Advertisement
ಇಂತಹದೊಂದು ವಿಸ್ಮಯ ಸೃಷ್ಟಿಯಾಗಿರುವುದು ಮಲ್ಪೆ ಬಂದರಿನ ಸಮೀಪ. ಬರೀ ಮರಳು, ಬಂಡೆಗಳ ನಡುವೆ ಇಲ್ಲೊಂದು ನಂದನವನ ತಲೆ ಎತ್ತಿದೆ. ಸುಡುಬಿಸಿಲಿನಲ್ಲೂ ನಳನಳಿಸುವ ಪ್ರಕೃತಿ ಸೌಂದರ್ಯ ಎಂಥವರನ್ನೂ ಕೈಬೀಸಿ ಕರೆಯುತ್ತದೆ. ಈ ಜಾಗವೇ ಮಲ್ಪೆ ತೀರದ ಕರಾವಳಿ ಕಾವಲು ಪಡೆಯ ಕಚೇರಿ.
ಈ ಕಚೇರಿಯ ಸುತ್ತಮುತ್ತ ಅದ್ಭುತವಾದ ಸಾವಯವ ಕೃಷಿ ಲೋಕ ತೆರೆದುಕೊಂಡಿದೆ. ಸಾಮಾನ್ಯ ಮಣ್ಣಿನಲ್ಲೇ ಬೆಳೆಯಲಾಗದ ಹಲವಾರು ವಿದೇಶಿ ತಳಿಯ ಹಣ್ಣಿನ ಮರಗಳು ಇಲ್ಲಿ ಸಮೃದ್ಧವಾಗಿ ಹಣ್ಣುಬಿಡುತ್ತಿವೆ. ಬೆಂಡೆ, ತೊಂಡೆ ಸೇರಿ ತರಕಾರಿ ಮತ್ತು ಸೊಪ್ಪುಗಳ ಪ್ರಪಂಚವೇ ಇದೆ. ಇಂಥದೊಂದು ಸುಂದರ ತೋಟವನ್ನು ನಿರ್ಮಾಣ ಮಾಡಿದ್ದು ಖುದ್ದು ಕಾವಲು ಪಡೆಯ ಸಿಬಂದಿ. ಕಡಲ ತಡಿಯ ರಕ್ಷಣೆ ಮಾಡುವ ಸಿಬಂದಿ ಇಲ್ಲಿ ಪ್ರಕೃತಿಯನ್ನೂ ಅಷ್ಟೇ ಪ್ರೀತಿಯಿಂದ ರಕ್ಷಿಸುತ್ತಿದ್ದಾರೆ.
Related Articles
ಮರಳಿನಲ್ಲಿ ನೀರು ನಿಲ್ಲುವುದಿಲ್ಲ. ಹೀಗಾಗಿ ನೀರು ಬೇಕಾಗಿರುವ ಭತ್ತ, ಹೆಸರು ಜೋಳ, ರಾಗಿ, ಉದ್ದು ಮೊದಲಾದ ಬೆಳೆಗಳನ್ನು ಬೆಳೆಯಲು ಕೆಂಪು ಮಣ್ಣಿನ ಹೊಲವನ್ನೇ ಸೃಷ್ಟಿಸಲಾಗಿದೆ. 15ರಿಂದ 20 ಸೆಂಟ್ಸ್ ಮರಳು ಭೂಮಿಯನ್ನು ಜೇಡಿಮಣ್ಣು ಮತ್ತು ಕೆಂಪು ಮಣ್ಣು ಬಳಸಿ ಕೃಷಿಗೆ ಪೂರಕವಾಗಿ ರೂಪಿಸಲಾಗಿದೆ.
Advertisement
ಇಲ್ಲೊಂದು ಮಾದರಿ ಗೋಶಾಲೆ ಇದೆ. ಜೆರ್ಸಿ ತಳಿಯ ಕೃಷ್ಣಾ, ಎಚ್‌ಎಫ್ ತಳಿಯ ರಾಧಾ, ದೇಶಿ ತಳಿಯ ಗೀತಾ ಎಂಬ ಮೂರು ಹಸುಗಳಿವೆ. ಒಂದು ಪುಟ್ಟ ಕರು. ದಿನಕ್ಕೆ 10ರಿಂದ 12 ಲೀಟರ್ ಹಾಲು ಕರೆಯಲಾಗುತ್ತಿದ್ದು, ಅದರ ಹಣವನ್ನು ಹಸುಗಳ ಪೋಷಣೆಗೆ ಬಳಸಿಕೊಳ್ಳಲಾಗುತ್ತಿದೆ. ಹೇಗಿತ್ತು ಹೇಗಾಯ್ತು ಗೊತ್ತಾ?
