Advertisement
ಮಾಣಿ-ಮೈಸೂರು ರಾಜ್ಯ ಹೆದ್ದಾರಿಯನ್ನು ವರ್ಷದ ಹಿಂದೆ ರಾ.ಹೆ. ಹೆದ್ದಾರಿಯನ್ನಾಗಿಸಿದ್ದು, ಮಾಣಿ-ಮೈಸೂರು-ಬೆಂಗಳೂರು ಎಂದು ನಾಮಕರಣ ಮಾಡಲಾಗಿದೆ. ಮಾಣಿಯಿಂದ ಕುಶಾಲನಗರದವರೆಗಿನ ಹೆದ್ದಾರಿ ಮಂಗಳೂರು ವಿಭಾಗಕ್ಕೆ, ಅನಂತರ ಮೈಸೂರು ವಿಭಾಗಕ್ಕೆ ಬರುತ್ತಿದೆ. ಮಂಗಳೂರು ವಿಭಾಗದ ಮಡಿಕೇರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಸಂಪಾಜೆಯಿಂದ ಕುಶಾಲನಗರದವರೆಗೆ ನಿಯತಕಾಲದ ನವೀಕರಣ (ಪಿಆರ್) ಮುಗಿದಿದ್ದು, ಮಂಗಳೂರು ಉಪ ವಿಭಾಗ ವ್ಯಾಪ್ತಿಗೆ 26 ಕೋಟಿ ರೂ. ಮಂಜೂರಾಗಿದೆ.
ಮಾಣಿಯಿಂದ ಜಾಲಸೂರು ವರೆಗಿನ ಕಾಮಗಾರಿಗೆ 14 ಕೋಟಿ ರೂ. ಮತ್ತು ಜಾಲಸೂರು ನಿಂದ ಸಂಪಾಜೆ ವರೆಗಿನ ಕಾಮಗಾರಿಗೆ 12 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಮರು ಡಾಮರು ಕಾಮಗಾರಿ, ಹೆದ್ದಾರಿ ಪಕ್ಕದ ಅಪಾಯ ಕಾರಿ ಹೊಂಡ, ಬಾವಿ, ಕೆರೆಗಳನ್ನು ಮುಚ್ಚುವುದು, . ತಡೆಗೋಡೆ ನಿರ್ಮಾಣ, ಸೂಚನ ಫಲಕ ಅಳವಡಿಕೆ, ಸೆಂಟರ್ ಮಾರ್ಕಿಂಗ್, ರಸ್ತೆ ಭುಜ ಸಮರ್ಪಕಗೊಳಿಸುವುದು, ಅಪಾಯಕಾರಿ ತಿರುವು ನೇರಗೊಳಿಸುವ ಕಾಮಗಾರಿ ನಡೆಯಲಿದೆ. 5 ಕೋಟಿ ರೂ. ಹೆಚ್ಚಿನ ಮೊತ್ತದ ಕಾಮಗಾರಿಗಳಾದರೆ ಅದನ್ನು ಇಪಿಸಿ ಮೋಡ್ (ಎಂಜಿನಿಯರಿಂಗ್ ಪ್ರೊಕ್ಯೂರ್‌ವೆುಂಟ್ ಆ್ಯಂಡ್ ಕನ್‌ಸ್ಟ್ರಕ್ಷನ್) ಮಾದರಿಯಲ್ಲಿ ಟೆಂಡರ್ ಮಾಡಲಾಗುತ್ತದೆ. ಹೆದ್ದಾರಿ ಇಲಾಖೆ ರೀಜನಲ್ ಆಫೀಸರ್ ಹಂತದಲ್ಲಿ ಈ ಪ್ರಕ್ರಿಯೆ ಇದೆ. ಮಾರ್ಚ್ ಒಳಗೆ ಕಾಮಗಾರಿ ಮುಗಿಸಬೇಕಾದ ಗಡುವು ಇದೆ. ಮಾಣಿ – ಮೈಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಸೂರಿನಿಂದ ಮುಂದಕ್ಕೆ ಹಾಲಿ ಇರುವ ಚತುಷ್ಪಥವನ್ನು ಷಟ³ಥ ಮಾಡುವ ಯೋಜನೆ ಇದೆ. ಮಾಣಿಯಿಂದ ಮೈಸೂರು ತನಕ ಇನ್ನೂ ದ್ವಿಪಥವೇ ಇದೆ. ಈಗಾಗಲೇ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಹೆದ್ದಾರಿ ಚತುಷ್ಪಥಕ್ಕೆ ಪ್ರಾಧಿಕಾರ ಪ್ರಸ್ತಾವನೆ ಸಿದ್ಧಪಡಿಸಿದೆ. ಮಂಗಳೂರು ವಿಭಾಗದಲ್ಲಿ ಉಳಿಕೆಯಾಗಿರುವ ನವೀಕರಣ ಕಾಮಗಾರಿ ಮುಗಿದ ಬಳಿಕ ಚತುಷ್ಪಥ ಯೋಜನೆಗೆ ಚಾಲನೆ ಸಿಗುವ ಸಂಭವವಿದೆ. 10 ಸಾವಿರ ಪಿಸಿಯು (ಪ್ಯಾಸೆಂಜರ್ ಕಾರ್ ಯುನಿಟ್) ದಾಟಿದರೆ ಅದನ್ನು ಚತುಷ್ಪಥ ಮಾಡಬೇಕು ಎಂಬ ನಿಯಮವಿದ್ದು, ಪ್ರಸ್ತುತ ಮಾಣಿ -ಮೈಸೂರು ಹೆದ್ದಾರಿಯ ಪಿಸಿಯು 12 ಸಾವಿರ ದಾಟಿದೆ. ಆದರೆ ಹೆದ್ದಾರಿಯನ್ನು ಬಿಟ್ಟುಕೊಡುವಂತೆ ಇದುವರೆಗೆ ಪ್ರಾಧಿಕಾರದಿಂದ ನಮಗೆ ಪತ್ರ ಬಂದಿಲ್ಲ. ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೆದ್ದಾರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಸುಬ್ಬರಾಮ ಹೊಳ್ಳ ತಿಳಿಸಿದ್ದಾರೆ.
