Advertisement

ಮನೆಬಾಗಿಲಿಗೆ ಆರೋಗ್ಯ ಸೇವೆ ಶ್ಲಾಘನಾರ್ಹ: ಕೋಟ

12:30 AM Feb 21, 2019 | Team Udayavani |

ಮಣಿಪಾಲ: ವೃದ್ಧರು, ಅಂಗವಿಕಲರು, ದೀರ್ಘ‌ಕಾಲಿಕ ರೋಗಗಳಿಗೆ ತುತ್ತಾಗಿರುವವರು, ಮಧುಮೇಹ ಪೀಡಿತರಿಗೆ ವರದಾನವಾಗುವ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೋಮ್‌ ಕೇರ್‌ ಸೇವೆ ಶ್ಲಾಘನಾರ್ಹ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅವರು ಬುಧವಾರ ಕೆಎಂಸಿ ಮಣಿಪಾಲದ ಒಪಿಡಿ ಆವರಣದಲ್ಲಿ ಉಡುಪಿ ಜಿಲ್ಲೆಯ ಚೊಚ್ಚಲ ಕೆಎಂಸಿ ಹೋಮ್‌ ಕೇರ್‌ ಸರ್ವಿಸ್‌(ಗೃಹ ಆರೈಕೆ ಸೇವೆ)ಗೆ ಚಾಲನೆ ನೀಡಿ ಮಾತನಾಡಿದರು.

ಮೊದಲೇ ಕೆಎಂಸಿಗೆ ಬನ್ನಿ 
ಮುಖ್ಯ ಅತಿಥಿಯಾಗಿದ್ದ ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ವೃದ್ಧರು, ಮಧುಮೇಹ ಪೀಡಿತರಿಗೆ ಹೋಮ್‌ ಕೇರ್‌ ಸೇವೆ ಅತ್ಯುತ್ತಮ. ಕೆಎಂಸಿಯಲ್ಲಿ ಆರೋಗ್ಯ ಕರ್ನಾಟಕ/ಆಯುಷ್ಮಾನ್‌ ಭಾರತ ಯೋಜನೆಗಳ ಸೇವೆ ಅತ್ಯುತ್ತಮವಾಗಿ ಲಭ್ಯವಿದೆ. ಕಾಯಿಲೆಗಳು ಉಲ್ಬಣಿಸುವ ಮುನ್ನವೇ ಕೆಎಂಸಿಗೆ ಬನ್ನಿ ಎಂದು ಹೇಳಿದರು.

ಮಾಹೆ ಕುಲಪತಿ ಡಾ| ಎಚ್‌. ವಿನೋದ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗ, ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ ಉಪಸ್ಥಿತರಿದ್ದರು. ಎಚ್‌ಆರ್‌ ವಿಭಾಗದ ಸುಚಿತಾ ನಿರೂಪಿಸಿದರು. ಹೋಮ್‌ಕೇರ್‌ ಸೇವೆ ಇನ್‌ಚಾರ್ಜ್‌ ರತೀಶ್‌ ಮಾಹಿತಿ ನೀಡಿದರು.

10 ಕಿ.ಮೀ. ವ್ಯಾಪ್ತಿ
ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ಪ್ರಸ್ತಾವನೆಗೈದು, ಸದ್ಯ ಎರಡು ವಾಹನಗಳ ಮೂಲಕ ಆಸ್ಪತ್ರೆಯ 10 ಕಿ.ಮೀ. ವ್ಯಾಪ್ತಿಯೊಳಗೆ ಹೋಂ ಕೇರ್‌ ಸೇವೆ ಒದಗಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ ಎಂದರು.

Advertisement

ಏನಿದು ಹೋಮ್‌ ಕೇರ್‌ ?
ವಿವಿಧ ಪರೀಕ್ಷೆಗಳಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆಸ್ಪತ್ರೆಗೆ ಬರಬೇಕಾಗುತ್ತದೆ. ವೃದ್ಧರಿಗೆ, ಅಂಗವಿಕಲರಿಗೆ ಇದು ಕಷ್ಟ. ಇಂಥ ಸಂದರ್ಭ ನರ್ಸಿಂಗ್‌ ತಂಡದ ಸದಸ್ಯರು ರೋಗಿಗಳ ಮನೆಗೆ ತರಳಿ ಸ್ಯಾಂಪಲ್‌ ಸಂಗ್ರಹಿಸುತ್ತಾರೆ. ವರದಿ, ವೈದ್ಯರ ಅಭಿಪ್ರಾಯವನ್ನೂ ಮನೆಗೆ ತಲುಪಿಸುತ್ತಾರೆ. ಫಿಸಿಯೋಥೆರಪಿ ತಜ್ಞರು ಮನೆಗಳಿಗೆ ತೆರಳಿ ಸೇವೆ ನೀಡುತ್ತಾರೆ. ಗಾಯಕ್ಕೆ ಡ್ರೆಸ್ಸಿಂಗ್‌ ಸೇವೆಯನ್ನೂ ಮನೆಯಲ್ಲೇ ನೀಡಲಾಗುವುದು. ಅಗತ್ಯವಿದ್ದವರು 0820-2922761ಕ್ಕೆ  ಕರೆ ಮಾಡಬಹುದು.

ಆಯುಷ್ಮಾನ್‌ ಭಾರತ ಅನುಷ್ಠಾನದಲ್ಲಿ  ಸಮಸ್ಯೆ
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್‌ ಭಾರತವು 5 ಲಕ್ಷ ರೂ. ವರೆಗಿನ ಚಿಕಿತ್ಸೆಗೆ ನೆರವಾಗುತ್ತದೆ. ಆದರೆ ರಾಜ್ಯ ಸರಕಾರದಮಟ್ಟದಲ್ಲಿ ಅನುಷ್ಠಾನ ಮಾಡುವಾಗ ಸಮಸ್ಯೆಯಾಗುತ್ತಿದೆ. ಮೊದಲು ಸರಕಾರಿ ಆಸ್ಪತ್ರೆಗೆ ಹೋಗಬೇಕು ಎಂಬ ನಿಯಮ ಮಾಡಿದ್ದು ರೋಗಿಗಳಿಗೆ ಕಷ್ಟವಾಗಿದೆ. ಕೆಲವು ರೋಗಗಳ ಕೋಡ್‌ಇಲ್ಲದೆ ಸಮಸ್ಯೆಯಾಗಿದೆ. ಈ ಬಗ್ಗೆ ವೈದ್ಯರು ಮಾಹಿತಿ ನೀಡಿದಲ್ಲಿ ಸರಕಾರದ ಗಮನಕ್ಕೆ ತರಲಾಗುವುದು. ಕೋಡ್‌ ಇಲ್ಲದ ಕಾಯಿಲೆಗೆ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ರಘುಪತಿ ಭಟ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next