Advertisement
ತಾಲೂಕಿನಲ್ಲಿ ಸುಮಾರು 9 ಸಾವಿರದ ಹೆಕ್ಟೇರ್‌ನಲ್ಲಿ ರೈತರು ಮಾವು ಬೆಳೆದಿದ್ದಾರೆ. ಈ ಬಾರಿ ಮಾವಿನ ಮರಗಳಲ್ಲಿ ಸಾಧಾರಣ ಹೂವು ಬಿಟ್ಟಿದ್ದು. ಮಲ ಗೋವಾ, ರಸಪೂರಿ, ಸೇಂದೂರ, ಬಾದಾಮಿ, ರಾಮ ಗೋಲ್ಟ್ ಸೇರಿದಂತೆ ವಿವಿಧ ತಳಿಗಳನ್ನು ರೈತರು ಬೆಳೆದಿದ್ದಾರೆ. ರಸಭರಿತ ಮಾವು ಬೆಳೆಗೆ ಮಾಗಡಿ ಹೇಳಿ ಮಾಡಿಸಿದ ಭೂಮಿ. ಮಾಗಡಿ ಗುಡ್ಡಗಾಡು ಪ್ರದೇಶದವಾಗಿದ್ದು, ಕಡಿಮೆ ನೀರಿದ್ದರೂ ಸಹ ಮಾವಿನ ಗಿಡ ಬೆಳೆಸಲು ಉತ್ತಮ ಭೂಮಿಯಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಮಾವು ಬೆಳೆ ಬಂದಿದೆ.
Related Articles
Advertisement
ರೈತರಿಗೆ ಅಗತ್ಯ ಮಾರ್ಗದರ್ಶ: ಮಾವು ಬೆಳೆಗಾರರ ತೋಟಗಳಿಗೆ ತೋಟಗಾರಿಕಾ ಅಧಿಕಾರಿಗಳು ಮತ್ತು ಸಂಬಂಧಪಟ್ಟ ವಿಜ್ಞಾನಿಗಳು ಭೇಟಿ ಕೊಟ್ಟು, ಮಾವಿನ ಗಿಡ, ಹೂ, ಹಣ್ಣುಗಳ ರಕ್ಷಣೆ, ರೋಗಬಾಧೆ ತಡೆಗೆ ಸೂಕ್ತ ಔಷಧ ವಿತರಣೆ, ಕಾಲ ಕಾಲಕ್ಕೆ ಸಿಂಪಡಣೆ ಮಾಡಿಸುವುದು. ತಾಂತ್ರಿಕವಾದ ಬೇಸಾಯ ಪದ್ಧತಿ ಹೀಗೆ ಅವರಿಗೆ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ವರ್ಷಕ್ಕೊಮ್ಮೆ ಮಾವು ಬೆಳೆ: ವರ್ಷಕ್ಕೊಮ್ಮೆ ಮಾತ್ರ ಮಾವು ಬೆಳೆ ಬರುವುದು. ಆದರೆ, ಅಕಾಲಿಕ ಮಳೆಯಿಂದಲೋ ಅಥವಾ ಹೊಸ ಹೊಸ ಆವಿಷ್ಕಾರದ ಹೈಬ್ರಿಡ್ ತಳಿಗಳು ಕೆಲವೊಮ್ಮೆ ಎರಡು ಬೆಳೆಗಳನ್ನು ನೀಡುತ್ತವೆ. ಆದರೂ, ವಸಂತ ಕಾಲದಲ್ಲಿ ಮಾತ್ರ ಮಾವು ಸಮೃದ್ಧ ಬೆಳೆ ಬರುವುದು. ಹೈಬ್ರಿಡ್ ತಳಿ ಮಾವು ಬೆಳೆಗಾರರು ಕಾಲ ಕಾಲಕ್ಕೆ ಗೊಬ್ಬರ, ಔಷಧ ಸಿಂಪಡಣೆ, ನೀರು ಹಾಕಿ ಮಾವಿನ ಮರಗಳನ್ನು ತಮ್ಮ ಮಕ್ಕಳಂತೆ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಮಾವು ಬೆಳೆಯೇ ಬಹುತೇಕ ರೈತರ ಜೀವನಾಧಾರವಾಗಿದೆ.
