Advertisement

ವಿನಾಶದಂಚಿನಲ್ಲಿ ಕಾಟು ಮಾವಿನ ಮರ! ಮಾವಿನ ಮಿಡಿಗೆ ಭಾರೀ ಬೇಡಿಕೆ; ಪೂರೈಕೆ ಕೊರತೆ

12:42 PM Apr 05, 2024 | Team Udayavani |

ಪುತ್ತೂರು/ಕುಂದಾಪುರ: ಉಪ್ಪಿನಕಾಯಿ ಹಾಕಲೆಂದೇ ಬಳಸಲ್ಪಡುವ ಕಾಟು ಮಾವಿನ ಮಿಡಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸಾಕಷ್ಟು ಬೇಡಿಕೆ ಇದ್ದರೂ ಪೂರೈಕೆಯ ಕೊರತೆಯಿಂದ ಧಾರಣೆ ಗಗನಕ್ಕೇರಿದೆ. ಪುತ್ತೂರು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 300ರಿಂದ 350 ರೂ. ತನಕ ಧಾರಣೆ ಕಂಡು ಬಂದಿದೆ.

Advertisement

10-15 ವರ್ಷಗಳ ಹಿಂದೆ ತೋಟದ ಬದಿ, ಗುಡ್ಡ ಪ್ರದೇಶಗಳಲ್ಲಿ ಕಾಟು ಮಾವಿನ ಮರ ಹೇರಳವಾಗಿತ್ತು. ವಾಣಿಜ್ಯ ಆಧಾರಿತ ಕೃಷಿಯ ಕಾರಣದಿಂದ ಈ ಮರಗಳನ್ನು ನಾಶ ಮಾಡಲಾಗಿದೆ. ಮನೆ ವಠಾರದಲ್ಲಿ ಹೈಬ್ರೀಡ್‌ ತಳಿಯ ಮಾವಿನ ಗಿಡಗಳನ್ನು
ಬೆಳೆಯಲಾಗುತ್ತಿದೆ. ಆದರೆ ಅವು ಉಪ್ಪಿನಕಾಯಿಗೆ ಯೋಗ್ಯವಾಗಿಲ್ಲ. ಹಳ್ಳಿಗಾಡಿನ ಆಯ್ದ ಕಾಟು ಮಾವಿನ ಮರಗಳ ಕಾಯಿಗಳ ಸೊನೆ, ರುಚಿ, ಗಾತ್ರ, ಬಾಳಿಕೆ ಆಧಾರದಲ್ಲಿ ಉಪ್ಪಿನಕಾಯಿ ಹಾಕಲು ಅರ್ಹತೆ ಪಡೆಯುತ್ತವೆ.

ಮಿಡಿ ಒಂದಕ್ಕೆ 10 ರೂ.!
ಹೊರ ತಾಲೂಕು, ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣದ ಮಾರುಕಟ್ಟೆಗೆ ಬಂದಿರುವ ಕಾಟು ಮಾವಿನಕಾಯಿ ದುಬಾರಿಯಾಗಿದೆ. ಮಿಡಿಗಳು ಕೆ.ಜಿ.ಗೆ 30ರಿಂದ 35ರಷ್ಟು ಮಾತ್ರ ತೂಗುತ್ತವೆ. ತೀರಾ ಸಣ್ಣದಾದರೆ 50ರ ವರೆಗೆ ಇರುವ ಸಾಧ್ಯತೆಯಿದೆ. ಪ್ರಸ್ತುತ ಕೆ.ಜಿ.ಗೆ ಗರಿಷ್ಠ 350 ರೂ. ದರ ಇದೆ. ಈಗಿನ ಧಾರಣೆ ಲೆಕ್ಕಾಚಾರದಲ್ಲಿ ಒಂದು ಮಾವಿನ ಮಿಡಿಗೆ ಸುಮಾರು 10 ರೂ. ಕಂಡು ಬಂದಿದೆ.

