Advertisement

ಮತದಾನದ ಕನಿಷ್ಠ 72 ಗಂಟೆ ಮುನ್ನ ಪ್ರಣಾಳಿಕೆ ಬಿಡುಗಡೆ

10:05 AM Jan 12, 2019 | Harsha Rao |

ಹೊಸದಿಲ್ಲಿ: ಮತದಾನ ನಡೆಯುವ ನಿಗದಿತ ದಿನಾಂಕಕ್ಕಿಂತ 48 ಗಂಟೆಗಳ ಮೊದಲೇ ಬಹಿರಂಗ ಪ್ರಚಾರಕ್ಕೆ ಹೇಗೆ ತೆರೆ ಬೀಳುತ್ತದೋ, ಅದೇ ನಿಯಮವನ್ನು ಮುದ್ರಣ ಮಾಧ್ಯಮ, ಆನ್‌ಲೈನ್‌ನಲ್ಲಿರುವ ಅದರ ಆವೃತ್ತಿ, ಸಾಮಾಜಿಕ ಜಾಲತಾಣ, ಇಂಟರ್‌ನೆಟ್‌, ಕೇಬಲ್‌ ಚಾನೆಲ್‌ಗ‌ಳಿಗೂ ವಿಸ್ತರಿಸಬೇಕು. ಜತೆಗೆ ಮೊದಲ ಹಂತದ ಮತದಾನ ಮುಕ್ತಾಯವಾಗುವ ಕನಿಷ್ಠ 72 ಗಂಟೆಗಳಿಗೆ ಮುನ್ನವೇ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಚುನಾವಣಾ ಆಯೋಗ ರಚಿಸಿದ್ದ 9 ಸದಸ್ಯರ ಸಮಿತಿ ಶಿಫಾರಸು ಮಾಡಿದೆ.

Advertisement

ಅದಕ್ಕಾಗಿ ಮಾದರಿ ನೀತಿ ಸಂಹಿತೆ (ಎಂಸಿಸಿ)ಗೆ ಭಾರೀ ತಿದ್ದುಪಡಿ ತರಲು ಸಲಹೆ ನೀಡಿದೆ. ಜತೆಗೆ ಜನ ಪ್ರಾತಿನಿಧ್ಯ ಕಾಯ್ದೆ (ಆರ್‌.ಪಿ.ಆ್ಯಕ್ಟ್) 1956ರ ಸೆಕ್ಷನ್‌ 126ಕ್ಕೆ ತಿದ್ದುಪಡಿ ತರಬೇಕು ಎಂದೂ ಹೇಳಿದೆ. ಮಾಧ್ಯಮ ಹಲವು ರೀತಿಗಳಲ್ಲಿ ವಿಸ್ತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಅಗತ್ಯ ಎಂದು ಸಮಿತಿ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಸಾಮಾಜಿಕ ಮಾಧ್ಯಮಗಳು ಕೂಡ ರಾಜಕೀಯ ಜಾಹೀರಾತುಗಳ ವೆಚ್ಚ ಮತ್ತು ವಿವರದ ಬಗ್ಗೆ ಪ್ರತ್ಯೇಕ ಮಾಹಿತಿ ಸಂಗ್ರಹಿಸಿ ಇರಿಸಿಕೊಳ್ಳಬೇಕು ಎಂದೂ ಸಲಹೆ ನೀಡಲಾಗಿದೆ. ಉಪ ಚುನಾವಣಾ ಆಯುಕ್ತ ಉಮೇಶ್‌ ಚಾವ್ಲಾ ನೇತೃತ್ವದ 9 ಸದಸ್ಯರ ಸಮಿತಿ ಗುರುವಾರ ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರಾಗೆ ಸಲ್ಲಿಸಿದ ವರದಿಯಲ್ಲಿ ಈ ಶಿಫಾರಸುಗಳನ್ನು ಮಾಡಲಾಗಿದೆ. ವಾರ್ತಾ ಮತ್ತು ಪ್ರಸಾರ, ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತೀಯ ಪತ್ರಿಕಾ ಮಂಡಳಿ, ನ್ಯಾಷನಲ್‌ ಬ್ರಾಡ್‌ಕಾಸ್ಟರ್ಸ್‌ ಎಸೋಸಿಯೇಶನ್‌ನ ಒಬ್ಬೊಬ್ಬ ಪ್ರತಿನಿಧಿಗಳು ಈ ಸಮಿತಿಯಲ್ಲಿದ್ದರು. 

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೊದಲ ಹಂತದ ಮತದಾನದ ದಿನವೇ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಇದರಿಂದ ಮತದಾರರ ಮೇಲೆ ಪ್ರಭಾವ ಬೀರಿದಂತಾಗಿದೆ ಎಂದು ಕಾಂಗ್ರೆಸ್‌ ಆಕ್ಷೇಪಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಆದರೆ ಈ ವಿಚಾರದಲ್ಲಿ ಮಾದರಿ ನೀತಿ ಸಂಹಿತೆಯ ಅನ್ವಯ ಕ್ರಮ ಕೈಗೊಳ್ಳಲು ಆಯೋಗಕ್ಕೆ ಅವಕಾಶ ಇರಲಿಲ್ಲ. ಬಹು ಹಂತಗಳಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಆಯ್ದ ಸ್ಥಾನಗಳಿಗೆ ಮಾತ್ರ ಮತದಾನ ನಡೆಯುತ್ತದೆ. ಹೀಗಿದ್ದಾಗ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಯಾವುದೇ ರೀತಿಯಲ್ಲಿ ಬೆಂಬಲ ಕೋರಬಾರದು. ರಾಜಕೀಯ ಪಕ್ಷಗಳ ನಾಯಕರು ಸಂದರ್ಶನ, ಪತ್ರಿಕಾಗೋಷ್ಠಿ ನಡೆಸಬಾರದು ಎಂದು ಸಮಿತಿ ಶಿಫಾರಸು ಮಾಡಿದೆ. 

