Advertisement

Manipal: ಡಂಪಿಂಗ್‌ ಯಾರ್ಡ್‌ ಆದ ಮಣ್ಣಪಳ್ಳ!

03:41 PM Jan 10, 2025 | Team Udayavani |

ಮಣಿಪಾಲ: ಸುಂದರವಾದ ಕೊಳ, ವಾಕಿಂಗ್‌ ಟ್ರ್ಯಾಕ್‌, ಬೋಟಿಂಗ್‌ ಸೇರಿದಂತೆ ಹಲವು ವಿಶೇಷಗಳನ್ನು ಹೊಂದಿರುವ ಮಣ್ಣಪಳ್ಳದ ನಿರ್ವಹಣೆ ಬಗ್ಗೆ ಎಲ್ಲರೂ ನಿರ್ಲಕ್ಷ್ಯ ಮಾಡಿದ ಪರಿಣಾಮವಾಗಿ ಅಕ್ಷರಶಃ ಡಂಪಿಂಗ್‌ ಯಾರ್ಡ್‌ ಆಗಿದೆ.

Advertisement

ಪ್ರಸನ್ನ ಗಣಪತಿ ದೇಗುಲದ ಭಾಗದಿಂದ ಮಣ್ಣಪಳ್ಳ ಕೆರೆಯನ್ನು ಪ್ರವೇಶಿಸಿದರೆ ಮಣ್ಣಪಳ್ಳ ಆರೋಗ್ಯಧಾಮಕ್ಕೆ ಸುಸ್ವಾಗತ ಎಂಬ ಬೋರ್ಡ್‌ ಕಾಣಿಸುತ್ತದೆ. ಅದರಲ್ಲಿ ‘ಸ್ವತ್ಛ ಸುಂದರ ಮಣ್ಣಪಳ್ಳ ನಮ್ಮ ಹೆಮ್ಮೆ. ಸ್ವತ್ಛತೆಗೆ ಆದ್ಯತೆ ನೀಡಿ, ಕಸದ ಬುಟ್ಟಿ ಬಳಸಿ’ ಎಂದು ಬರೆಯಲಾಗಿದೆ. ಆದರೆ, ಕೆಲವು ಪ್ರದೇಶಗಳನ್ನು ಬಿಟ್ಟರೆ ಇಡೀ ಮಣ್ಣಪಳ್ಳ ಸ್ವತ್ಛತೆಯ ಬರಹಗಳನ್ನು ಅಣಕಿಸುತ್ತವೆ.

ಕೆರೆಯ ಸುತ್ತಲೂ 25 ಕಸದ ಡಬ್ಬಿ
ಈ ಹಿಂದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರವು ನಿರ್ವಹಣೆ ಮಾಡಿಕೊಂಡಿದ್ದ ಸಂದರ್ಭದಲ್ಲಿ ಕೆರೆಯ ಸುತ್ತಲೂ ಸುಮಾರು 25 ಕಸದ ತೊಟ್ಟಿಗಳನ್ನು ಅಳವಡಿಕೆ ಮಾಡಿತ್ತು. ಆ ಡಬ್ಬಿಗಳು ಕಣ್ಣೆದುರಿಗೆ ಕಂಡರೂ ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವವರ ಸಂಖ್ಯೆಯೇ ಅಧಿಕವಾಗತೊಡಗಿದೆ. ಜತೆಗೆ ವಿವಿಧ ಹೋರ್ಡಿಂಗ್‌ಗಳು ಒಳಭಾಗದಲ್ಲಿದ್ದು, ನಿರ್ಜೀವ ಸ್ಥಿತಿಯಲ್ಲಿದಂತಿದೆ. ಕೆಲವು ತುಕ್ಕುಹಿಡಿದು ಹೋಗಿದ್ದು, ಅಡಿಭಾಗದ ಕಾಂಕ್ರೀಟ್‌ ತಳವೂ ಎದ್ದುಕಾಣುತ್ತಿದೆ. ಅಲ್ಲದೆ ಕೆರೆಯ ಸುತ್ತಲೂ ಮರಗಳನ್ನು ಕಡಿದು ಅಡ್ಡಲಾಗಿ ಹಾಕಿದ ಪರಿಣಾಮ ಕೆರೆಯ ಸೌಂದರ್ಯಕ್ಕೂ ಅಡ್ಡಿ ಉಂಟಾಗುತ್ತಿದೆ.

