Advertisement

ಬಿಸಿಲಲ್ಲೇ ಪಾಠ ಕೇಳಬೇಕಿದೆ ಮಣಿಕ್ಕರ ಶಾಲೆಯ ಮಕ್ಕಳು

12:16 AM Jan 15, 2022 | Team Udayavani |

ಸವಣೂರು: ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಉರಿಬಿಸಿಲಿನಲ್ಲಿ ಒಣಗಿ ಕೊಂಡು ಪಾಠ ಕೇಳಬೇಕಾದ ದಯನೀಯ ಸ್ಥಿತಿಯಲ್ಲಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈ ಶಾಲೆ ಗ್ರಾಮೀಣ ಭಾಗದಲ್ಲಿದ್ದು, 88ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ಮಂದಿ ಬಡ ಕೂಲಿ ಕಾರ್ಮಿಕರ ಮಕ್ಕಳು. ಈ ಶಾಲೆಯಲ್ಲಿ ಸದ್ಯ ಶಿಕ್ಷಕರ ಕೊರತೆಯಿಲ್ಲ. ಆದರೆ ತರಗತಿ ಕೋಣೆಗಳು ಬಿರುಕು ಬಿಟ್ಟಿವೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಛಾವಣಿ- ಗೋಡೆ ಬಿದ್ದರೆ ಅಚ್ಚರಿಯಿಲ್ಲ. ಶಾಲೆಯಲ್ಲಿರುವ ನಲಿ-ಕಲಿ ಕೊಠಡಿ ಬಿಟ್ಟರೆ ಉಳಿದ ಎಲ್ಲ ಕೊಠಡಿಗಳನ್ನು ಇದೇ ಅವಸ್ಥೆ.
ಹೀಗಾಗಿ 1ರಿಂದ 7ನೇ ತರಗತಿಯ ಮಕ್ಕಳು ಶಾಲಾ ರಂಗ ಮಂಟಪದ ಜಗಲಿಯಲ್ಲಿ ಬಿಸಿಲಿನಲ್ಲಿ ಒಣಗುತ್ತ ಪಾಠ ಕೇಳುವ ಸ್ಥಿತಿಯಲ್ಲಿದ್ದಾರೆ.

ಮನವಿ ನೀಡಿದರೂ ಸ್ಪಂದನೆ ಇಲ್ಲ
ಶಾಲೆಯ ದುರವಸ್ಥೆ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಶಾಲೆ ಅಪಾಯ
ದಲ್ಲಿದೆ, ದುರಸ್ತಿ ಮಾಡಿ ಅಥವಾ ಹೊಸ ಕಟ್ಟಡ ನಿರ್ಮಿಸಿ ಎಂದು ಹೆತ್ತವರು, ಶಿಕ್ಷಕರು, ಎಸ್‌ಡಿಎಂಸಿಯವರು ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದಾರೆ.

5 ವರ್ಷಗಳಿಂದ ಈ ಶಾಲೆ ಅಪಾಯದ ಎಚ್ಚರಿಕೆ ನೀಡುತ್ತಲೇ ಇದೆ. ಹೆತ್ತವರು ನಿತ್ಯವೂ ಆತಂಕ, ಭಯದಿಂದಲೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ನಮ್ಮ ಮಕ್ಕಳ ಜೀವಕ್ಕೆ ಬೆಲೆಯಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ, ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದಲ್ಲಿ ವರ್ಗಾವಣೆ ಪತ್ರ ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಒನ್‌ಪ್ಲಸ್‌ 9ಆರ್‌ಟಿ ಬಿಡುಗಡೆ; 50 ಮೆಗಾಪಿಕ್ಸೆಲ್‌ ಟ್ರಿಪಲ್‌ ಕ್ಯಾಮೆರಾ ಸೌಲಭ್ಯ

