ಬೆಂಗಳೂರು 10 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ಯಶಸ್ವಿಯಾಗಿದೆ. ವಿದೇಶಿ ಅತಿಥಿಗಳೆಲ್ಲರೂ ಚಿತ್ರೋತ್ಸವ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಒಂದು ವಾರ ನಡೆದ ಸಿನಿಮೋತ್ಸವದಲ್ಲಿ ಸಿನಿ ಪ್ರಿಯರು ಕಿಕ್ಕಿರಿದು ಜಗತ್ತಿನ ಅದ್ಭುತ ಚಿತ್ರಗಳನ್ನು ವೀಕ್ಷಿಸಿದ್ದು, ಈ ಚಿತ್ರೋತ್ಸವದ ವಿಶೇಷ. ಈ ಚಿತ್ರೋತ್ಸವ ಸಮಾರೋಪ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಹಿರಿಯ ನಿರ್ದೇಶಕ ಮಣಿರತ್ನಂ ಅವರು, ತಮಗೆ ಕೊಟ್ಟ ಪ್ರಶಸ್ತಿ ಹಣವನ್ನು ಅಕಾಡೆಮಿಗೆ ವಾಪಸ್ಸು ಕೊಟ್ಟಿದ್ದರು.
ಆ ಹಣವನ್ನು ಸಿನಿಮಾಗೆ ಸಂಬಂಧಿಸಿದ ವಿಷಯಕ್ಕೆ ಬಳಸಿಕೊಳ್ಳುವಂತೆ ಹೇಳಿದ್ದರು. ಈ ನಿಟ್ಟಿನಲ್ಲಿ ಮಂಡಳಿ ಸಹ ಹೆಜ್ಜೆ ಇಟ್ಟಿದೆ. ಈ ಕುರಿತು ಮಾತನಾಡುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, “ಮಣಿರತ್ನಂ ಅವರು 10 ಲಕ್ಷ ರೂ ಹಣವನ್ನು ಪುನಃ ಅಕಾಡೆಮಿಗೆ ಹಿಂದಿರುಗಿಸಿದ್ದಾರೆ. ಆ ಹಣ ಒಳ್ಳೆಯ ಕಾರ್ಯಕ್ಕೆ ವಿನಿಯೋಗವಾಗಬೇಕೆಂಬುದು ಅವರ ಅಭಿಲಾಷೆ.
ಹಾಗಾಗಿ, ಅಕಾಡೆಮಿಯು ಆ 10 ಲಕ್ಷ ರೂಪಾಯಿಗಳನ್ನು ಠೇವಣಿ ಇಟ್ಟು, ಆ ಬಡ್ಡಿ ಹಣದ ಜೊತೆಗೆ ಅಕಾಡೆಮಿಯೂ ಒಂದಷ್ಟು ಹಣ ಹಾಕಿ, ಪ್ರತಿ ವರ್ಷ ಒಬ್ಬ ಪ್ರತಿಭಾವಂತರಿಗೆ ಅನುಕೂಲವಾಗುವಂತೆ ಸಹಾಯ ಮಾಡಲಾಗುತ್ತದೆ. ಕರ್ನಾಟಕದಿಂದ ಹೆಚ್ಚು ಮಾರ್ಕ್ಸ್ ಪಡೆದು, ಪೂನಾ ಇನ್ಸ್‌ಟಿಟ್ಯೂಟ್ ಅಥವಾ ಸತ್ಯಜಿತ್‌ರಾಯ್ ಇನ್ಸ್‌ಟಿಟ್ಯೂಟ್‌ಗೆ ಸಿನಿಮಾ ಕಲಿಕೆಗೆ ಹೋಗುವ ಪ್ರತಿಭೆಗೆ ಇಂತಿಷ್ಟು ಅಂತ ಹಣ ಸಹಾಯ ಮಾಡಲಾಗುತ್ತದೆ.
ಪ್ರತಿ ವರ್ಷ ಒಬ್ಬರಿಗೆ ಮಾತ್ರ ಅಕಾಡೆಮಿ ಈ ವ್ಯವಸ್ಥೆ ಮಾಡಲಿದೆ. ಸಿನಿಮಾ ನಿರ್ದೇಶಕರು ಪ್ರೀತಿಯಿಂದ ಕೊಟ್ಟ ಹಣ, ಸಿನಿಮಾ ವಿಷಯಕ್ಕೇ ವಿನಿಯೋಗವಾಗಲಿದೆ’ ಎಂದು ಹೇಳುತ್ತಾರೆ ಬಾಬು. ಈ ಮಧ್ಯೆ ಅಕಾಡೆಮಿಯಿಂದ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಲಾಗಿದೆಯಂತೆ. ಆ ಮನವಿ ಏನು ಎಂದು ಕೇಳಿದರೆ, ಕೇರಳದಲ್ಲಿರುವ ಅಕಾಡೆಮಿ ವ್ಯವಸ್ಥೆಯಂತೆ ಇಲ್ಲೂ ಮಾಡಬೇಕೆಂಬುದು.