ಕಟ್ಟಡದ ಅವಶೇಷಗಳ ರಾಶಿ
ಮಣ್ಣಪಳ್ಳದ ಖಾಲಿ ಜಾಗಗಳಲ್ಲಿ ಕೆಲವು ಕಡೆ ಕಟ್ಟಡದ ಅವಶೇಷಗಳನ್ನು ತಂದು ಹಾಕಲಾಗಿದ್ದರೆ, ಇನ್ನು ಕೆಲವು ಕಡೆ ಮುರಿದ ಮರಗಳು, ಗೆಲ್ಲುಗಳು ಬಿದ್ದುಕೊಂಡು ತ್ಯಾಜ್ಯ ಸಂಗ್ರಹ ಪ್ರದೇಶದಂತಾಗಿದೆ.

ಮಣ್ಣಪಳ್ಳವನ್ನು ಎಂಜೆಸಿ ಗ್ರೌಂಡ್‌ ಕಡೆಯಿಂದ ಪ್ರವೇಶ ಮಾಡುವ ದ್ವಾರದಲ್ಲಿ ಹಳೆ ಕಟ್ಟಡದ ಅವಶೇಷಗಳು, ಕಸ-ಕಡ್ಡಿ, ಪ್ಲಾಸ್ಟಿಕ್‌, ತ್ಯಾಜ್ಯಗಳನ್ನು ರಾಶಿ ಹಾಕಲಾಗಿದೆ. ಎಂಜೆಸಿ ಗ್ರೌಂಡ್‌ ಕಡೆಯ ದ್ವಾರದಿಂದ ಸಂಜೆಯ ಬಳಿಕ ವಾಹನಗಳಲ್ಲಿ ತಂದು ಇವುಗಳನ್ನು ಡಂಪ್‌ ಮಾಡಲಾಗುತ್ತಿದೆ. ಈ ಡಂಪ್‌ ಮಾಡಿದ ಅವಶೇಷಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹುಲ್ಲು, ಪೊದೆಗಳು ಬೆಳೆದಿವೆ.

Advertisement

ಪ್ಲಾಸ್ಟಿಕ್‌, ಮದ್ಯದ ಬಾಟಲಿ!
ಮಣ್ಣಪಳ್ಳದಲ್ಲಿ ಹಲವು ಕಡೆಗಳಲ್ಲಿ ಕಸ ವಿಲೇವಾರಿ ತೊಟ್ಟಿಗಳನ್ನು ಇಡಲಾಗಿದೆಯಾದರೂ ಅದರೊಳಗಿರುವುದಕ್ಕಿಂತ ಅಧಿಕ ಕಸ ತ್ಯಾಜ್ಯಗಳು ಸುತ್ತಮುತ್ತಲಿನ ಪರಿಸರದಲ್ಲಿ ಕಾಣಸಿಗುತ್ತಿದೆ. ಜತೆಗೆ ಪ್ಲಾಸ್ಟಿಕ್‌ ಚೀಲ, ಮದ್ಯದ ಬಾಟಲಿ, ಪೇಪರ್‌ಗಳು, ಚೀಲಗಳು, ತಂಬಾಕು ವಸ್ತುಗಳು, ನೀರಿನ ಖಾಲಿ ಬಾಟಲಿಗಳು ಹೀಗೆ ವಿವಿಧ ಪ್ರಕಾರದ ವಸ್ತುಗಳು ಅಲ್ಲಲ್ಲಿ ಎಸೆಯಲ್ಪಟ್ಟಿವೆ.

