆಯಲ್ಲಿ ಮಣಿಪಾಲದ ಮಹಾಶಿಲ್ಪಿ ಡಾ| ಟಿಎಂಎ ಪೈಯವರಿಂದ ಪ್ರೇರಿತರಾಗಿ ವೃತ್ತಿಜೀವನದಲ್ಲಿ ಯಶಸ್ಸು ಪಡೆದವರು ಡಾ| ಎಡ್ಕತೋಡಿ ಸಂಜೀವ ರೈ (ವೈ.ಎಸ್‌. ರೈ). ವಿವಿಧ ಬಗೆಯ ಶಸ್ತ್ರ ಚಿಕಿತ್ಸೆಗಳಲ್ಲಿ ಪರಿಣತರಾಗಿ, ಪ್ಲಾಸ್ಟಿಕ್‌ ಶಸ್ತ್ರಚಿಕಿತ್ಸೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದ್ದಾರೆ. ಹುಟ್ಟಿದ್ದು ಕೃಷಿ ಕುಟುಂಬದಲ್ಲಿ. ಮೈಸೂರಿನ ಸರಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಪದವಿ ಪಡೆದು ಅಲ್ಲಿನ ಹೋಲ್ಡ್‌$Õ ವರ್ತ್‌ ಮೆಮೋರಿಯಲ್‌ ಆಸ್ಪತ್ರೆಯಲ್ಲಿ ವೃತ್ತಿಜೀವನ ಆರಂಭಿಸಿ ಬ್ರಿಟನ್‌ನ ವಿವಿಧ ಆಸ್ತತ್ರೆಗಳಲ್ಲಿ ಶಸ್ತ್ರಕ್ರಿಯಾ ತಜ್ಞರಾಗಿ ಅನುಭವ ಗಳಿಸಿದರು. ಎಡಿನ್‌ಬರೋದ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್‌ನಿಂದ ಎಫ್‌ಆರ್‌ಸಿಎಸ್‌ ತೇರ್ಗಡೆ ಯಾದರು. ಮುಂದೆ ಪ್ಲಾಸ್ಟಿಕ್‌ ಸರ್ಜರಿ ವಿಭಾಗವನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡು, ಆಥೋìಪಿಡಿಕ್ಸ್‌, ಯುರಾಲಜಿ ಮತ್ತು ಮಕ್ಕಳ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣತಿ ಸಾಧಿಸಿದರು. ತರಬೇತಿಯ ಅವಧಿಯಲ್ಲಿ ಬರ್ಮಿಂಗ್‌ಹ್ಯಾಮ್‌ನ ಆ್ಯಕ್ಸಿಡೆಂಟ್‌ ಹಾಸ್ಪಿಟಲ್‌ ನ ಸುಡುಗಾಯ ಚಿಕಿತ್ಸಾ ವಿಭಾಗದಲ್ಲಿ ತಜ್ಞರ ಮಾರ್ಗದರ್ಶನದಲ್ಲಿ ಕೆಲಸಮಾಡಿದರು. ಅಲ್ಲಿಯೇ ವೃತ್ತಿಜೀವನ ಮುಂದುವರಿಸಿ, 2003ರವರೆಗೂ ಅತಿಥಿ ಉಪನ್ಯಾಸಕರಾಗಿ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಭಾರತಕ್ಕೆ ಬಂದು ಮಂಗಳೂರಿನ ಕೆಎಂಸಿಯಲ್ಲಿ ತಜ್ಞ ವೈದ್ಯರಾಗಿ ಸೇರಿ ಸಹಭಾಗಿತ್ವ ಹೊಂದಿರುವ ವೆನಾÉಕ್‌ ಆಸ್ಪತ್ರೆ ಯಲ್ಲಿ ಸೇವೆ ಸಲ್ಲಿಸಿದರು. ಬಳಿಕ ಕೆಎಂಸಿಯ ಡೀನ್‌ ಆದರು. ನೇಪಾಲದ ಪೋಖರಾದಲ್ಲಿ ಮಣಿಪಾಲದ ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಯನ್ನು ವಿಸ್ತರಿಸುವಲ್ಲಿ ಶ್ರಮಿಸಿದರು. ಶಸ್ತ್ರಕ್ರಿಯಾ ವಿಭಾಗದ ಮುಖ್ಯಸ್ಥರಾಗಿ, ಮಂಗಳೂರಿನ ಬಿಜೈ, ಅತ್ತಾವರ ಮತ್ತು ಯುಎಂಸಿ ಆಸ್ಪತ್ರೆಗಳ ವೈದ್ಯಕೀಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದರು. ಡಾ| ರೈ ಅವರ ಪತ್ನಿ ಕುಮುದಾ ರೈ. ಅವರ ಪುತ್ರ ಲಂಡನ್‌ನಲ್ಲಿ ಐಟಿ ಎಂಜಿನಿಯರ್‌, ಮಗಳು ದಂತವೈದ್ಯಕೀಯ ತಜ್ಞೆ, ಮಂಗಳೂರಿನ ಕೆಎಂಸಿಯಲ್ಲಿ ಸಹ ಪ್ರಾಧ್ಯಾಪಿಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next