ಇಳುವರಿ ಕುಸಿತ
ಲಭ್ಯ ಕಾಟು ಮಾವಿನ ಮರಗಳಲ್ಲಿ ಈ ಬಾರಿ ಫಸಲು ಕಂಡು ಬಂದಿಲ್ಲ. ವಾತಾವರಣದಲ್ಲಿ ಬದಲಾವಣೆ, ತಾಪಮಾನ ದಲ್ಲಿ ಏರಿಕೆ ಕೂಡ ಕಾರಣ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, ಜುಲೈ, ಆಗಸ್ಟ್‌ನಲ್ಲಿ ನಿರೀಕ್ಷಿತ ಮಳೆ ಬಾರದಿರುವುದು ಮೊದಲಾದ ಕಾರಣಗಳಿಂದ ಮಾವಿನ ಮರಗಳು ಹೂವು ಬಿಟ್ಟಿಲ್ಲ. ಮೋಡದಿಂದಾಗಿ ಹೂವು ಕರಟಿದ್ದರಿಂದಲೂ ಇಳುವರಿ ಯಲ್ಲಿ ಕುಸಿತವಾಗಿದೆ ಎನ್ನುತ್ತಾರೆ.

ಪುತ್ತೂರಿನಲ್ಲಿ ಏಲಂ ರದ್ದು!:
ಮಾವಿನ ಮಿಡಿ ಕೊಯ್ಯದಂತೆ ತಡೆ ನೀಡಬೇಕು ಎಂಬ ಶಾಸಕರ ಸೂಚನೆಯನುಸಾರ ಪುತ್ತೂರು ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಜಾಗದಲ್ಲಿ ಮತ್ತು ರಸ್ತೆ ಬದಿಗಳಲ್ಲಿರುವ ಮಾವಿನ ಮರಗಳಿಂದ ಮಾವಿನ ಮಿಡಿ ಕೊಯ್ಯುವ ಏಲಂ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ. ಕಾಯಿ ಕೊರತೆಯ ಹಿನ್ನೆಲೆಯಲ್ಲಿ ಮಾವಿನ ಮಿಡಿ ಕೊಯ್ಯದೆ ಹಣ್ಣಾಗಿ ಬಳಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಗರದ ಕೊಟೆಚಾ ಹಾಲ್‌ ಬಳಿ ಮಂಗಳವಾರ ಮಾವಿನ ಮಿಡಿ ಕೊಯ್ಯುತ್ತಿರುವ ಬಗ್ಗೆ ನಗರಸಭಾ ಆಯುಕ್ತರಿಗೆ ದೂರು ಬಂದಿದ್ದು ಪೊಲೀಸರು ಮಾವಿನ ಮಿಡಿ ಕೊಯ್ಯುವುದಕ್ಕೆ ತಡೆ ಒಡ್ಡಿದ ಘಟನೆಯೂ ನಡೆದಿದೆ. ಟೆಂಡರ್‌ ಪ್ರಕ್ರಿಯೆಗೆ ತಡೆ ಹಿಡಿದಿರುವ ಕಾರಣ ಏಲಂ ಪಡೆದುಕೊಂಡವರ ಹಣವನ್ನು ಮರು ಪಾವತಿ ಮಾಡಲಾಗುವುದು ಎಂದು ಪೌರಯುಕ್ತ ಮಧು ಎಸ್‌. ಮನೋಹರ್‌ ತಿಳಿಸಿದ್ದಾರೆ.