ಕೆರೆಯ ಬದಿಯಲ್ಲಿಯೂ ತ್ಯಾಜ್ಯ
ಮಣ್ಣಪಳ್ಳ ಕೆರೆಯ ಸುತ್ತಲೂ ಅಪಾರ ಪ್ರಮಾಣದ ಕಸತ್ಯಾಜ್ಯಗಳು ಸೇರಿಕೊಂಡಿವೆ. ಮೇಲ್ಭಾಗದಲ್ಲಿ ಎಸೆಯುವ ತ್ಯಾಜ್ಯಗಳು ಗಾಳಿಗೆ ಕೆರೆಗೆ ಹೋಗಿ ಬೀಳುವುದೂ ಇದೆ. ಕೆಲವು ಮಂದಿ ದಡದ ತಡದಲ್ಲಿ ಕುಳಿತುಕೊಂಡು ಬಾಟಲಿಗಳನ್ನು ಎಸೆಯುವ ಘಟನೆಗಳೂ ನಡೆಯುತ್ತಿವೆ.

ಕೆರೆಯ ಸ್ಥಿತಿ ಬೇಸರ ತರಿಸುತ್ತದೆ
ಮಣ್ಣಪಳ್ಳ ಕೆರೆ ಬಗೆಗಿನ ಸರಣಿ ವರದಿಗಳು ಚೆನ್ನಾಗಿವೆ. ಒಂದು ಅದ್ಭುತ ಪ್ರವಾಸಿ ತಾಣದ ಬಗ್ಗೆ ಆಡಳಿತದ ನಿರ್ಲಕ್ಷ್ಯ ಧೋರಣೆ ಖಂಡನೀಯ. ವಾಕಿಂಗ್‌ ಹೋಗುವಾಗ ತುಂಬಾ ಬೇಸರ ಆಗುತ್ತದೆ. ಕಸಕಡ್ಡಿ, ಬಿಯರ್‌ ಬಾಟಲಿ, ತಿಂಡಿ ತಿನಿಸುಗಳ ಪ್ಯಾಕೇಟ್‌, ನಾಯಿಗಳ ಹಾವಳಿ, ಅಲ್ಲಲ್ಲಿ ಎದ್ದು ಹೋಗಿರುವ ಇಂಟರ್‌ಲಾಕ್‌, ಸುತ್ತಲೂ ಬೆಳೆದು ನಿಂತಿರುವ ಪೊದೆ ಹುಲ್ಲು ಕಣ್ಣಿಗೆ ರಾಚುತ್ತದೆ. ಇನ್ನೊಂದು ತುಂಬ ಬೇಸರದ ಸಂಗತಿ ಎಂದರೆ, ಎಷ್ಟೋ ಬಾರಿ ಇಲ್ಲಿಗೆ ವಿದೇಶಿಯರು ಬರುತ್ತಾರೆ. ನಮ್ಮ ದೇಶದಲ್ಲಿ ಇಂಥ ಸುಂದರ ತಾಣಗಳನ್ನು ಬೇಜವಾಬ್ದಾರಿಯಿಂದ ನಿರ್ವಹಿಸುತ್ತಿರುವ ಬಗ್ಗೆ ಅವರು ಏನು ಭಾವಿಸಬಹುದು? ಉದಯವಾಣಿ ಲೇಖನ ಓದಿದ ಬಳಿಕವಾದರೂ ಸುಧಾರಣೆ ಆಗಬಹುದು ಎಂದು ಆಶಿಸುತ್ತೇನೆ.
-ಡಾ| ಅವಿನಾಶ್‌ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು, ಕೆಎಂಸಿ ಮಣಿಪಾಲ

ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ
ಮಣ್ಣಪಳ್ಳ ಕೆರೆಯ ಈಗಿನ ಸ್ಥಿತಿ ಮತ್ತು ಮುಂದೆ ಅದರ ಅಭಿವೃದ್ಧಿಯ ಬಗ್ಗೆ ನಿಮ್ಮ ಸಲಹೆಗಳಿದ್ದರೆ ದಯವಿಟ್ಟು ಬರೆದು ಕಳುಹಿಸಿ. ವಾಟ್ಸ್ಯಾಪ್‌ ನಂಬರ್‌: 63629 06071

Advertisement

Udayavani is now on Telegram. Click here to join our channel and stay updated with the latest news.

Next