Advertisement

ಬಲಿಪ ನಾರಾಯಣ ಭಾಗವತರಿಗೆ ಮಣಿಕೃಷ್ಣ ಸ್ವಾಮಿ ಅಕಾಡೆಮಿ ಸಮ್ಮಾನ

10:00 PM Nov 06, 2019 | mahesh |

ಮೂಡುಬಿದಿರೆ: ಯಕ್ಷಗಾನ ಸಂಗೀತಕ್ಕೆ ನೀಡಿರುವ ಕೊಡುಗೆಯನ್ನು ಮನ್ನಿಸಿ ಹಿರಿಯ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತ ಅವರನ್ನು ನೂಯಿಯ ಭಾಗವತರ ಮನೆಯಂಗಳದ “ಬಲಿಪ ಭವನ’ದಲ್ಲಿ ಮಂಗಳೂರಿನ ಮಣಿಕೃಷ್ಣ ಸ್ವಾಮಿ ಅಕಾಡೆಮಿ ವತಿಯಿಂದ ಬುಧವಾರ ಸಮ್ಮಾನಿಸಲಾಯಿತು.

Advertisement

ಮಣಿ ಕೃಷ್ಣಸ್ವಾಮಿ ಅಕಾಡೆಮಿ ಏರ್ಪಡಿಸಿರುವ “ರಾಗ ಸುಧಾ ರಸ -2019′ ರಾಷ್ಟ್ರೀಯ ಸಂಗೀತೋತ್ಸವದ ಪೂರ್ವಭಾವಿಯಾಗಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಕ.ಸಾ.ಪ. ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ವಹಿಸಿದ್ದರು. ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಬಲಿಪ ಭಾಗವತರನ್ನು ಅಭಿನಂದಿಸಿ, ಮಾತನಾಡಿದರು.

ಸಮ್ಮಾನಿಸುವುದು ಇದೇ ಮೊದಲು
ಬಲಿಪ ಭಾಗವತರು ಐವತ್ತು ರಾಗಗಳ ಗಟ್ಟಿ ಭಾಗವತರು. ಭಾಗವತಿಕೆಯ ಮೂಲಕ ಯಕ್ಷಗಾನ ಸಂಗೀತಕ್ಕೆ ಮಹತ್ವದ ಕೊಡುಗೆ ನೀಡಿದವರು. ಯಕ್ಷಗಾನ ಕಲಾವಿದರೊಬ್ಬರಿಗೆ ಅಭಿಮಾನಿಗಳು ಭವನವೊಂದನ್ನು ನಿರ್ಮಿಸಿಕೊಟ್ಟಿರುವುದು ಸರ್ವ ಪ್ರಥಮ; ಸಂಗೀತ ಅಕಾಡೆಮಿಯೊಂದು ಯಕ್ಷಗಾನ ಭಾಗವತರನ್ನು ಸಮ್ಮಾನಿಸುತ್ತಿರುವುದೂ ಇದೇ ಮೊದಲು. ಇದು ರಾಷ್ಟ್ರಪ್ರಶಸ್ತಿಗೆ ಸಮ ಎಂದು ಡಾ| ಜೋಶಿ ಭಿಪ್ರಾಯಪಟ್ಟರು.

ಪುಸ್ತಕರೂಪದಲ್ಲಿ ಬಲಿಪರು
ಮಣಿ ಕೃಷ್ಣ ಸ್ವಾಮಿ ಅಕಾಡೆಮಿಯ ಅಧ್ಯಕ್ಷ ಕ್ಯಾ| ಗಣೇಶ್‌ ಕಾರ್ಣಿಕ್‌, ಮಾತನಾಡಿ, ಅದ್ಭುತ ಪ್ರತಿಭೆ ಬಲಿಪ ನಾರಾಯಣ ಭಾಗವತರನ್ನು ಸಂಪೂರ್ಣವಾಗಿ ಬಲ್ಲ ಡಾ| ಜೋಶಿಯಂಥವರು ಪುಸ್ತಕ ರೂಪದಲ್ಲಿ ಕಟ್ಟಿಕೊಡಬೇಕು’ ಎಂದು ವಿನಂತಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಬಲಿಪರ ಕುರಿತಾದ ಅಧ್ಯಯನ, ಪುಸ್ತಕ ಪ್ರಕಟನೆಯೇ ಮೊದಲಾದ ಕಾರ್ಯಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.

ಅತಿಥಿಗಳಾದ ನಾದಸ್ವರ ಕಲಾವಿದ ನಾಗೇಶ್‌ ಎ. ಬಪ್ಪನಾಡು, ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಹಾಗೂ ಶ್ರೀಪತಿ ಭಟ್‌ ಅವರು ಬಲಿಪ ಭಾಗವತರನ್ನು ಅಭಿವಂದಿಸಿ ಮಾತನಾಡಿದರು. ಬಲಿಪರ ಮೊಮ್ಮಕ್ಕಳು ವಿನಾಯಕ ಸ್ತುತಿಗೈದರು. ಬಲಿಪರ ಕೂಡುಕುಟುಂಬದ 20 ಮಂದಿ ಸದಸ್ಯರೆಲ್ಲರೂ ಒಳಗೊಂಡಂತೆ ಅಭಿಮಾನಿಗಳು ಪಾಲ್ಗೊಂಡಿದ್ದರು. ಕೀರ್ತನಾ ರಾವ್‌ ಕೀರ್ತನೆ ಹಾಡಿದರು.

Advertisement

ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ರಾವ್‌ ಸ್ವಾಗತಿಸಿ, 15 ವರ್ಷದ ಕೊನೆಯ ಕಾರ್ಯಕ್ರಮವಾಗಿ ಬಲಿಪರ ಸಮ್ಮಾನ ಕಾರ್ಯಕ್ರಮ ಏರ್ಪಡಿಸಿದ್ದು 16ನೇ ವರ್ಷದ ಪ್ರಾರಂಭದ ಕಾರ್ಯಕ್ರಮವಾಗಿ ಮಂಗಳೂರಿನಲ್ಲಿ ರಾಷ್ಟ್ರೀಯ ಸಂಗೀ ತೋತ್ಸವ ಏರ್ಪಡಿಸಲಾಗಿದೆ ಎಂದರು.

ಕಲೆ ಹೋಲಿಕೆ ಸಲ್ಲ
ಬ್ರಹ್ಮಾಂಡವೆಂಬಂತೆ ಪ್ರಚಾರ ಮಾಡುತ್ತಿರುವ ವರ್ತಮಾನ ಕಾಲದಲ್ಲಿ ಬಲಿಪರು ಏರಿದ ಎತ್ತರವನ್ನು ನಾವೆಲ್ಲ ಬೆರಗುಗಣ್ಣುಗಳಿಂದ ನೋಡುತ್ತಿದ್ದೇವೆ. ಪ್ರತಿಯೊಂದು ಕಲೆಯೂ ತನ್ನದೇ ಆದ ವೈಶಿಷ್ಟ ಮಾನ್ಯ. ಒಂದು ಕಲೆ ಯನ್ನು ಮತ್ತೂಂದರ ಜತೆ ಹೋಲಿ ಸುವುದು ಸಲ್ಲ ಎಂದು ಡಾ| ಜೋಶಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next