2014ರಲ್ಲಿ ಮಲ್ಪೆ ಬೀಚ್ ಸಮೀಪದ 1 ಎಕರೆ ಜಾಗದಲ್ಲಿ ಕರಾವಳಿ ಕಾವಲು ಪಡೆಯ ಕಚೇರಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಕಚೇರಿಯ ಆವರಣದ ಒಳಗಿನ 1 ಎಕರೆ ಜಾಗದಲ್ಲಿ ಮರಳು ಬಿಟ್ಟರೆ ಮತ್ತೇನೂ ಕಾಣ ಸಿಗುತ್ತಿರಲಿಲ್ಲ. ಆಗ ಹುಟ್ಟಿಕೊಂಡ ಪುಟ್ಟ ಆಲೋಚನೆ ಈಗ ಇಡೀ ಪರಿಸರವನ್ನು ಹಸುರುಮಯಗೊಳಿಸಿದೆ. ಲೋಡುಗಟ್ಟಲೆ ಕೆಂಪು ಮಣ್ಣು ಬಳಸಿ ಸ್ಥಳವನ್ನು ಸಮತಟ್ಟು ಮಾಡಲಾಗಿದೆ. ಗಿಡಗಳನ್ನು ನೆಟ್ಟು ಬೋರ್‌ವೆಲ್‌ನಿಂದ ನೀರು ಪೂರೈಕೆ ಮಾಡಿ ಪೋಷಿಸಲಾಗುತ್ತಿದೆ.
ಕರಾವಳಿ ಕಾವಲು ಪಡೆಯ ಜಾಗವನ್ನು ನಂದನವನವಾಗಿ ಮಾಡಿದ್ದರ ಹಿಂದೆ ಇಲ್ಲಿನ ಸಿಬಂದಿ, ಹೋಮ್ ಗಾರ್ಡ್‌ಗಳ ಶ್ರಮವಿದೆ, ಅಧಿಕಾರಿಗಳ ಬೆಂಬಲವಿದೆ. ಹೆಡ್ ಕಾನ್‌ಸ್ಟೆಬಲ್ ಸಂತೋಷ ಶೆಟ್ಟಿ ಇದರಲ್ಲಿ ಮುಂಚೂಣಿ. ಅವರು ದಶಕದ ಹಿಂದೆ ಒಂದೇ ಒಂದು ಅತ್ತಿ ಮರವಿದ್ದ ಜಾಗವನ್ನು ಹೂವು-ಹಣ್ಣು ಕೃಷಿ ಉದ್ಯಾನ ಮಾಡಿದ್ದಾರೆ. ಅಂದ ಹಾಗೆ ಈ ಆಸಕ್ತಿಗೆ ಮೂಲ ಕಾರಣ ಸಂತೋಷ್ ಶೆಟ್ಟಿ ಅವರ ತಾಯಿ ರಾಜೀವಿ ಶೆಡ್ತಿ. ಅವರು ಕೃಷಿ ಪ್ರಿಯರಾಗಿದ್ದು, ಮನೆಯಲ್ಲಿ ಅನೇಕ ರೀತಿಯ ಹೂ- ಹಣ್ಣು, ತರಕಾರಿ ಬೆಳೆಯುತ್ತಿದ್ದರು. ಒಂಬತ್ತು ವರ್ಷಗಳಿಂದ ಕರಾವಳಿ ಕಾವಲುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಕೆಲಸದ ನಡುವೆ ಬಿಡುವಿದ್ದಾಗ ಈ ಕೆಲಸ ಮಾಡುತ್ತಾರೆ. ಉಳಿದವರೂ ಅವರ ಬೆಂಬಲಕ್ಕೆ ನಿಲ್ಲುತ್ತಾರೆ.
