ಒಡಿಶಾ: ಸಾಮಾಜಿಕ ಜಾಲತಾಣದಲ್ಲಿ ಬೇಕಾಬಿಟ್ಟಿ ಫೋಟೋಗಳನ್ನು ಶೇರ್ ಮಾಡುವುದು ಇತ್ತೀಚೆಗೆ ದೊಡ್ಡ ಗೀಳಾಗಿಬಿಟ್ಟಿದೆ. ಅದರಿಂದ ಯಾವ ರೀತಿ ಅಪಾಯ ಸಂಭವಿಸುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ! ಒಡಿಶಾದ ನುವಾಪಾಡ ಜಿಲ್ಲೆಯ ತೋಟದ ಮಾಲೀಕರೊಬ್ಬರು ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಲಕ್ಷಾಂತರ ರೂ. ಮೌಲ್ಯದ ಮಾವಿನ ಹಣ್ಣುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:ನಿಗೂಢ ಕಲೆಗಳ ಅಭ್ಯಾಸ ಶಂಕೆ: ದಂಪತಿಯನ್ನು ಮರಕ್ಕೆ ನೇತು ಹಾಕಿ ಬೆತ್ತದಿಂದ ಹೊಡೆದ ಗ್ರಾಮಸ್ಥರು
ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಮಾವಿನ ಹಣ್ಣಿನ ಬೆಲೆ 2.5 ಲಕ್ಷ ರೂಪಾಯಿ ಎಂದು ವರದಿ ತಿಳಿಸಿದೆ. ರೈತ ಲಕ್ಷ್ಮೀನಾರಾಯಣ ಅವರು ತಮ್ಮ ತೋಟದಲ್ಲಿ 38 ಬಗೆಯ ಮಾವುಗಳನ್ನು ಬೆಳೆಸಿದ್ದರು. ತನ್ನ ತೋಟದಲ್ಲಿ ದುಬಾರಿ ಬೆಲೆಯ ಮಾವಿನ ಹಣ್ಣುಗಳ ಇಳುವರಿ ಕಂಡು ಅತ್ಯುತ್ಸಾಹಗೊಂಡ ಲಕ್ಷ್ಮೀನಾರಾಯಣ ಅವರು ಮಾವಿನ ಹಣ್ಣುಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಲಕ್ಷಾಂತರ ರೂಪಾಯಿ ಬೆಲೆಬಾಳುವ ಮಾವಿನ ಹಣ್ಣುಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ತೋಟದಲ್ಲಿದ್ದ ಹಣ್ಣುಗಳ ಕಳ್ಳತನವಾಗಿರುವುದು ಲಕ್ಷ್ಮೀನಾರಾಯಣ ಅವರ ಗಮನಕ್ಕೆ ಬಂದಿರುವುದಾಗಿ ವರದಿ ವಿವರಿಸಿದೆ.
ಮಾವಿನ ಹಣ್ಣುಗಳನ್ನು ಸ್ಥಳೀಯರು ಕದ್ದಿದ್ದಾರೋ ಅಥವಾ ಬೇರೆ ಯಾರಾದರೂ ಕಳವು ಮಾಡಿರಬಹುದಾ ಎಂಬ ಸಂಶಯ ಲಕ್ಷ್ಮೀನಾರಾಯಣ ಅವರದ್ದಾಗಿದೆ. ಜತೆಗೆ ಕೃಷಿ ಉತ್ಪನ್ನಗಳಿಗೆ ಭದ್ರತೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.