Advertisement

ಎಲ್ಲ ಕೊಠಡಿ ಬಂದ್‌!
ಯಾವಾಗ ಬೇಕಾದರೂ ಬೀಳುವ ಸ್ಥಿತಿ ಇರುವುದರಿಂದ ಶಾಲೆಯ ಎಲ್ಲ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ನಲಿ-ಕಲಿ ಕೊಠಡಿ, ರಂಗ ಮಂದಿರದಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾರೆ. ಹಳೆಯ ಕಟ್ಟಡ ಏಲಂ ಶಾಲೆಯ ಒಂದು ಹಳೆಯ ಕಟ್ಟಡವನ್ನು ಏಲಂ ಮಾಡಲಾಗಿದ್ದು, ಅದೂ ತೆರವಾಗದೆ ಉಳಿದುಕೊಂಡಿದೆ.

ಶಾಲೆಯ ದುರವಸ್ಥೆ ಗಮನಕ್ಕೆ ಬಂದಿದೆ. ಹೊಸ ಕಟ್ಟಡ ಕಟ್ಟಿಸುವ ಬಗ್ಗೆ ತಾಲೂಕು ಬಿಇಒ ಅಂದಾಜು ಪಟ್ಟಿ ತಯಾರಿಸಿದ್ದು, ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಸೋಮವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲಿದ್ದು, ಈ ಸಂದರ್ಭದಲ್ಲಿ ವಿಷಯವನ್ನು ಮತ್ತೆ ಅವರ ಗಮನಕ್ಕೆ ತರಲಾಗುವುದು.
– ಸುಧಾಕರ್‌,
ಡಿಡಿಪಿಐ, ದ.ಕ.

ಈ ಶಾಲೆಗೆ ದಾನಿಗಳ ನೆರವಿನಿಂದ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದೆ. ಹೆತ್ತವರು, ಶಾಲಾಭಿವೃದ್ಧಿ ಸಮಿತಿಯವರು ಸೇರಿ ಅಡಿಕೆ ತೋಟ ಮಾಡಿದ್ದಾರೆ, ಹಣ್ಣು ಹಂಪಲು ಗಿಡಗಳನ್ನು ಬೆಳೆಸಿದ್ದಾರೆ. ಇಷ್ಟೆಲ್ಲ ಇದ್ದರೂ ತರಗತಿ ಕೊಠಡಿಗಳು ಬೀಳುವ ಹಂತ ತಲುಪಿರುವುದು ವಿಪರ್ಯಾಸವೇ ಸರಿ.
– ಇಬ್ರಾಹಿಂ ಅಂಬಟೆಗದ್ದೆ, ಮೋನಪ್ಪ ಎಸ್‌ಡಿಎಂಸಿ ಸದಸ್ಯರು

ಮಣಿಕ್ಕರ ಶಾಲೆಯ ವಿದ್ಯಾರ್ಥಿಗಳ ಹೆತ್ತವರ ಅಳಲನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಪುರಸ್ಕರಿಸದೆ ಇದ್ದಲ್ಲಿ ಶಾಲೆಯಲ್ಲಿ ಅಪಾಯ ನಿಶ್ಚಿತ. ಈಗಾಗಲೇ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ.
-ರಹಿಮಾನ್‌, ಎಸ್‌ಡಿಎಂಸಿ ಅಧ್ಯಕ್ಷರು

ಮಕ್ಕಳನ್ನು ಶಾಲೆಗೆ ಕಳುಹಿಸಲು ವೇದನೆಯಾಗುತ್ತದೆ. ಪ್ರತಿನಿತ್ಯ ಮಕ್ಕಳು ಬಿಸಿಲಿನಲ್ಲಿ ಒಣಗಬೇಕಾದ ಪರಿಸ್ಥಿತಿ ಇದೆ. ಅವರ ಸ್ಥಿತಿ ಕಣ್ಣೀರು ತರಿಸುತ್ತದೆ.
ರಶ್ಮಿ, ಹೆತ್ತವರು

Advertisement

Udayavani is now on Telegram. Click here to join our channel and stay updated with the latest news.

Next