Advertisement

ಕಡಲ ಕೊರೆತಕ್ಕೆ ಕಾಂಡ್ಲಾವೇ ಕಡಿವಾಣ: ವಿಜ್ಞಾನಿ ಡಾ| ಅಶ್ವತ್ಥನಾರಾಯಣ ಸ್ವಾಮಿ

03:58 PM Jun 08, 2024 | Team Udayavani |

ಮಹಾನಗರ: ಕರಾವಳಿಯಾದ್ಯಂತ ಇದ್ದ ಕಾಂಡ್ಲಾ ಕಾಡುಗಳನ್ನು ನಾಶ ಮಾಡಿದ ಕಾರಣ, ಪ್ರಾಕೃತಿಕ ಅಸಮ ತೋಲನ ಉಂಟಾಗಿ ಕಡಲು ಕೊರೆತ ಹೆಚ್ಚಾಗಿದೆ. ನೈಸರ್ಗಿಕವಾಗಿದ್ದ ಈ ವ್ಯವಸ್ಥೆ ಯನ್ನು ಮತ್ತೆ ಅಳವಡಿಸಿಕೊಳ್ಳದಿದ್ದಲ್ಲಿ 2040ರ ವೇಳೆಗೆ ಇನ್ನಷ್ಟು ತೀರ ಪ್ರದೇಶಗಳು ಕಡಲು ಪಾಲಾಗುವ ಸಾಧ್ಯತೆಯಿದೆ: ಇದು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ನಿವೃತ್ತ ವೈಜ್ಞಾನಿಕ ಅಧಿಕಾರಿ ಡಾ| ದೊಡ್ಡ ಅಶ್ವತ್ಥ್ ನಾರಾಯಣ ಸ್ವಾಮಿ ಅವರು ಹೇಳುವ ಎಚ್ಚರಿಕೆಯ ಮಾತು.

Advertisement

1996ರಲ್ಲಿ ಸಿಆರ್‌ಝೆಡ್‌ ನಕ್ಷೆ ತಯಾರಿ ಸಂದರ್ಭ ಕರಾವಳಿಯಲ್ಲಿ ತೀರದಲ್ಲಿ ಕೆಲಸ ಮಾಡಿದ ಇವ ರನ್ನು “ಉದಯವಾಣಿ ಸುದಿನ’ ನಡೆಸುತ್ತಿರುವ “ಕೊರೆಯದಿರಲಿ ಕಡಲು’ ಸರಣಿಯ  ಭಾಗವಾಗಿ ಮಾತನಾಡಿಸಿದಾಗ ಕಾಂಡ್ಲಾ ಹೇಗೆ ಕೊರೆತ ತಡೆಯ ಬಲ್ಲುದು ಎಂಬ ವಿವರಣೆ ನೀಡಿದ್ದಾರೆ.

ಪರಿಸರ ಸೂಕ್ಷ್ಮ ಪ್ರದೇಶ
ಕಾಂಡ್ಲಾವನಗಳು ಇರುವ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ. ಮೀನುಗಳು ಸೇರಿದಂತೆ ವಿವಿಧ ಜಲಚರಗಳಿಗೂ ಕಾಂಡ್ಲಾ ವನದ ಬೇರುಗಳು ರಕ್ಷಣೆ ನೀಡುತ್ತವೆ. ಅವುಗಳ ಕಾಂಡ್ಲಾದ ಬೇರುಗಳ ಅಡಿಯಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಇವುಗಳು ಶತ್ರು ಜೀವಿಗಳಿಂದ ಮರಿಗಳನ್ನು ರಕ್ಷಿಸಲೂ ನೆರವಾಗುತ್ತದೆ. ಇದೇ ಕಾರಣಕ್ಕೆ 1993ರಲ್ಲಿ ಉಳ್ಳಾಲ ಸೇರಿದಂತೆ ಕಾಂಡ್ಲಾವನಗಳಿದ್ದ ಕಡಲ ತೀರ ಪ್ರದೇಶವನ್ನು ಸಿಆರ್‌ಝೆಡ್‌ ವಲಯ 1 ಎಂದು ಮಾಡಲಾಗಿತ್ತು.

