ಉಡುಪಿ: ಮಣಿಪಾಲದಲ್ಲಿ ಡಿವೈಡರ್‌ಗೆ ಬೈಕ್ ಢಿಕ್ಕಿ ಹೊಡೆದು ಎಂಐಟಿಯ ವಿದ್ಯಾರ್ಥಿ ನಿಖಿಲ್(23) ಸಾವನ್ನಪ್ಪಿದ್ದಾರೆ. ಇವರು ಶಿವಮೊಗ್ಗ ಮೂಲದವರಾಗಿದ್ದು, ಮಣಿಪಾಲದಲ್ಲಿ ವ್ಯಾಸಂಗ ಮಾಡಿಕೊಂಡಿದ್ದರು.
ಮಹೇಂದ್ರ ಜಿ.ಅವರು ಶುಕ್ರವಾರ ತನ್ನ ಸ್ನೇಹಿತರಾದ ನಿಹಾಲ್ ಮತ್ತು ನಿಖಿಲ್ ಅವರೊಂದಿಗೆ ಬೈಕ್‌ನಲ್ಲಿ ಕೆಳ ಪರ್ಕಳ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದರು.
ನಿಹಾಲ್ ಬೈಕ್ ಚಲಾಯಿಸುತ್ತಿದ್ದರು. ಮಹೇಂದ್ರ ಅವರ ಸ್ನೇಹಿತ ನಿಖಿಲ್ ಮಧ್ಯದಲ್ಲಿ ಮತ್ತು ಮಹೇಂದ್ರ ಅವರು ನಿಖಿಲ್ ನ ಹಿಂಬದಿಯಲ್ಲಿ ಕುಳಿತುಕೊಂಡಿದ್ದರು. ಬೈಕ್ ಮಣಿಪಾಲದ ಟೈಗರ್ ಸರ್ಕಲ್‌ನ ಸ್ವಲ್ಪ ಮುಂದೆ ತಲುಪಿದಾಗ ಆರೋಪಿ ನಿಹಾಲ್ ಬೈಕ್ ಅನ್ನು ಅತೀ ವೇಗದಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.
ಈ ವೇಳೆ ಮೂರೂ ಮಂದಿ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ನಿಖಿಲ್ ನ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು ಪ್ರಜ್ಞೆ ಇರಲಿಲ್ಲ. ಉಳಿದ ಇಬ್ಬರಿಗೂ ಗಾಯ ಉಂಟಾಗಿತ್ತು. ಸ್ಥಳೀಯರು ಗಾಯಾಳುಗಳನ್ನು ಆ್ಯಂಬುಲೆನ್ಸ್‌ನಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಆದರೆ ನಿಖಿಲ್ ಅದಾಗಲೇ ಸಾವನ್ನಪ್ಪಿದ್ದರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.