ಕಾಯ್ದೆಗೆ ತಿದ್ದುಪಡಿ ಅಗತ್ಯ: ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡು ಜಾರಿ ಮಾಡಬೇಕಾದರೆ ಪ್ರಜಾಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಅದಕ್ಕೆ ಆಯೋಗ ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳಬೇಕಾಗುತ್ತದೆ.

ರಾಹುಲ್‌ ಸಂದರ್ಶನ ಕಾರಣ: ಈ ರೀತಿಯ ಶಿಫಾರಸಿಗೆ ಕಾರಣ 2017ರ ಡಿ.13ರಂದು 2ನೇ ಹಂತದ ಗುಜರಾತ್‌ ವಿಧಾನಸಭೆ ಚುನಾವಣೆ ವೇಳೆ ಟಿವಿ ಚಾನೆಲ್‌ವೊಂದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೀಡಿದ ಸಂದರ್ಶನ. ಈ ಪ್ರಕರಣ ಸಂಬಂಧ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನೋಟಿಸ್‌ ಜಾರಿ ಮಾಡಿತ್ತು. ಅದಕ್ಕೆ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅದೇ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕೂಡ ಟಿವಿಯೊಂದಕ್ಕೆ ಸಂದರ್ಶನ ನೀಡಿದ್ದರು.

Advertisement

ಆದರೆ, ಅದಕ್ಕೆ ಆಕ್ಷೇಪಿಸದ ಚುನಾವಣಾ ಆಯೋಗ ರಾಹುಲ್‌ರ ಸಂದರ್ಶನದ ವಿರುದ್ಧ ಕ್ರಮ ಕೈಗೊಂಡದ್ದೇಕೆ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿತ್ತು. ಹೀಗಾಗಿ, ಆಯೋಗ ತಾನು ನೀಡಿದ್ದ ನೋಟಿಸ್‌ ಹಿಂಪಡೆದುಕೊಂಡು “ಮಾಧ್ಯಮಗಳು ಡಿಜಿಟಲ್‌, ಎಲೆಕ್ಟ್ರಾನಿಕ್‌ ಸೇರಿದಂತೆ ವಿವಿಧ ಹಂತಗಳಲ್ಲಿ ವಿಸ್ತರಣೆಯಾಗಿದೆ. ಹೀಗಾಗಿ ಹಾಲಿ ದಿನಗಳ ಬದಲಾವಣೆಗೆ ತಕ್ಕಂತೆ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 126ಕ್ಕೆ ತಿದ್ದುಪಡಿ ತರಬೇಕು’ ಎಂದು ಹೇಳಿತ್ತು. ಇಂಟರ್‌ನೆಟ್‌ ಮತ್ತು ಮೊಬೈಲ್‌ ಎಸೋಸಿಯೇಶನ್‌ ಆಫ್ ಇಂಡಿಯಾ, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌,  ಟ್ವಿಟರ್‌ ಮತ್ತು ಗೂಗಲ್‌, ವಿವಿಧ ರಾಜಕೀಯ ಪಕ್ಷಗಳ ಜತೆಗೆ ಸಮಾಲೋಚನೆ ನಡೆಸಿದ ಸಮಿತಿ ಈ ಶಿಫಾರಸುಗಳನ್ನು ಮಾಡಿದೆ.

ಸಮಿತಿಯ ಇತರ ಸಲಹೆಗಳು
ಚುನಾವಣಾ ಆಯೋಗದ ಜತೆಯಾಗಿ ಸಾಮಾಜಿಕ ಜಾಲತಾಣಗಳು ಕೆಲಸ ಮಾಡಬೇಕು. ಚುನಾವಣೆಯ ನಿಯಮಗಳನ್ನು ಉಲ್ಲಂ ಸುವವರ ಪತ್ತೆಗೆ ನೆರವಾಗಬೇಕು.

ಖಾಸಗಿ ಕೇಬಲ್‌ ಟಿವಿ ಚಾನೆಲ್‌ಗ‌ಳು, ನ್ಯಾಷನಲ್‌ ಬ್ರಾಡ್‌ಕಾಸ್ಟರ್ಸ್‌ ಎಸೋಸಿಯೇಶನ್‌ ಚುನಾವಣೆಯ ಸಂದರ್ಭದಲ್ಲಿ ಹೊರಡಿಸುವ ನಿಯಮಗಳನ್ನು ಅನುಸರಿಸುವಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಚುನಾವಣಾ ಆಯೋಗ ನಿರ್ದೇಶನ ನೀಡಬೇಕು. 

Advertisement

Udayavani is now on Telegram. Click here to join our channel and stay updated with the latest news.

Next