Advertisement

ಮಾನಿನಿಯರ ಮನಸೆಳೆವ ಕರಕುಶಲ ಮೇಳ

01:17 AM Jul 20, 2019 | Lakshmi GovindaRaj |

ಬೆಂಗಳೂರು: ಒಂದೇ ಸೂರಿನಡಿ ವಿವಿಧ ಬಗೆಯ ಕರಕುಶಲ ವಸ್ತುಗಳು ದೊರೆಯುವ “ಮಾರಾಟ ಮತ್ತು ಪ್ರದರ್ಶನ ಮೇಳ’ ಶುಕ್ರವಾರ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆರಂಭವಾಗಿದೆ. ಮಾನಿನಿಯರ ಚಿತ್ತಾಕರ್ಷಿಸುತ್ತಿರುವ ಈ ಮೇಳ ಜು.28ರವರೆಗೂ ನಡೆಯಲಿದೆ.

Advertisement

ವರ ಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪ್ರಾರಂಭವಾಗಿರುವ ಈ ಮೇಳದಲ್ಲಿ ಮಣಿಪುರ, ನಾಗಾಲ್ಯಾಂಡ್‌ ಸೇರಿದಂತೆ ಹಲವು ರಾಜ್ಯಗಳ ಸೀರೆಗಳು ದೊರೆಯಲಿವೆ. ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳು, ಲೋಹದ ವಿಗ್ರಹಗಳು, ಮಣ್ಣಿನ ಸಾಮಾಗ್ರಿಗಳು, ಗೃಹ ಬಳಕೆ ವಸ್ತುಗಳು, ವಿಭಿನ್ನ ಶೈಲಿಯ ಕಿವಿಯೊಲೆಗಳು, ಆಭರಣಗಳು ಮಾನಿನಿಯರ ಮನಸೆಳೆಯುತ್ತಿವೆ.

ಜತೆಗೆ ಮನೆ ಅಲಂಕಾರಿಕ ಉತ್ಪನ್ನಗಳು, ಮರದ ಆಟಿಕೆಗಳು, ಪೀಠೊಪಕರಣ, ಮ್ಯಾಟ್‌ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಇಲ್ಲಿಗೆ ಭೇಟಿ ನೀಡಲಿರುವ ಗ್ರಾಹಕರಿಗೆ ದೊರೆಯಲಿದೆ. ವರ ಮಹಾಲಕ್ಷ್ಮೀ ಹಬ್ಬವನ್ನು ವಿಶೇಷವಾಗಿ ಆಚರಿಸಲು ಬೇಕಾದ ಎಲ್ಲಾ ಬಗೆಯ ವಸ್ತುಗಳು ಮೇಳದಲ್ಲಿ ಸಿಗಲಿವೆ.

ಮೇಳಕ್ಕೆ ಚಾಲನೆ ನೀಡಿದ, ಮಾಸ್ಕೋನಲ್ಲಿ ನಡೆದ ಮಿಸ್‌ ಗ್ಲೋಬಲ್‌ ಇಂಟರ್‌ ನ್ಯಾಷನಲ್‌ ಬ್ಯೂಟಿ ಪೆಜೆಂಟ್‌ ವಿಜೇತೆ ರೂಪಾ ಮೌಳಿ, ವಿಭಿನ್ನ ಬಗೆಯ ಓಲೆಗಳು, ಆಭರಣಗಳು ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಹಲವು ವಸ್ತುಗಳು ಇಲ್ಲಿ ದೊರೆಯುತ್ತಿದ್ದು, ಮಾನಿನಿಯರನ್ನು ಆಕರ್ಷಿಸುವಲ್ಲಿ ಈ ಮೇಳ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಂಯೋಜಕ ಅಫ್ತಾಬ್‌ ಮಾತನಾಡಿ, ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದು ಮೇಳದ ಉದ್ದೇಶವಾಗಿದೆ. ರಾಜಸ್ಥಾನ ಸೇರಿದಂತೆ ದೇಶದ ವಿಭಿನ್ನ ಬಗೆಯ ಕರಕುಶಲ ಉತ್ಪನ್ನಗಳು ಇಲ್ಲಿ ದೊರೆಯಲಿವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next