Related Articles
ಹೆದ್ದಾರಿಯ ಮಂಗಳೂರು ಉಪ ವಿಭಾಗ ವ್ಯಾಪ್ತಿಯ ಐದು ಸೇತುವೆಗಳನ್ನು ಅಪಾಯಕಾರಿ ವಲಯ ಎಂದು ಹೆದ್ದಾರಿ ಇಲಾಖೆ ಗುರುತಿಸಿದ್ದು, ಮೇಲಧಿಕಾರಿಗಳ ಮೂಲಕ ಸರಕಾರಕ್ಕೆ ವರದಿ ಸಲ್ಲಿಸಿದೆ. ಪುತ್ತೂರು – ಸುಳ್ಯ ಮಧ್ಯೆ ಸಿಗುವ ಸಂಪ್ಯ, ಸಂಟ್ಯಾರು, ಕುಂಬ್ರ ಸಮೀಪದ ಪರ್ಪುಂಜ, ಶೇಖಮಲೆ ಮತ್ತು ಅಮಿcನಡ್ಕ ಸೇತುವೆಗಳನ್ನು ಅಪಘಾತ ವಲಯ ಎಂದು ಪರಿಗಣಿಸಲಾಗಿದೆ. 5 ಸೇತುವೆಗಳ ಅಭಿವೃದ್ಧಿಗೆ ಒಟ್ಟು 11.50 ಕೋಟಿ ರೂ. ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ ಮತ್ತು ಆದ್ಯತೆಯಲ್ಲಿ ಪರಿಗಣಿಸುವಂತೆ ಮನವಿ ಮಾಡಲಾಗಿದೆ.
Advertisement
ಐದು ಸೇತುವೆಗಳ ವರದಿ ಪೊಲೀಸ್ ಇಲಾಖೆ ಮೂಲಕ ರಸ್ತೆ ಸುರಕ್ಷತಾ ಸಮಿತಿಯ ಮುಂದೆಯೂ ಸಲ್ಲಿಕೆಯಾಗಲಿದೆ. ಸಮಿತಿಯಲ್ಲಿರುವ ನಿಧಿಯನ್ನು ಬಳಸಿ ಸೇತುವೆ ವಲಯದ ನವೀಕರಣ ಕಾರ್ಯ ನಡೆಸುವ ಅವಕಾಶ ಇದೆ. ಇದಲ್ಲದೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರತ್ಯೇಕ ಅನುದಾನ ಬಿಡುಗಡೆ ಮಾಡುವ ಅವಕಾಶವೂ ಇದೆ. ಅನುದಾನ ಬಿಡುಗಡೆಗೆ ಒಂದಷ್ಟು ಸಮಯಾವಕಾಶ ಹಿಡಿಯುವ ಸಾಧ್ಯತೆ ಕಾರಣದಿಂದ ಸೇತುವೆಗಳಲ್ಲಿ ತಾತ್ಕಾಲಿಕ ನವೀಕರಣ, ತಡೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿದೆ.
ಟೆಂಡರ್ ಪ್ರಕ್ರಿಯೆಹೆದ್ದಾರಿಯ ಮಾಣಿ – ಸಂಪಾಜೆ ತನಕ 26 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಈ ಕಾಮಗಾರಿ ಮಾರ್ಚ್ ತಿಂಗಳೊಳಗೆ ಮುಕ್ತಾಯಗೊಳ್ಳಲಿದೆ. ಸೇತುವೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆಯೂ ವರದಿ ಸಿದ್ಧಪಡಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ನಡೆಸಲಾಗುವುದು.
– ಸುಬ್ಬರಾಮ ಹೊಳ್ಳ , ರಾ. ಹೆ. ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ ಪಟ್ಟೆ