-ಗೋಶಾಲೆ, ಸಾವಯವ ಕೃಷಿ ತೋಟದ ನಿರ್ವಹಣೆ ಯನ್ನು ಸ್ವತಃ ಇಲ್ಲಿನ ಸಿಬಂದಿಯೇ ನಿರ್ವಹಿಸುತ್ತಾರೆ.
-ಇಲ್ಲಿ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಗೋಮೂತ್ರ, ಗೋಮಯ ಮತ್ತು ತರಗೆಲೆಗಳ ಕಸಗಳನ್ನು ದಾಸ್ತಾನು ಮಾಡಿ ಎರೆಹುಳುವಿನ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕುತ್ತಾರೆೆ.
-ಹಸು, ಕೋಳಿ ಮತ್ತು ಬಾತುಕೋಳಿಗಳಿಗೆ ಗದ್ದೆಯಲ್ಲೇ ಬೆಳೆದ ಭತ್ತ, ಹೆಸರು, ಜೋಳವನ್ನು ಆಹಾರದ ರೂಪದಲ್ಲಿ ನೀಡಲಾಗುತ್ತಿದೆ.
-ನರ್ಸರಿಯ ಗಿಡಗಳನ್ನು ಸಿಬಂದಿ ನಿವೃತ್ತರಾದಾಗ ಅಥವಾ ಗೃಹ ಪ್ರವೇಶ/ ಶುಭ ಸಮಾರಂಭದಲ್ಲಿ ನೀಡಲಾಗುತ್ತದೆ. ಏನೇನಿದೆ ಈ ತೋಟದಲ್ಲಿ?
-ಈ ತೋಟದಲ್ಲಿ ಒಂದು ದಶಕದಿಂದ 30 ತೆಂಗಿನ ಮರ ಮತ್ತು ಹಲವು ಅಡಿಕೆ ಮರಗಳನ್ನು ಪೋಷಿಸಲಾಗುತ್ತಿದೆ.
-ಪೇರಳೆ, ದಾಳಿಂಬೆ, ವಿವಿಧ ತಳಿಯ ಮಾವು, 8 ಬಗೆಯ ಬಾಳೆ, ವಿವಿಧ ಹಲಸು, ತಾರೆ ಹಣ್ಣು, ಗೇರು, ಸಪೋಟ ಇದೆ.
-ಬಿಂಬುಲಿ, ಲಿಂಬೆ, ಗಜಲಿಂಬೆ, ಜಂಬು ನೇರಳೆ, ವಿವಿಧ ಬಗೆಯ ಚಿಕ್ಕ ನೇರಳೆ, ಬುಗರಿ ಹಣ್ಣುಗಳ ಲೋಕವೇ ಇದೆ.
-ದೀವಿ ಹಲಸು, 2 ತಳಿಯ ನೆಲ್ಲಿಕಾಯಿ, ರಾಮಫಲ, ಸೀತಾಫಲ, ಹನುಮ ಫಲ, ಪಪಾಯ, ಕಬ್ಬು ಬೆಳೆಯಲಾಗುತ್ತದೆ.
-ಫ್ಯಾಷನ್ ಫ್ರೂಟ್ , ಡ್ರ್ಯಾಗನ್ ಫ್ರೂಟ್ ಸೇರಿದಂತೆ ವಿದೇಶಿ ತಳಿಯ ಹಣ್ಣುಗಳಿವೆ.
-ಮಲ್ಲಿಗೆ ಮಡಿಗಳು, 20 ಬಣ್ಣದ ದಾಸವಾಳ, ಸಂಪಿಗೆ, ವಿವಿಧ ಬಣ್ಣದ ಗುಲಾಬಿ, ಎರಡು ಬಗೆಯ ತಾವರೆ ಇಲ್ಲಿವೆ.
-ನುಗ್ಗೆಕಾಯಿ, ಬೆಂಡೆಕಾಯಿ, ಬದನೆ, ಕಹಿ ಬೇವು, ಮರಗೆಣಸು ಸೇರಿದಂತೆ ಹಲವಾರು ಬಗೆಯ ತರಕಾರಿ ಗಿಡಗಳಿವೆ. -ದಿವ್ಯಾ ನಾಯ್ಕನಕಟ್ಟೆ