“ಅಲ್ಲಿನ ಅಕಾಡೆಮಿಗೆ ವರ್ಷಕ್ಕೆ 11 ರಿಂದ 14 ಕೋಟಿ ಅನುದಾನ ಬಿಡುಗಡೆಯಾಗುತ್ತದೆ. ಅಕಾಡೆಮಿಗಾಗಿಯೇ ಕಾರ್ಯದರ್ಶಿಗಳಿರುತ್ತಾರೆ. ಸುಮಾರು 25 ರಿಂದ 30 ಜನ ನೌಕರರಿರುತ್ತಾರೆ. ಆದರೆ, ಇಲ್ಲಿ ಆ ವ್ಯವಸ್ಥೆ ಇಲ್ಲ. ಇಲ್ಲಿ ಮೊದಲು ಒಂದು ಕೋಟಿ ಇತ್ತು. ಅದರಿಂದ ಏನೂ ಆಗೋದಿಲ್ಲ ಅಂತ ಮನವಿ ಮಾಡಿದ್ದಕ್ಕೆ ಒಂದು ಕೋಟಿ ಹೆಚ್ಚಿಸಿದರು. ನಾವು ಐದು ಕೋಟಿ ಬೇಡಿಕೆ ಇಟ್ಟಿದ್ದೆವು.
ಇನ್ನು, ಇಲ್ಲಿರೋದು ಇಬ್ಬರು ನೌಕರರು. ಅವರನ್ನಿಟ್ಟುಕೊಂಡೇ ಇಷ್ಟೊಂದು ಕೆಲಸ ಮಾಡಿದ್ದೇವೆ. ಅಕಾಡೆಮಿ ಮಾಡಿದ ಮನವಿಗೆ ಈ ಬಾರಿ ಸರ್ಕಾರ ಬಜೆಟ್‌ನಲ್ಲಿ “ಜೇನುಗೂಡು’ ಎಂಬ ಯೋಜನೆ ತಂದಿದೆ. ಅದಕ್ಕಾಗಿ ಎರಡು ಕೋಟಿ ಅನುದಾನ ನೀಡಿದೆ. ಅದರಿಂದ ನಿರ್ಮಾಪಕರಿಗೆ ಉಪಯೋಗವಾಗಲಿದೆ’ ಎನ್ನುತ್ತಾರೆ ಬಾಬು. ಕಳೆದ ಮೂರು ವರ್ಷಗಳಿಂದ “ಜೇನುಗೂಡು’ಗಾಗಿ ಅಕಾಡೆಮಿ ಕೆಲಸ ಮಾಡಿದೆ ಎನ್ನುವ ಅವರು,
“ರಾಜ್ಯದ ಖ್ಯಾತ ಸಾಹಿತಿಗಳ ತಂಡ ಮಾಡಿ, ಅಲ್ಲಿ ಒಂದಷ್ಟು ಕನ್ನಡ ಕಥೆಗಾರರ ಕಥೆಗಳನ್ನು ಕ್ರೋಢೀಕರಿಸಿದ್ದೇವೆ. ಈ ಕಥೆಗಳ ಪೈಕಿ ಯಾವುದಾದರೊಂದು ಕಥೆ ಪಡೆದು ಚಿತ್ರ ಮಾಡುವವರಿಗೆ ಸಬ್ಸಿಡಿ ಸಿಗಲಿದೆ. ಇದರಿಂದ ನಿರ್ಮಾಪಕರಿಗೆ ಒಳಿತಾಗಲಿದೆ. ಕಥೆಗಾರರಿಗೂ ಇಂತಿಷ್ಟು ಹಣ ಸೇರಲಿದೆ. ಈ ಬೆಳವಣಿಗೆಯಿಂದ ವರ್ಷಕ್ಕೆ ಕಡಿಮೆಯೆಂದರೂ 10 ಕಾದಂಬರಿ ಆಧರಿತ ಚಿತ್ರಗಳು ತಯಾರಾಗುತ್ತವೆ ಎಂಬ ವಿಶ್ವಾಸ ನಮ್ಮದು’ ಎನ್ನುತ್ತಾರೆ ಬಾಬು.