Advertisement

ಅಂದು ಬ್ರಿಟಿಷರು-ಇಂದು ಡ್ರಗ್ಸ್‌: ನಟ ಪೃಥ್ವಿ ಅಂಬರ್‌ ಎಚ್ಚರಿಕೆ

01:08 AM Aug 04, 2019 | Team Udayavani |

ಉಡುಪಿ: ಅಂದು ಬ್ರಿಟಿಷರು ಭಾರತಕ್ಕೆ ಬಂದು ವ್ಯಾಪಾರ ಆರಂಭಿಸಿದ್ದಾಗ ಕೆಲವರಿಗೆ ಖುಷಿಯಾಗಿತ್ತು. ಆದರೆ ಅನಂತರ ಅವರು ಇಡೀ ದೇಶವನ್ನೇ ಆವರಿಸಿ ದಾಸ್ಯರನ್ನಾಗಿ ಮಾಡಿದರು. ಇದೇ ರೀತಿಯ ಅಪಾಯ ಈಗ ಮಾದಕ ದ್ರವ್ಯಗಳಿಂದ ಉಂಟಾಗಿದೆ ಎಂದು ತುಳು ಮತ್ತು ಕನ್ನಡ ಚಿತ್ರಗಳ ನಾಯಕ ನಟ ಪೃಥ್ವಿ ಅಂಬರ್‌ ಹೇಳಿದರು.

Advertisement

ಆ.3ರಂದು ಮಣಿಪಾಲ ಕೆನರಾ ಮಾಲ್ ಆವರಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ಮತ್ತು ರೋಟರಿ ಕ್ಲಬ್‌ ಉಡುಪಿ ರಾಯಲ್ ಸಹಭಾಗಿತ್ವದಲ್ಲಿ ‘ಮಾದಕ ವ್ಯಸನ ವಿರೋಧಿ ಮಾಸಾಚರಣೆ -2019’ ಅಂಗವಾಗಿ ಜರಗಿದ ‘ಸೆಲ್ಫಿ ವಿದ್‌ ಸಹಿ ಅಭಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡ್ರಗ್ಸ್‌ ಮೊದಲು ಕುತೂಹಲದೊಂದಿಗೆ ಆರಂಭವಾಗುತ್ತದೆ. ಅದರಿಂದ ಖುಷಿ ದೊರೆಯುತ್ತದೆ. ಅನಂತರ ಅದು ನಮ್ಮನ್ನು ಅದರ ದಾಸ್ಯರನ್ನಾಗಿ ಮಾಡುತ್ತದೆ. ಯುವಜನತೆಯ ಮನಸ್ಸನ್ನು ಋಣಾತ್ಮಕವಾಗಿ ಬೆಳೆಸುತ್ತಾ ಹೋಗುತ್ತದೆ. ನಾನು ಮಣಿಪಾಲದಲ್ಲಿ ಡ್ಯಾನ್ಸ್‌ ತರಗತಿಗಳನ್ನು ನಡೆಸುತ್ತಿದ್ದಾಗ ಅಂಥ ಅನೇಕ ವಿದ್ಯಾರ್ಥಿಗಳನ್ನು ಹತ್ತಿರದಿಂದ ಕಂಡಿದ್ದೇನೆ. ಕೆಲವರು ಆತ್ಮಹತ್ಯೆಗೂ ಮುಂದಾಗುವುದೂ ಇದೆ. ಈ ಅಪಾಯದಿಂದ ವಿದ್ಯಾರ್ಥಿಗಳನ್ನು ಹೊರತರುವ ಕೆಲಸಗಳು ಇದೇ ರೀತಿ ಮುಂದುವರೆಯಬೇಕು. ನಾನು ಸ್ವ ಇಚ್ಛೆಯಿಂದ ಪಾಲ್ಗೊಳ್ಳುತ್ತೇನೆ ಎಂದು ಪೃಥ್ವಿ ಅಂಬರ್‌ ಹೇಳಿದರು.

