Advertisement

ಮಣಿಪಾಲ ಆಸ್ಪತ್ರೆ :ಡಿಜಿಟಲ್‌ ಮ್ಯಾಮೋಗ್ರಫಿ ಘಟಕ ಉದ್ಘಾಟನೆ

11:31 AM Jan 28, 2018 | Team Udayavani |

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರೇಡಿಯೋ ಡಯಗ್ನೋಸಿಸ್‌ ಮತ್ತು ಇಮೇಜಿಂಗ್‌ ವಿಭಾಗದಲ್ಲಿ ಅತ್ಯಾಧುನಿಕ ಡಿಜಿಟಲ್‌ ಮ್ಯಾಮೋಗ್ರಫಿ ಘಟಕ ಉದ್ಘಾಟನೆಗೊಂಡಿದ್ದು, ಸ್ತನ ಕ್ಯಾನ್ಸರ್‌ ತಪಾಸಣೆಯ ಸ್ತನದ ಬಿಂಬ ಪರೀಕ್ಷೆ (ಇಮೇಜಿಂಗ್‌)ಯಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದೆ.

Advertisement

ಮಣಿಪಾಲದ ಮಾಹೆ ಹಾಸ್ಟೆಲ್ ಆಡಳಿತ ಮಂಡಳಿ  ಅಧ್ಯಕ್ಷೆ ವಸಂತಿ ಆರ್‌.ಪೈಘಟಕವನ್ನು ಉದ್ಘಾಟಿಸಿದರು. ಕರಾವಳಿ ಕರ್ನಾಟಕದಲ್ಲಿ ಮೊತ್ತ ಮೊದಲ ಡಿಜಿಟಲ್ ಮ್ಯಾಮೋಗ್ರಫಿ ಘಟಕ ಇದಾಗಿದೆ. ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಡಾ| ವಿನೋದ್‌ ಭಟ್‌, ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ, ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಕೆಎಂಸಿ ಡೀನ್‌ ಡಾ| ಪ್ರಜ್ಞಾ ರಾವ್‌, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಕ| ಎಂ. ದಯಾನಂದ, ಆಸ್ಪತ್ರೆಯ ರೇಡಿಯೋ ಡಯಗ್ನೋಸಿಸ್‌ ವಿಭಾಗದ ಮುಖ್ಯಸ್ಥ ಡಾ| ರಾಜಗೋಪಾಲ್ ಕೆ.ವಿ. ಉಪಸ್ಥಿತರಿದ್ದರು.

ಸ್ತನ ಕ್ಯಾನ್ಸರ್‌ ಆರೋಗ್ಯ ಕ್ಷೇತ್ರಕ್ಕೆ, ವಿಶೇಷವಾಗಿ ನಗರವಾಸಿಗಳಿಗೆ ಒಂದು ಪ್ರಮುಖ ಸವಾಲಾಗಿದೆ. ಭಾರತದಲ್ಲಿ ಗರ್ಭದ ಕ್ಯಾನ್ಸರನ್ನು ಹಿಂದಿಕ್ಕಿ ಸ್ತ್ರೀಯರಲ್ಲಿ ಅತ್ಯಂತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಕಾಯಿಲೆ ತಡವಾಗಿ ಪತ್ತೆಯಾಗುವುದರಿಂದ ಮರಣಕ್ಕೆ ಗುರಿಯಾಗುವ ಸ್ತ್ರೀಯರ ಸಂಖ್ಯೆ ಹೆಚ್ಚುತ್ತಿದೆ. ಮ್ಯಾಮೋಗ್ರಫಿಯ ಮುಖ್ಯ ಉದ್ದೇಶ ಆರಂಭಿಕ ಹಂತದಲ್ಲೇ ಸ್ತನ ಕ್ಯಾನ್ಸರನ್ನು ಪತ್ತೆಹಚ್ಚಿ ರೋಗಿಯ ಬದುಕುಳಿಯುವಿಕೆಯ ಸಂಭಾವ್ಯತೆಯನ್ನು ಹೆಚ್ಚಿಸುವುದು ಎಂದು ಡಾ| ಕ| ಎಂ. ದಯಾನಂದ ತಿಳಿಸಿದರು.

