ಬದಿಯಡ್ಕ : ಪಳ್ಳತ್ತಡ್ಕ ಕರಿಪಾಡಗಂ ತರವಾಡು ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಧಾಮದ ಮೊಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ನಾವು ಮಾಡುವ ಕಾರ್ಯದ ಒಳಸತ್ವವನ್ನು ಮುಂದಿನ ಜನಾಂಗಕ್ಕೆ ಸರಿಯಾದ ರೀತಿಯಲ್ಲಿ ಮನದಟ್ಟು ಮಾಡಿಕೊಡಬೇಕು. ಅದಕ್ಕೆ ನಾವು ಮಾದರಿಯಾಗಬೇಕು. ಯಾವುದೇ ದೈವ ದೇವರುಗಳ ಕಾರ್ಯವಿರಲಿ, ಮಂಗಳ ಕಾರ್ಯಗಳಿರಲಿ ಅದನ್ನು ನಿಷ್ಠೆಯಿಂದ, ಇತರರಿಗೂ ಸ್ಪೂರ್ತಿಯಾಗುವಂತೆ ಮಾಡಿದಾಗ ಸುಸಂಸ್ಕೃತ ಸಮಾಜದ ನಿರ್ಮಾಣ ಸುಲಭ. ಸಂಸ್ಕೃತಿಯನ್ನು ನಾವು ದೂರವಿಟ್ಟು ಅದು ನಾಶವಾಗುತ್ತಿದೆ ಎನ್ನುವುದಕ್ಕಿಂತ ನಾವು ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸುವ ಮೂಲಕ ನಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡೋಣ, ಮನೆಯಲ್ಲಿ ನಡೆಯುವ ಮದುವೆ ಮುಂತಾದ ಮಂಗಳ ಕಾರ್ಯಕ್ರಮಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳ ಅನುಸರಿಸದೇ ಧಾರ್ಮಿಕತೆಗೆ ಒತ್ತುವಿರುವಂತಹ ವಿಷಯಗಳನ್ನು ಅಳವಡಿಸೋಣ ಎಂದು ಅಭಿಪ್ರಾಯಪಟ್ಟರು.
ರಾಜವೈಭವದಿಂದ ಮೆರೆದ ಉತ್ಕೃಷ್ಟವಾದ ಹಿನ್ನಲೆಯಿರುವ ಈ ತರವಾಡು ಮತ್ತೂಮ್ಮೆ ಅದೇ ವೈಭವದಿಂದ ಪುನಶ್ಚೇತನಗೊಳ್ಳುವಂತಾಗಿದೆ ಶಕ್ತಿಯ ಕೇಂದ್ರವಾದ ಈ ದೈವಸ್ಥಾನವು ಇಡೀ ಪರಿಸರದ ಉದ್ದಾರಕ್ಕೆ ಕಾರಣವಾಗಲಿದೆ. ಪಳ್ಳತ್ತಡ್ಕ ಎಂಬುದು ಧಾರ್ಮಿಕ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಪ್ರಬಲ ಶಕ್ತಿ ಕೇಂದ್ರವಾಗಿದೆ ಎಂದು ಹೇಳಿದರು.
ಕೇರಳ ಕ್ಷೇತ್ರ ಆಚಾರ ಸಂರಕ್ಷಣಾ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರಭಾಷಣ ರತ್ನಂ ಮಾಧವನ್ ಮಾಸ್ತರ್ ಪಯ್ನಾವೂರು ಧಾರ್ಮಿಕ ಭಾಷಣ ಮಾಡಿ ಸಮುದಾಯದವರು ಸಂಘಟಿತರಾಗಿ ತಮ್ಮ ತರವಾಡಿನ ಮಹತ್ವವನ್ನರಿತು ಅದರ ಮೇಲಿನ ಅಭಿಮಾನದಿಂದ, ಭಕ್ತಿಯಿಂದ, ಛಲ ಮತ್ತು ಸಮರ್ಪಣಾ ಮನೋಭಾವದಿಂದ ಶ್ರಮಿಸಿದರೆ ಕೆಲವೇ ತಿಂಗಳಲ್ಲಿ ಕೆಲಸ ಪೂರ್ತಿಗೊಳಿಸಿ ಪ್ರತಿಷ್ಠಾ ಕಾರ್ಯ ನಡೆಸಲು ಸಾಧ್ಯ ಎಂಬುದಕ್ಕೆ ಈ ತರವಾಡು ಸಾಕ್ಷಿಯಾಯಿತು ಜನರೊಳಗಿನ ಒಗ್ಗಟ್ಟು ಮತ್ತು ಸಮಾನ ಮನಸ್ಕತೆ ಹಾಗೂ ವಿಶಾಲವಾದ ಚಿಂತನೆ ಇದ್ದಾಗ ಯಾವುದೇ ಕೆಲಸವು ಸುಲಭಸಾಧ್ಯ. ಭಕ್ತಿ ಮತ್ತು ಶ್ರದ್ಧೆ ಎಲ್ಲದಕ್ಕೂ ಅಡಿಪಾಯ. ನಂಬಿಕೆ ಗಟ್ಟಿಗೊಂಡಾಗ ನಮ್ಮೊಳಗಿನ ಪ್ರಜ್ಞೆ ಜಾಗೃತವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಖೀಲ ಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಅಧ್ಯಕ್ಷ ನಾರಾಯಣ ಮಣಿಯಾಣಿ ನೀರ್ಚಾಲು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಮಾಧವ ಚೆಟ್ಟಿಯಾರ್, ಚಂದ್ರ ಮಣಿಯಾಣಿ, ರಮಣಿ, ಕೋಕಿಲಾಕ್ಷಿ ಮುಂತಾದವರನ್ನು ಸನ್ಮಾನಿಸಲಾಯಿತು.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಗ್ರಾ.ಪಂ. ಸದಸ್ಯರಾದ ಪ್ರಸನ್ನ ಕುಮಾರಿ, ಪುಷ್ಪ ಕುಮಾರಿ, ಲಕ್ಷ್ಮಿ ನಾರಾಯಣ ಪೈ, ಪಳ್ಳತ್ತಡ್ಕ ಒತ್ತೆಕೋಲ ಸಮಿತಿ ಅಧ್ಯಕ್ಷ ಉದಯ ಕೇಶವ ಭಟ್, ರಾಮ ಮಾಸ್ಟರ್ ಇಕ್ಕೇರಿ, ಶಿವಪ್ರಸಾದ ರೈ, ಗೋಪಾಲನ್ ಕೀಕ್ಕಾನ, ಅಣ್ಣು ನಾಯ್ಕ, ಉಷಾ ರಾಮನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಧವ ಚೆಟ್ಟಿಯಾರ್ ಉಪಸ್ಥಿತರಿದ್ದರು. ಗೋಪಾಲನ್ ಇರಿಯಣ್ಣಿ ಸ್ವಾಗತಿಸಿ ಕುಂಞಿರಾಮ ವಂದಿಸಿದರು.