ಕೇರಳದಲ್ಲಿ ವ್ಯಾಪಕ ಪ್ರೋತ್ಸಾಹ
ಶ್ರೀಲಂಕಾ, ಸಿಂಗಾಪುರ, ವಿಯೆಟ್ನಾಂ ನಂತಹ ದೇಶಗಳು ಈಗಾಗಲೇ ಕಾಂಡ್ಲಾ ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ. ಪಕ್ಕದ ಕೇರಳ ರಾಜ್ಯದಲ್ಲಿಯೂ ವ್ಯಾಪಕವಾಗಿ ಕಾಂಡ್ಲಾ ಬೆಳೆಸಲಾಗುತ್ತಿದೆ. ನಮ್ಮ ಕರಾವಳಿಯಲ್ಲೂ ತ್ವರಿತವಾಗಿ ಕಾಂಡ್ಲಾವನ್ನು ಬೆಳೆಸದೇ ಇದ್ದರೆ ಕರಾವಳಿಗೆ ಆಪತ್ತು ಖಚಿತ.

ದೇಶದಲ್ಲಿ ಕಾಂಡ್ಲಾವಲಯದಲ್ಲಿ ತುಸು ಏರಿಕೆ
ದೇಶದಲ್ಲಿ ಒಟ್ಟು ಕಾಂಡ್ಲಾ ವಲಯ 4,992 ಚ.ಕಿ.ಮೀ.ಗಳಾಗಿದ್ದ, ದೇಶದ ಒಟ್ಟು ಭೌಗೋಳಿಕ ಪ್ರದೇಶದ ಶೇ. 0.15ರಷ್ಟಿದೆ.
ಇದರಲ್ಲಿ ದಟ್ಟ ಕಾಂಡ್ಲಾವನ 1,475 ಚ.ಕಿ.ಮೀ., ಸಾಧಾರಣ ದಟ್ಟ ಪ್ರದೇಶ 1,4,82 ಚ.ಕಿ.ಮೀ ಮತ್ತು ಚದುರಿದಂತೆ ಇರುವ ಮ್ಯಾನ್‌ಗ್ರೋವ್‌ ಪ್ರದೇಶ 2,036 ಚ.ಕಿ.ಮೀ. ಪ್ರದೇಶವನ್ನು ಹೊಂದಿದೆ. 2019ರ ವರದಿಗೆ ಹೋಲಿಸಿದರೆ 17 ಚ.ಕಿ.ಮೀ. ಏರಿಕೆ ಕಂಡಿದೆ.

Advertisement

ಉಳ್ಳಾಲ ಭಾಗವೇ ಹೆಚ್ಚು ಯಾಕೆ?
ಉಳ್ಳಾಲ ಭಾಗದಲ್ಲಿ ಅಲ್ಲಲ್ಲಿ ಕಡಲು ಕೊರೆತ ಪ್ರತಿ ವರ್ಷ ಉಂಟಾಗುತ್ತಿದೆ. ಪ್ರಾಕೃತಿಕವಾಗಿರುವ ನಿರ್ಮಾಣವಾಗಿರುವ ಬಂಡೆಗಳು ಇರುವಲ್ಲಿ ಕೊರೆತ ಆಗಿಲ್ಲ. ಕಡಲಿಗೆ ಬಂಡೆಗಳನ್ನು ಹಾಕಿ ತಡೆಗೋಡೆ ಯನ್ನು ನಿರ್ಮಿಸಲು ಪ್ರಯತ್ನಿಸಿದ
ಪರಿಣಾಮವೇ ಕೊರೆತ ಹೆಚ್ಚಳಕ್ಕೆ ಕಾರಣ. ಒಂದು ವರ್ಷ ಕೊರೆತ ಕಡಿಮೆಯಾದರೂ, ಮುಂದಿನ ವರ್ಷ ಬಲ ಪಡೆಯುತ್ತದೆ ಮಾತ್ರವಲ್ಲದೆ, ಸಮುದ್ರದ ಅಲೆಗಳು ತನ್ನ ಪಾತ್ರವನ್ನು ಬದಲಾಯಿಸಿ ಇನ್ನೊಂದು ಕಡೆಯಲ್ಲಿ ವ್ಯಾಪಕವಾಗಿ ಕೊರೆತಕ್ಕೆ ಕಾರಣವಾಗಿದೆ.

