ಮಂಗಳೂರು: ಸಿಗ್ನಾಟಿಟಿಕೆ ಹೆಲ್ತ್ ಇನ್ಸೂರೆನ್ಸ್‌ನ ಶೇ.51 ರಷ್ಟು ಪಾಲನ್ನು ಖರೀದಿಸುವ ಮೂಲಕ ಮಣಿಪಾಲ ಉದ್ಯಮ ಸಮೂಹ ಆರೋಗ್ಯ ವಿಮಾ ಕ್ಷೇತ್ರಕ್ಕೆ ಲಗ್ಗೆ ಇರಿಸಿದೆ.
ಹೊಸದಾಗಿ ಕಂಪೆನಿಯ ಹೆಸರನ್ನು ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಲಿಮಿಟೆಡ್ ಎಂದು ಹೆಸರಿಸಲಾಗಿದ್ದು, ಅಗತ್ಯ ಶಾಸನಬದ್ಧ ಅನುಮೋದನೆ ಪಡೆಯಲಾಗಿದೆ.
ಟಿಟಿಕೆ ಗ್ರೂಪ್ ಈ ಜಂಟಿ ಉದ್ಯಮದಿಂದ ಹೊರಬರಲು ಯೋಜಿಸಿದ್ದು, ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಅನುಮೋದನೆಯ ಅನಂತರ ಈ ನಿರ್ಗಮನ ಜಾರಿಗೆ ಬರಲಿದೆ. ಕಂಪೆನಿಯ ಎಲ್ಲ ವಹಿವಾಟುಗಳು ನೂತನ ಹೆಸರಿನಲ್ಲಿಯೇ ನಡೆಯಲಿವೆ ಎಂದು ಸಿಗ್ನಾ ಇಂಟರ್‌ನ್ಯಾಷನಲ್ ಮಾರ್ಕೆಟ್ಸ್‌ನ ಅಧ್ಯಕ್ಷ ಜಾಸನ್ ಸ್ಯಾಡ್ಲೆರ್ ತಿಳಿಸಿದ್ದಾರೆ.
‘ಮಣಿಪಾಲ್ ಗ್ರೂಪ್‌ನ ಸಮಗ್ರಆರೋಗ್ಯ ಸೇವೆ ಮತ್ತು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನೆಟ್ವರ್ಕ್ ಮತ್ತು ಸಿಗ್ನಾ ಗ್ಲೋಬಲ್ ಪರಿಣತಿಯು ಕಂಪೆನಿಯನ್ನು ನಿಜ ಅರ್ಥದಲ್ಲಿ ಆರೋಗ್ಯ ಸೇವಾ ಸಂಸ್ಥೆಯಾಗಿ ರೂಪಿಸಲಿದೆ ಎಂದು ಮಣಿಪಾಲ್ ಎಜು ಮತ್ತು ಮೆಡಿಕಲ್ ಗ್ರೂಪ್‌ನ ಅಧ್ಯಕ್ಷ ಡಾ| ರಂಜನ್ ಪೈ ಅಭಿಪ್ರಾಯಪಟ್ಟಿದ್ದಾರೆ. ಹೊಸ ಬ್ರಾಂಡ್ ಮತ್ತು ಹೆಸರು ಬದಲಾವಣೆಯು ಕಂಪೆನಿಯ ಹಾಲಿ ಉದ್ಯಮದ ಮಾದರಿ, ಏಜೆಂಟರು, ಬ್ಯಾಂಕ್ ಅಶ್ಯುರೆನ್ಸ್ ಪಾಲುದಾರರು ಮತ್ತು ಗ್ರಾಹಕರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಕಂಪೆನಿಯ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗ ಹಾಗೆಯೇ ಮುಂದುವರಿಯಲಿದೆ ಎಂದು ಪ್ರಕಟನೆ ಹೇಳಿದೆ.