ಉಡುಪಿ: ಮಣಿಪಾಲ ಕೆಎಂಸಿ ಮತ್ತು ಆಸ್ಪತ್ರೆಯ ಮಣಿಪಾಲ್ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್ (ಮಾರ್ಕ್), ಶ್ರೀಲಂಕಾದ ಅಪೇಕ್ಷಾ ಇನ್-ವಿಟ್ರೋ-ಫರ್ಟಿಲೈಸೇಷನ್ (ಐವಿಎಫ್) ಮತ್ತು ರಿಸರ್ಚ್ ಸೆಂಟರ್ ನಡುವೆ ಚಿಕಿತ್ಸೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಒಡಂಬಡಿಕೆಗೆ ಸೋಮವಾರ ಸಹಿ ಹಾಕಲಾಯಿತು.
ಸಂತಾನ ಪಡೆಯಲು ತೊಂದರೆ ಇರುವ ಶ್ರೀಲಂಕಾದ ದಂಪತಿಗಳಿಗೆ ಐವಿಎಫ್ ತಂತ್ರಜಾnನದ ಮೂಲಕ ಸಂತಾನ ಪಡೆಯುವ ಅವಕಾಶ ಇದರಿಂದ ಲಭಿಸಲಿದೆ. ಸಂತಾನ ಪಡೆಯುವ ನಿಟ್ಟಿನಲ್ಲಿ ಭಾಗಶಃ ತೊಂದರೆ ಇರುವ ದಂಪತಿಗಳಲ್ಲಿ ಗರ್ಭಧಾರಣೆಗಾಗಿ ಮಾರ್ಕ್ ವಿಶೇಷ ಶ್ರೇಣಿಯ ಸಹಾಯಕ ಸೌಲಭ್ಯ ಒದಗಿಸುತ್ತಿದೆ. ತಾಂತ್ರಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಮಾರ್ಕ್ ಭಾರತದಲ್ಲಿ ಬಂಜೆತನಕ್ಕೆ ಚಿಕಿತ್ಸೆ ನೀಡುವ ವಿಶೇಷ ಸುಧಾರಿತ ಕೇಂದ್ರ ಎನಿಸಿಕೊಂಡಿದೆ.
ಇಲ್ಲಿ ಪುರುಷರ ಸಂತಾನಹೀನತೆ ವಿಶ್ಲೇಷಣೆಗಾಗಿ ಸಂಪೂರ್ಣ ಸುಸಜ್ಜಿತ ಆಂಡ್ರೋಲಜಿ ಪ್ರಯೋಗಾಲಯ ಹಾಗೂ ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ವೀರ್ಯ ಸಂಗ್ರಹಣೆಗಾಗಿ ಸೆಮೆನ್ ಬ್ಯಾಂಕಿಗ್ ಸೌಲಭ್ಯವೂ ಇದೆ.
ಎಂಬ್ರಿಯೋಲಜಿ (ಭ್ರೂಣಶಾಸ್ತ್ರ) ಪ್ರಯೋಗಾಲಯ ಎಲ್ಲ ಆಧುನಿಕ ಸೌಕರ್ಯಗಳಿಂದ ಸುಸಜ್ಜಿತವಾಗಿದ್ದು, ಮೈಕ್ರೋ ಮ್ಯಾನ್ಯುಪ್ಯು ಲೇಷನ್ ಮತ್ತು ಲೇಸರ್ ಹ್ಯಾಚಿಂಗ್ ಸೌಲಭ್ಯಗಳು ಈ ಕೇಂದ್ರದ ವಿಶೇಷತೆಗಳೆನಿಸಿವೆ. ಈ ಕೇಂದ್ರ ಸರೋಗೆಸಿ ಸೌಲಭ್ಯವನ್ನೂ ಒದಗಿಸುತ್ತದೆ.
ಯೋಜನೆ ಭಾಗವಾಗಿ ಮಣಿಪಾಲದ ತಜ್ಞರು ಶ್ರೀಲಂಕಾ ವೈದ್ಯಕೀಯ ಮತ್ತು ಭ್ರೂಣಶಾಸ್ತ್ರ ತಜ್ಞರಿಗೆ ತರಬೇತಿ ನೀಡಲಿದ್ದಾರೆ. ಒಡಂಬಡಿಕೆ ಅನ್ವಯ ಐವಿಎಫ್ ಚಿಕಿತ್ಸೆ ಆವಶ್ಯಕತೆಯಿರುವ ಶ್ರೀಲಂಕಾದ ಸಂತಾನಹೀನ ದಂಪತಿಗಳು ಮಣಿಪಾಲದ ಮಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುವ ಶಿಫಾರಸಿನ ಸೌಲಭ್ಯ ಪಡೆಯುತ್ತಾರೆ. ಮಾಲ್ಡಿವ್ಸ್ ಜನರಿಗೂ ಪ್ರಯೋಜನ ದೊರೆಯಲಿದೆ.
ಕೆಎಂಸಿ ಡೀನ್ ಡಾ| ಪೂರ್ಣಿಮಾ ಬಾಳಿಗಾ ಒಡಂಬಡಿಕೆಗೆ ಸಹಿ ಹಾಕಿದರು. ಮಾರ್ಕ್ ಮುಖ್ಯಸ್ಥ ಡಾ| ಪ್ರತಾಪ್ ಕುಮಾರ್ ಮತ್ತು ಮುಖ್ಯ ಭ್ರೂಣತಜ್ಞ ಡಾ| ಸತೀಶ್ ಕುಮಾರ್ ಅಡಿಗ ಅವರನ್ನು ಮಾರ್ಕ್ ಪ್ರಮುಖ ತಾಂತ್ರಿಕ ಸಿಬಂದಿಗಳನ್ನಾಗಿ ಹೆಸರಿಸಲಾಯಿತು ಮತ್ತು ಇವರು ಶ್ರೀಲಂಕಾದ ಅಪೇûಾ ಮಾರ್ಕ್ ಸೆಂಟರ್‌ನ ಡಾ| ಚಂಪಾ ನೆಲ್ಸನ್ ಮತ್ತು ದೀಪಲ್ ನೆಲ್ಸನ್ ಅವರ ಸಹಯೋಗದಲ್ಲಿ ಐವಿಎಫ್ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವರು.