ಮಣಿಪಾಲ: ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರವಿವಾರ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಮುಖ್ಯಸ್ಥ ಡಾ| ರಂಜನ್ ಆರ್. ಪೈ ಅವರು ಬೋನ್ ಬ್ಯಾಂಕ್ (ಮೂಳೆ ನಿಧಿ) ಉದ್ಘಾಟಿಸಿದರು.
ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿ, ಹೊಸ ಸೌಲಭ್ಯಗಳು ಮತ್ತು ತಂತ್ರಜ್ಞಾನ ಗಳನ್ನು ಪರಿಚಯಿಸುವಲ್ಲಿ ಮಣಿಪಾಲ ಯಾವಾಗಲೂ ಮುಂಚೂಣಿಯಲ್ಲಿದೆ. ಇಂದಿನ ದಿನಗಳಲ್ಲಿ ಬೋನ್ ಬ್ಯಾಂಕ್ ಬಹಳಷ್ಟು ಪ್ರಮುಖ ಪಾತ್ರ ವಹಿಸಲಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದು ಕೊಳ್ಳುವಂತಾಗಬೇಕು ಎಂದರು.
ಮೂಳೆ ಮತ್ತು ಕೀಲು ವಿಭಾಗದ ಪ್ರಾಧ್ಯಾಪಕ ಹಾಗೂ ಬೋನ್ ಬ್ಯಾಂಕ್ ಸಂಚಾಲಕ ಡಾ| ಮೋನಪ್ಪ ನಾಯ್ಕ… ಆರೂರು, ಮೂಳೆಯ ಕ್ಯಾನ್ಸರ್ ಗೆಡ್ಡೆಯ ಛೇದನದಲ್ಲಿ ಉಂಟಾಗುವ ದೊಡ್ಡ ಪ್ರಮಾಣದ ಮೂಳೆ ನಷ್ಟತೆಯನ್ನು ನಿರ್ವಹಿಸುವಲ್ಲಿ, ಮುರಿದ ಮೂಳೆಗಳಲ್ಲಿ ಮೂಳೆ ನಷ್ಟ ಉಂಟಾಗಿ ಕೂಡದಿರುವ ಸಂದರ್ಭದಲ್ಲಿ ಕೀಲು ಪುನಃನಿರ್ಮಾಣ ಶಸ್ತ್ರ ಚಿಕಿತ್ಸೆಯಲ್ಲಿ ಕಂಡುಬರುವ ಮೂಳೆ ನಷ್ಟತೆಗೆ ಮೂಳೆ ಕಸಿಗಳ ಅಗತ್ಯವಿರುತ್ತದೆ. ಈ ಪರಿಸ್ಥಿತಿಗಳಲ್ಲಿ ಅಲೋಗ್ರಾಫ್ಟ್ಗಳು ತುಂಬಾ ಉಪಯುಕ್ತವಾಗುತ್ತವೆ ಎಂದರು.
ಮಣಿಪಾಲ ಫೌಂಡೇಶನ್ ಸಿಇಒ ಹರಿನಾರಾಯಣ ಶರ್ಮ, ಮಾಹೆ ಉಪಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಸಹ ಉಪಕುಲಪತಿ (ಆರೋಗ್ಯ ವಿಜ್ಞಾನ) ಡಾ| ಶರತ್ ಕುಮಾರ್ ರಾವ್, ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ, ಮಾಹೆ ಕುಲಸಚಿವರಾದ ಶ್ರುತಿ ಆರ್. ಪೈ, ಡಾ| ಗಿರಿಧರ್ ಕಿಣಿ, ಸಿಒಒ ಸಿ.ಜಿ. ಮುತ್ತಣ್ಣ, ಬೋಧಕ ಆಸ್ಪತ್ರೆಯ ಸಿಒಒ ಡಾ| ಆನಂದ ವೇಣುಗೋಪಾಲ್, ಎಲ್ಲ ಸಹ ಡೀನ್ ಗಳು, ಮೂಳೆ ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ| ಶ್ಯಾಮಸುಂದರ್ ಭಟ್ ಉಪಸ್ಥಿತರಿದ್ದರು.