ಹೊರಬರಲು ಸಾಧ್ಯವಿಲ್ಲ
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವೈದ್ಯ ಡಾ| ರವಿರಾಜ್‌ ಭಂಡಾರಿ ಅವರು ಮಾತನಾಡಿ ‘ಸಹಪಾಠಿ, ಗೆಳೆಯರ ಸಹವಾಸದೊಂದಿಗೆ ಮೋಜಿಗಾಗಿ ಆರಂಭವಾಗುವ ಡ್ರಗ್ಸ್‌ ಸೇವನೆ ಮುಂದೆ ಚಟವಾಗುತ್ತದೆ. ಒಮ್ಮೆ ಅದನ್ನು ಸೇವಿಸಿದರೆ ಮತ್ತೆ ಅದರಿಂದ ಹೊರಬರುವುದು ಕಷ್ಟಸಾಧ್ಯ. ಇಂದಿನ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಳ್ಳುವವರಲ್ಲಿ ಹೆಚ್ಚಿನವರು ಡ್ರಗ್ಸ್‌ ಸೇವನೆಯ ಚಟವುಳ್ಳವರು ಎಂದು ವರದಿಗಳು ತಿಳಿಸುತ್ತವೆ. ದೇಶದ ಸಂಪತ್ತಾಗಿರುವ ಯುವಜನತೆಯನ್ನು ರಕ್ಷಿಸಬೇಕಾದ ಹೊಣೆ ನಮ್ಮ ಮೇಲಿದೆ. ಡ್ರಗ್ಸ್‌ ಜಾಲದ ಹಿಂದಿರುವ ಕಾಣದ ಕೈಗಳನ್ನು ಮಟ್ಟ ಹಾಕುವ ಕೆಲಸವೂ ನಡೆಯಬೇಕು’ ಎಂದು ಹೇಳಿದರು.

ರೋಟರಿ ಕ್ಲಬ್‌ ಉಡುಪಿ ರಾಯಲ್ ಅಧ್ಯಕ್ಷ ಯಶವಂತ್‌, ಕೆನರಾ ಮಾಲ್ ಮ್ಯಾನೇಜರ್‌ ಪ್ರಕಾಶ್‌ ಕಾಮತ್‌, ಆಶಿಷ್‌, ದಿನೇಶ್‌ ಹೆಗ್ಡೆ ಆತ್ರಾಡಿ ಉಪಸ್ಥಿತರಿದ್ದರು. ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್‌ ಸ್ವಾಗತಿಸಿದರು. ಶಿವಾನಂದ್‌ ಕಾರ್ಯಕ್ರಮ ನಿರ್ವಹಿಸಿದರು. ಡಿವೈಎಸ್‌ಪಿ ಜೈಶಂಕರ್‌ ವಂದಿಸಿದರು.

Advertisement

ಎಸ್‌ಪಿ ನಿಶಾ ಜೇಮ್ಸ್‌ ಅವರು ಮಾತನಾಡಿ, ‘ಮಾದಕ ದ್ರವ್ಯ ಸೇವನೆಯ ಆರಂಭಿಕ ಹಂತವನ್ನು ಯಾರೂ ಲಘುವಾಗಿ ತೆಗೆದುಕೊಳ್ಳಬಾರದು. ಇತ್ತೀಚೆಗೆ 5 ಕೆಜಿ ಗಾಂಜಾದೊಂದಿಗೆ ಪತ್ತೆಯಾಗಿದ್ದ ಮಣಿಪಾಲದ ವಿದ್ಯಾರ್ಥಿ, ಮೂಲತಃ ಪ.ಬಂಗಾಲದ ಯುವಕ ಈಗ ಜೈಲಿನಲ್ಲಿದ್ದಾನೆ. ಆತ ಗೆಳೆಯರ ಸಹವಾಸದಿಂದ ಚಟ ಬೆಳೆಸಿಕೊಂಡು ಮುಂದೆ ಗಾಂಜಾ ಮಾರಾಟಗಾರನಾಗಿ ಬದಲಾದ. ಇಂಥ ಪ್ರಕರಣಗಳಲ್ಲಿ 10ರಿಂದ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಹೇಳಿದರು.

10-20 ವರ್ಷ ಜೈಲು
ಎಸ್‌ಪಿ ನಿಶಾ ಜೇಮ್ಸ್‌ ಅವರು ಮಾತನಾಡಿ, ‘ಮಾದಕ ದ್ರವ್ಯ ಸೇವನೆಯ ಆರಂಭಿಕ ಹಂತವನ್ನು ಯಾರೂ ಲಘುವಾಗಿ ತೆಗೆದುಕೊಳ್ಳಬಾರದು. ಇತ್ತೀಚೆಗೆ 5 ಕೆಜಿ ಗಾಂಜಾದೊಂದಿಗೆ ಪತ್ತೆಯಾಗಿದ್ದ ಮಣಿಪಾಲದ ವಿದ್ಯಾರ್ಥಿ, ಮೂಲತಃ ಪ.ಬಂಗಾಲದ ಯುವಕ ಈಗ ಜೈಲಿನಲ್ಲಿದ್ದಾನೆ. ಆತ ಗೆಳೆಯರ ಸಹವಾಸದಿಂದ ಚಟ ಬೆಳೆಸಿಕೊಂಡು ಮುಂದೆ ಗಾಂಜಾ ಮಾರಾಟಗಾರನಾಗಿ ಬದಲಾದ. ಇಂಥ ಪ್ರಕರಣಗಳಲ್ಲಿ 10ರಿಂದ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next