Advertisement

ಕೆಲವು ಕಡೆ ನೇರ ವ್ಯವಹಾರ
ದಕ್ಷಿಣ ಕನ್ನಡ ಭಾಗಕ್ಕೆ ಹೋಲಿಸಿದರೆ ಉಡುಪಿ, ಕುಂದಾಪುರ ಕಡೆ ಕಾಟು ಮಾವಿನ ಮಿಡಿಯ ಬೆಲೆ ಸ್ವಲ್ಪ ಅಗ್ಗ. ಇಲ್ಲಿ ಕೆಜಿಗೆ 150 – 200 ರೂ.ಗಳಂತೆ ಮಾರಾಟವಾಗುತ್ತಿದೆ. ಮರದಿಂದ ಕೊçದವರೇ ನೇರವಾಗಿ ವಾರದ ಸಂತೆ, ತರಕಾರಿ ಅಂಗಡಿಗಳಿಗೆ ತಂದು
ಮಾರಾಟ ಮಾಡುತ್ತಿರುವುದೂ ಇದಕ್ಕೆ ಕಾರಣ. ಕೆಲವರು ಕೆಜಿ ಲೆಕ್ಕದಲ್ಲಿ, ಇನ್ನೂ ಕೆಲವರು ಒಂದು ಮಿಡಿಗೆ ಇಂತಿಷ್ಟು ಅನ್ನುವ ಲೆಕ್ಕದಲ್ಲಿ ಮಾರುತ್ತಿದ್ದಾರೆ. ಕುಂದಾಪುರ, ಸಿದ್ದಾಪುರ ಭಾಗದಲ್ಲಿ ಒಂದು ಮಿಡಿಗೆ 3 ರೂ.ಯಂತೆ 100 ಮಿಡಿಗೆ 300 ರೂ.ಗಳಂತೆ ಬೆಳೆಗಾರರು ಮಾರುತ್ತಿದ್ದಾರೆ. ಮಾರುಕಟ್ಟೆಗೆ ಬಂದಷ್ಟೇ ವೇಗದಲ್ಲಿ ಅವು ಬಿಕರಿ ಯಾಗುತ್ತಿವೆ. ಮಾರುಕಟ್ಟೆಗೆ ಬಾರದೆ ಮನೆಯಂಗಳದಲ್ಲೇ ವಿಲೇವಾರಿ ಯಾಗುವುದೂ ಇದೆ. ಈ ಬಾರಿ ಇಳುವರಿ ಎಲ್ಲೆಡೆ ಕಡಿಮೆ. ದೊಡ್ಡ-ದೊಡ್ಡ ಮರಗಳಲ್ಲಿ ಬೆಳೆದ ಮಿಡಿಯನ್ನು ಕೊಯ್ದು ಇಳಿಸುವುದೇ ತುಂಬಾ ಕಷ್ಟದ ಕೆಲಸ. ಮರವೇರುವ ಕುಶಲಿಗರನ್ನು ಕರೆಸಿದರೆ ಮತ್ತಷ್ಟು ದುಬಾರಿಯಾಗುತ್ತದೆ ಎನ್ನುತ್ತಾರೆ ಮಿಡಿ ಮಾರಾಟಗಾರ ರಾಜೇಂದ್ರ ಬೆಚ್ಚಳ್ಳಿ.

ವಾತಾವರಣದ ಏರಿಳಿತದಿಂದ ಮಾವಿನ ಕೊರತೆ ಹೆಚ್ಚಾಗಿರು ವುದರಿಂದ ಧಾರಣೆ ಹೆಚ್ಚಾಗಿದೆ. ಈ ಬಾರಿ ಇಲ್ಲಿನ ಕಾಟು ಮಾವಿನ ಮರಗಳಲ್ಲಿ ನಿರೀಕ್ಷಿತ ಫಸಲು ಸಿಕ್ಕಿಲ್ಲ. ಉಪ್ಪಿನಕಾಯಿಗೆ ಬಳಸಲು ಅಪ್ಪೆ ಮಿಡಿಯನ್ನು ಸಾಗರ, ಚಿಕ್ಕಮಗಳೂರು ಜಿಲ್ಲೆಯಿಂದ ದ.ಕ.ಜಿಲ್ಲೆಗೆ ತಂದು ಮಾರಾಟ ಮಾಡಲಾಗುತ್ತಿದೆ.
ಮಂಜುನಾಥ, ಉಪ ನಿರ್ದೇಶಕ ತೋಟಗಾರಿಕೆ ಇಲಾಖಾ, ಮಂಗಳೂರು

*ಕಿರಣ್‌ ಪ್ರಸಾದ್‌ ಕುಂಡಡ್ಕ / ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next