ಜಿಲ್ಲೆಯಲ್ಲಿ ಮಾವು ಮೇಳ: ರಾಮನಗರ ಜಿಲ್ಲೆಯಲ್ಲಿ ರಾಮಗೋಲ್ಟ್ ಮಾವಿನ ಹಣ್ಣಿಗೆ ಹೆಚ್ಚಿನ ಬಹುಬೇಡಿಕೆಯಿದೆ. ಮಾವಿನ ಹಣ್ಣಿನ ಕಾಲ ಆರಂಭಗೊಂಡಂತೆ ರಾಮನಗರದಲ್ಲಿ ಮಾವು ಮೇಳ ಸಹ ಏರ್ಪಡಿಸಲಾಗುತ್ತದೆ. ರಾಮಗೋಲ್ಟ್ ಮತ್ತು ಬಾದಾಮಿ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದ್ದು, ಮಾವು ಖರೀದಿದಾರರು ದೂರದ ಊರುಗಳಿಂದ ಆಗಮಿಸಿ ಮಾವು ಖರೀದಿಯಲ್ಲಿ ತೊಡಗುತ್ತಾರೆ. ಸುಮಾರು ಒಂದು ವಾರಗಳ ಕಾಲ ನಡೆಯುವ ಈ ಮೇಳದಲ್ಲಿ ವಿವಿಧ ತಳಿಗಳ ಮಾವಿನ ಹಣ್ಣುಗಳ ಮಾರಾಟ ನಡೆಯುತ್ತದೆ. ರೈತರು ದಳ್ಳಾಳಿ ಮುಕ್ತ ಮಾರಾಟಕ್ಕೆ ಸರ್ಕಾರ ಸಹ ಸಹಕಾರ ನೀಡುತ್ತದೆ.
ತಾಲೂಕಿನಲ್ಲಿ 9 ಸಾವಿರ ಹೆಕ್ಟರ್‌ನಲ್ಲಿ ರೈತರು ಮಾವಿನಗಿಡ ನೆಟ್ಟಿದ್ದಾರೆ. ರೈತರ ಮಾವಿನ ತೋಟಗಳಿಗೆ ಕೆವಿಕೆ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ಮಾವು ಬೆಳೆಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಆಗತ್ಯ ಔಷಧಗಳನ್ನು ಶೇ. 50ರ ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತಿದೆ. ಈ ಬಾರಿ ಬೆಳೆ ನಿರೀಕ್ಷೆಗಿಂತ ಕಡಿಮೆಯಾಗಲಿದೆ. ಮಾರುಕಟ್ಟೆಯಲ್ಲಿ ಬೇಡಿಕೆಯಿದ್ದರೆ ಮಾತ್ರ ರೈತರಿಗೆ ಕನಿಷ್ಠ ಲಾಭವೂ ಸಹ ನಿರೀಕ್ಷಿಸಬಹುದು. ರೈತರು ಆತಂಕ ಪಡುವುದು ಬೇಡ. ವಿಮೆ ಜಮಾ ಮಾಡಿದ್ದರೆ ನಷ್ಟದ ಮಾವು ವಿಮೆ ಪಡೆಯಬಹುದು. – ನಾಗರಾಜು, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಈ ಬಾರಿ ಮಾವಿನ ಮರಗಳು ಸಾಧಾರಣವಾಗಿ ಕಾಯಿ ಬಿಟ್ಟಿವೆ. ಈ ಬಾರಿ ಕಡಿಮೆ ಬೆಳೆಯಿದ್ದು, ಬೇಡಿಕೆ ಹೆಚ್ಚಿದರೆ ಮಾತ್ರ ಉತ್ತಮ ಬೆಲೆ ಸಿಗಬಹುದು. ಅಕಾಲಿಕ ಮಳೆ ಬೀಳದಿದ್ದರೆ ಮಾವು ಬೆಳೆಯಲ್ಲಿ ರೈತರ ಕೈಗೆ ಹಣ ಸಿಗುತ್ತದೆ. ಇಲ್ಲದಿದ್ದರೆ ನಷ್ಟದಿಂದ ಕೈಸುಟ್ಟುಕೊಳ್ಳುವವರೇ ಹೆಚ್ಚು. ಸಂಬಂಧಪಟ್ಟ ಅಧಿಕಾರಿಗಳು ಸಕಾಲಕ್ಕೆ ಔಷಧ ಪೂರೈಕೆ ಮಾಡಿದ್ದಾರೆ. ಮಾವಿನ ತೋಟಕ್ಕೆ ಸಿಂಪಡಿಸಿ ರೋಗಬಾಧೆಯಿಂದ ಮಾವಿನ ಹೂಗಳನ್ನು ರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ. – ಗಂಗಣ್ಣ, ಪ್ರಗತಿಪರ ರೈತ, ಮಾವು ಬೆಳೆಗಾರರು
– ತಿರುಮಲೆ ಶ್ರೀನಿವಾಸ್