Advertisement

ಕಂಬಳ ಗದ್ದೆಯಲ್ಲಿ ಭತ್ತದ ಕೊಯ್ಲು ಸಂಭ್ರಮ

11:44 AM May 01, 2019 | Naveen |

ಮಾಣಿ : ಅನಂತಾಡಿ ಗ್ರಾಮದ ಬಾಕಿಲಗುತ್ತು ಮನೆತನದ ಕಂಬಳ ಗದ್ದೆಯಲ್ಲಿ ರವಿವಾರ ಯುವಕರ ಕಲರವ. ಗದ್ದೆಯಲ್ಲಿ ಸುಗ್ಗಿಯ ಸಾಗುವಳಿ ಬಹಳ ಉತ್ಸಾಹದಿಂದ ನಡೆಯಿತು.

Advertisement

ಯುವವಾಹಿನಿ ಮಾಣಿ ಘಟಕ ಈ ವಿನೂತನ ಚಟುವಟಿಕೆ ಹಮ್ಮಿಕೊಂಡಿತ್ತು.

ಕಳೆದ ವರ್ಷ ಡಿ. 23ರಂದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಹಕಾರದಲ್ಲಿ ಯುವವಾಹಿನಿ ಘಟಕ ಈ ಗದ್ದೆಯಲ್ಲಿ ಕೋಟಿ-ಚೆನ್ನಯ ಕೆಸರುಗದ್ದೆ ಕ್ರೀಡಾಕೂಟ ಹಮ್ಮಿಕೊಂಡಿತ್ತು. ಘಟಕದ ಅಧ್ಯಕ್ಷ ಹರೀಶ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಇದೇ ಕಂಬಳ ಗದ್ದೆಯಲ್ಲಿ ಭತ್ತದ ಕೃಷಿ ಕೈಗೊಳ್ಳುವ ಕುರಿತು ತೀರ್ಮಾನಿಸಿದರು. ಬಾಕಿಲ ಕುಟುಂಬದ ಹಿರಿಯರ ಅನುಮತಿ ಪಡೆದು ಕಂಬಳ ಗದ್ದೆಯಲ್ಲಿ ಸುಗ್ಗಿಯ ಸಾಗುವಳಿ ಉತ್ಸಾಹದಿಂದ ನಡೆಯಿತು.

ಗದ್ದೆಯಲ್ಲಿ ಬಿತ್ತಿದ ಭತ್ತದ ಬೀಜಗಳು ಸಸಿಗಳಾಗಿ, ಹಚ್ಚ ಹಸುರಿನಿಂದ ನಳನಳಿಸಿದವು. ಯುವ ವಾಹಿನಿ ಸದಸ್ಯರ ಕನಸುಗಳಂತೆ ಭತ್ತ ತೆನೆ ಕಟ್ಟಿ, ತೆನೆಗಳು ತೂಗಿ, ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡಿದವು. ಎ 28ರಂದು ಇದರ ಕೊಯ್ಲು ಸಂಭ್ರಮ ನಡೆಯಿತು.

ರವಿವಾರ ಬೆಳಗ್ಗೆ 7ರಿಂದಲೇ ಕೊಯ್ಲು ಕಾರ್ಯ ಆರಂಭವಾಯಿತು. ಸುಮಾರು 45 ಸದಸ್ಯರು ಇದರಲ್ಲಿ ಪಾಲ್ಗೊಂಡರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್‌ ನಡುಬೈಲು ಕತ್ತಿ ಮುಟ್ಟಾಳೆ ಧರಿಸಿ ಕಟಾವು ಮಾಡುವ ಮೂಲಕ ಕೊಯ್ಲು ಕಾರ್ಯಕ್ಕೆ ಚಾಲನೆ ನೀಡಿದರು. ಶಶಿಧರ ಕಿನ್ನಿಮಜಲು, ಬಂಟ್ವಾಳ ಘಟಕದ ಉಪಾಧ್ಯಕ್ಷ ಸತೀಶ್‌ ಬಾಯಿಲ ಹಾಗೂ ಬಾಕಿಲ ಕುಟುಂಬದ ಜನಾರ್ದನ ಪೂಜಾರಿ, ವಸಂತ ಪೂಜಾರಿ ಜಲ್ಲಿಗುಡ್ಡೆ, ಹರೀಶ್‌ ಎನ್‌ಎಂಪಿಟಿ ಉಪಸ್ಥಿತರಿದ್ದರು.

Advertisement

ಮಾಣಿ ಘಟಕದ ನಿಕಟಪೂರ್ವ ಅಧ್ಯಕ್ಷ ರಾಜೇಶ್‌ ಬಾಬನಕಟ್ಟೆ, ಕಾರ್ಯದರ್ಶಿ ಸುಜಿತ್‌ ಅಂಚನ್‌, ಉಪಾಧ್ಯಕ್ಷರಾದ ರಮೇಶ್‌ ಮುಜಲ, ಪ್ರಶಾಂತ್‌ ಪುಂಜಾವು, ಕೋಶಾಧಿಕಾರಿ ಶಿವರಾಜ್‌ ಇದ್ದರು. ಸಂಚಾಲಕರಾಗಿ ರಾಜೇಶ್‌ ಪರಾಜೆ ಮತ್ತು ಮಹಾಬಲ ಪೂಜಾರಿ ಬಾಕಿಲ ಅವರನ್ನು ಆಯ್ಕೆ ಮಾಡಲಾಗಿತ್ತು.

ಕೊಯ್ಲಿನ ಅನಂತರ ದೊರೆತ ಭತ್ತವನ್ನು ಬಡವರಿಗೆ ದಾನ ಮಾಡಲು, ಉಳಿದ ಭತ್ತವನ್ನು ಬಾಕಿಲ ಕೋಟಿ ಚೆನ್ನಯ ಗರಡಿ, ಶ್ರೀ ಉಳ್ಳಾಲ್ತಿ ವೈದ್ಯನಾಥ ಮತ್ತು ಸ್ಥಳ ದೈವ ದೇವರುಗಳ ಬ್ರಹ್ಮಕಲಶೋತ್ಸವದ ಆನ್ನದಾನಕ್ಕೆ ಬಳಸಿಕೊಳ್ಳುವ ನಿರ್ಧಾರವನ್ನು ಯುವವಾಹಿನಿ ಮಾಣಿ ಘಟಕ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next