ಸ್ತನದ ಕ್ಯಾನ್ಸರ್‌ ಶೀಘ್ರ, ನಿಖರ ಪತ್ತೆಗೆ ಸಹಾಯಕ
ಹಿಂದೆ ಸ್ತನ ಕ್ಯಾನ್ಸರ್‌ ಪತ್ತೆಗೆ ಸಾಂಪ್ರದಾಯಿಕ ಮ್ಯಾಮೋಗ್ರಫಿ  ನಡೆಸಲಾಗುತ್ತಿತ್ತು. ಈಗ ಡಿಜಿಟಲ್  ಮ್ಯಾಮೋಗ್ರಫಿ  ಪರಿಚಯಿಸುವುದರೊಂದಿಗೆ, ಸ್ತನ ಕ್ಯಾನ್ಸರ್‌ ಪತ್ತೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬರಲಿದೆ. ಡಕ್ಟಲ್‌ ಕಾರ್ಸಿನೋಮಾ ಇನ್‌ ಸಿಟು ಮತ್ತು ಸುತ್ತಲಿನ ಅಂಗಾಂಶ ಗಳಿಗೆ ವ್ಯಾಪಿಸಿರುವ ಕ್ಯಾನ್ಸರನ್ನು ಪತ್ತೆ ಹಚ್ಚುವಲ್ಲಿ ಸಾಂಪ್ರದಾಯಿಕ ಫಿಲ್ಮ್ ಸ್ಕ್ರೀನ್‌ ಮ್ಯಾಮೊಗ್ರಫಿಗೆ ಹೋಲಿಸಿದಲ್ಲಿ ಡಿಜಿಟಲ್ ಮ್ಯಾಮೋಗ್ರಾಂನ ನಿರ್ವಹಣೆ ಬಹಳಷ್ಟು ನಿಖರ, ಉತ್ತಮ ಫ‌ಲಿತಾಂಶ ನೀಡುವುದು ಕಂಡು ಬಂದಿದೆ. ಇದರಲ್ಲಿ ಹೊಳಪು, ಮಬ್ಬಿನ ಪ್ರಮಾಣ ಅಥವಾ ಕಾಂಟ್ರಾಸ್ಟನ್ನು ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಬಹುದು ಮತ್ತು ಬಿಂಬದ ಭಾಗಗಳನ್ನು ದೊಡ್ಡದು ಮಾಡಬಹುದಾಗಿರುವುದೇ ಇದಕ್ಕೆ ಕಾರಣ. ಇದರಿಂದ ಆರೋಗ್ಯಯುತ ಮತ್ತು ರೋಗಗ್ರಸ್ತ ಅಂಗಾಂಶ ಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ಸುಲಭವಾಗಿ ಗುರುತಿಸಬಹುದು. 

ಪಾಶ್ಚಾತ್ಯರಿಗೆ ಹೋಲಿಸಿದರೆ ಭಾರತೀಯರಲ್ಲಿ ಸ್ತನ ಕ್ಯಾನ್ಸರ್‌ ಬಹಳ ಚಿಕ್ಕ ಪ್ರಾಯದವರಲ್ಲಿಯೇ ಪತ್ತೆಯಾಗುತ್ತಿದೆ, ಈ ವಯೋಮಾನದವರಲ್ಲಿ ಸ್ತನ ಅಂಗಾಂಶಗಳು ಒತ್ತೂತ್ತಾಗಿರುವುದರಿಂದ ಡಿಜಿಟಲ್ ಮ್ಯಾಮೋಗ್ರಫಿ ಸ್ತನ ಕ್ಯಾನ್ಸರ್‌ ಪತ್ತೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಮರಣದ ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ. ತಂತ್ರಜ್ಞರು ಬಿಂಬಗಳನ್ನು ತತ್‌ಕ್ಷಣವೇ ನೋಡಲು ಸಾಧ್ಯವಾಗುವುದರಿಂದ ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡುವ ಅನುಕೂಲತೆ ಇರುವುದರಿಂದ ಮರು ತಪಾಸಣೆಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ತಪಾಸಣೆ ತ್ವರಿತವಾಗಿ ಜರುಗುವುದರಿಂದ ರೋಗಿಗೆ ಅನನುಕೂಲತೆ ಉಂಟಾಗದು.

Advertisement
Advertisement

Udayavani is now on Telegram. Click here to join our channel and stay updated with the latest news.

Next