ಕಾಂಡ್ಲಾ “ಎಂಜಿನಿಯರ್‌’ ಹೇಗೆ?
ನಿಸರ್ಗದ ಸಮಸ್ಯೆಗಳಿಗೆ ಪರಿಸರದ ಮೂಲಕವಾಗಿಯೇ ಪರಿಹಾರ ಕಂಡುಕೊಳ್ಳುವುದು ಭೂಮಿಯ ವಿಶೇಷತೆ. ಪ್ರಾಕೃತಿಕ ವ್ಯವಸ್ಥೆಗೆ ಕಾಂಡ್ಲಾಗಳು ಎಂಜಿನಿಯರ್‌ ಇದ್ದಂತೆ. ಬೇರುಗಳಿಗೆ ಸಮುದ್ರದ ಅಲೆಯನ್ನು ಹಿಡಿದು ನಿಲ್ಲಿಸುವ ಶಕ್ತಿ ಅದಕ್ಕಿದೆ. ಬೇರೆ ಮರ, ಗಿಡಗಳು ಅಲೆಗಳ ಹೊಡೆತಕ್ಕೆ ಸಿಲುಕಿದರೆ ಕೊಚ್ಚಿ ಹೋಗುತ್ತದೆ. ಅದನ್ನು ನಾವು ತಕ್ಷಣ ಕಡಲ ತೀರದ ಭೂ ಪ್ರದೇಶದಲ್ಲಿ ನೆಡುತ್ತಾ ಬಂದರೆ ತಾನಾಗಿಯೇ ಅದು ಹಬ್ಬಿಕೊಂಡು ಹೋಗುತ್ತದೆ. ಗಾಳಿ ಮರಕ್ಕಿಂತ ಇದು ಉತ್ತಮ ಎಂದು ಅಶ್ವತ್ಥ ನಾರಾಯಣ ಸ್ವಾಮಿ ಹೇಳುತ್ತಾರೆ.

ಹಿಂದೆ ಕರಾವಳಿಯಲ್ಲೂ ಇತ್ತು
1996ರಲ್ಲಿ ಸಿಆರ್‌ಝೆಡ್‌ ನಕ್ಷೆ ತಯಾರಿಸುವ ಸಂದರ್ಭ ಉಳ್ಳಾಲದಿಂದ ತಲಪಾಡಿ ವರೆಗೆ ತೀರ ಪ್ರದೇಶದಲ್ಲಿ ಕಾಂಡ್ಲಾ ಸಸ್ಯ ಸಂಪತ್ತು ಕಂಡುಬರುತ್ತಿತ್ತು. ಕರಾವಳಿಯ 320 ಕಿ.ಮೀ. ಪ್ರದೇಶದಲ್ಲಿಯೂ ಅಪಾರ ಪ್ರಮಾಣದಲ್ಲಿ ಕಾಂಡ್ಲಾ ವನಗಳಿತ್ತು. ಆದರೆ ಇಂದು ಅವುಗಳು ಸಂಪೂರ್ಣವಾಗಿ ನಾಶವಾಗಿದೆ. ಇದರಿಂದಾಗಿ ಕಡಲು ತೀರ ಪ್ರದೇಶದತ್ತ ಮುನ್ನಗ್ಗಿ ಬರುತ್ತಿದೆ. ತಡೆಗೋಡೆ, ಕಲ್ಲುಹಾಕುವುದು ಪ್ರಯೋಜನವಾಗದು. ಕಡಲಿನ ದೈತ್ಯ ರೂಪದ ಎದುರು ಯಾವುದೇ ತಡೆಗೋಡೆಗಳು ನಿಲ್ಲುವುದಿಲ್ಲ.

ಕಡಲು ಕೊರೆತಕ್ಕೆ ಕಾಂಡ್ಲಾವನ ನಾಶ ಕಾರಣ
ಕರ್ನಾಟಕದ ಕಡಲ ಕಿನಾರೆಯನ್ನು 1996ರಿಂದ ನೋಡಿದ್ದೇನೆ. ತೀರದಲ್ಲಿ ಯಥೇಚ್ಛವಾಗಿ ಬೆಳೆದಿದ್ದ ಕಾಂಡ್ಲಾವನಗಳ ಅವ್ಯಾಹತ ನಾಶವೇ ಕಡಲು ಕೊರೆತಕ್ಕೆ ಮೂಲ ಕಾರಣ. ಅಳಿದು ಹೋಗಿರುವ ಕಾಂಡ್ಲಾ ಗಿಡಗಳನ್ನು ಮತ್ತೆ ನೆಡುವ ಯೋಜನೆಯನ್ನು ಹಾಕಿಕೊಳ್ಳುವ ಮೂಲಕ ಕಡಲು ಕೊರೆತವನ್ನು ತಡೆಗಟ್ಟಲು ಸಾಧ್ಯವಿದೆ.
-ಡಾ| ದೊಡ್ಡ ಅಶ್ವತ್ಥ್ ನಾರಾಯಣ ಸ್ವಾಮಿ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ
ನಿವೃತ್ತ ವೈಜ್ಞಾನಿಕ ಅಧಿಕಾರಿ

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next