ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ| ಟಾಮ್ ದೇವಾಸಿಯಾ, ಸಹಾಯಕ ಪ್ರಾಧ್ಯಾಪಕಿ ಡಾ| ಮೋನಿಕಾ ಜೆ., ಹೃದಯ ಶಸ್ತ್ರಚಿಕಿತ್ಸೆ ವಿಭಾಗದ ಸಹಪ್ರಾಧ್ಯಾಪಕ ಡಾ| ಗುರು ಪ್ರಸಾದ್ ರೈ ಅವರ ತಂಡವು ತೆರೆದ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೆ ಮಹಾ ಪಧಮನಿಯ ಕವಾಟವನ್ನು ಯಶಸ್ವಿಯಾಗಿ ಬದಲಾಯಿಸುವ ಮೂಲಕ ರೋಗಿಗಳಿಗೆ ಮರುಜನ್ಮ ನೀಡಿದೆ.
ಟ್ರಾನ್ಸ್‌ಕ್ಯಾಥೆಟರ್ ಎರೋಟಿಕ್ ವಾಲ್ವ ಇಂಪ್ಲಾಂಟೇಷನ್ (ಟಿಎವಿಐ) ಅನಂತರ ಕೆಲವೇ ದಿನಗಳಲ್ಲಿ ರೋಗಿ ಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟದ ಬದಲಾವಣೆಯನ್ನು (ಟಿಎವಿಆರ್) ದೇಶದ ಕೆಲವು ಹೃದ್ರೋಗ ತಜ್ಞರು ಮಾತ್ರ ಮಾಡುತ್ತಾರೆ. ಆಸ್ಪತ್ರೆಯಲ್ಲಿ “ದಿ ಟೀಮ್ ತಾವಿ’ ಇದುವರೆಗೆ ಇಂತಹ ಅನೇಕ ಚಿಕಿತ್ಸಾ ವಿಧಾನವನ್ನು ಯಶಸ್ವಿಯಾಗಿ ನಡೆಸಿದೆ.
76 ವರ್ಷದ ಪುರುಷ ರೋಗಿಯು ಒಂದು ತಿಂಗಳಿನಿಂದ ತೀವ್ರವಾದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕಷ್ಟವಾಗಿದ್ದರಿಂದ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟದ ಬದಲಾವಣೆ ಮಾಡಲಾಗಿದೆ. ಇದು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೋವಿಡ್ ಸಂದರ್ಭ ಮಾಡಿದ ಮೊದಲ ತಾವಿ ಚಿಕಿತ್ಸೆಯಾಗಿದೆ.
ಉಸಿರಾಟದ ಸಮಸ್ಯೆ ಹಾಗೂ ತಲೆ ತಿರುಗುವಿಕೆಯಿಂದ ಬಳಲುತ್ತಿದ್ದ 72 ವರ್ಷ ವಯಸ್ಸಿನ ಇನ್ನೊರ್ವ ರೋಗಿಗೆ ತಾವಿ ಚಿಕಿತ್ಸಾ ವಿಧಾನದ ಮೂಲಕ ಟ್ರಾನ್ಸ್‌ಕ್ಯಾಥೆಟರ್ ಮಹಾ ಪಧಮನಿಯ ಕವಾಟವನ್ನು ಬದ ಲಾಯಿಸಲಾಯಿತು ಮತ್ತು ರೋಗಿಯನ್ನು ಟ್ರಾನ್ಸ್‌ಕ್ಯಾಥೆಟರ್ ಎರೋಟಿಕ್ ವಾಲ್ವ… ಬದಲಾವಣೆಯ (ಟಿಎವಿಆರ್) ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಯಿತು.
74 ವರ್ಷ ವಯಸ್ಸಿನ ಇನ್ನೊರ್ವ ವ್ಯಕ್ತಿ ತೀವ್ರ ಹೃದಯ ವೈಫಲ್ಯ, ದೀರ್ಘಕಾಲದ ಕೆಮ್ಮಿನಿಂದ ಬಳ ಲುತ್ತಿದ್ದರು. ಇವರ ಚಿಕಿತ್ಸೆ ಬಗ್ಗೆ ಹೃದ್ರೋಗ ತಂಡ ಸಮಾಲೋಚನೆ ನಡೆಸಿ, ಟ್ರಾನ್ಸ್‌ಕ್ಯಾಥೆಟರ್ ಮಹಾ ಪಧಮನಿಯ ಕವಾಟವನ್ನು ಅಳ ವಡಿ ಸಲು ನಿರ್ಧರಿಸಿತು. ತಾವಿಯ ಅನಂತರ ರೋಗಿಯ ಸ್ಥಿತಿ ಸುಧಾರಿ ಸಿತು. ಕುಟುಂಬದವರು ಮತ್ತು ವೈದ್ಯರು 24 ಗಂಟೆಗಳಲ್ಲಿ ರೋಗಿಯ ಸ್ಥಿತಿಯಲ್ಲಿ ಮಹತ್ತರವಾದ ಬದ ಲಾವಣೆ ಗಮನಿಸಿದರು.
ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಪ್ರತಿಕ್ರಿಯಿಸಿ, ಹೃದ್ರೋಗ ತಜ್ಞ, ಹೃದಯ ರಕ್ತನಾಳದ ಶಸ್ತ್ರಚಿಕಿತ್ಸಕ, ಅರಿವಳಿಕೆ, ಕ್ಯಾಥ್ ಲ್ಯಾಬ್, ಐಸಿಯು ತಂಡ ಸೇರಿದಂತೆ ತಾವಿಯ ಸಂಪೂರ್ಣ ತಂಡವು ಈ ರೋಗಿಗಳಿಗೆ ಯಶಸ್ವಿಯಾಗಿ ಹೊಸ ಜೀವನವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಮಾಹೆ ಮಣಿಪಾಲದ ಬೋಧನ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ| ಆನಂದ್ ವೇಣುಗೋಪಾಲ್ ಅವರು, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ಅಳವಡಿಕೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.