Advertisement

ಮಾಮರದ ಪ್ರಸಂಗವು

10:42 PM Mar 30, 2019 | Sriram |

ಲೇ ಇಂದು, ನಿಮ್ಮ ಮನೆಯೆದುರಿನ ಮಾವಿನ ಮರ ಹೂ ಬಿಟ್ಟಿದ್ಯಾ?” ನನ್ನ ತಲೆ ಕಂಡ ತಕ್ಷಣ ಪದ್ಮಾಳ ಪ್ರಶ್ನೆ ಬಾಣದಂತೆ ಬಂದೆರಗಿತು. “ಅರೆ, ಇಷ್ಟು ಬೇಗ… ಡಿಸೆಂಬರಲ್ಲೇ? ಇಲ್ಲಪ್ಪ” ತುಸು ಸಾವರಿಸಿಕೊಂಡು ಹೇಳಿದ್ದೆ. ವಾಸ್ತವವಾಗಿ ನಾನು ಆ ಮರವನ್ನು ದಿನವೂ ನೋಡುತ್ತಿರುವೆನಾದರೂ ಈ ವಿಷಯವನ್ನಂತೂ ಗಮನಿಸಿರಲೇ ಇಲ್ಲ. ಮೊನ್ನೆ, ಅನು ಮನೆಗೆ ಹೋಗಿದ್ದೆ. ದೋಸೆಗೆ ಮಿಡಿ ಉಪ್ಪಿನಕಾಯಿ ಹಾಕಿಕೊಟ್ಟಳು.

Advertisement

“”ಎಂಥ ಪರಿಮಳ ಈ ಮಾವಿನಕಾಯಿಯದ್ದು. ಇಂಥದ್ದು ಸಿಗುವುದೇ ಅಪರೂಪ. ನಿನ್ನ ಮರದ್ದು ಕೂಡ ಚೆನ್ನಾಗಿದೆ” ಎಂದಿದ್ದಳು ಪದ್ಮಾ. ಏನೇ ಆಗಲಿ, ಈ ಸಲ ನಿನ್ನಲ್ಲಿ ಕೇಳಬೇಕೂಂತ ಆಗ್ಲೆ ಅಂದೊಂಡಿದ್ದೆ. ನಂಗೆ ಹೆಚ್ಚು ಬೇಡ. ಒಂದು ನೂರು ಸಾಕು” ಎಂದು ನನ್ನ ಪ್ರತಿಕ್ರಿಯೆಗೂ ಕಾಯದೆ ತಾಕೀತು ಮಾಡಿ ಅಷ್ಟೇ ಅವಸರದಲ್ಲಿ ಮಾಯವಾದಳು.

ಇಂತಹ ಕೋರಿಕೆಗಳು, ಅಪ್ಪಣೆಗಳು ನನಗೇನು ಹೊಸದಲ್ಲ. ಮಾವಿನ ಮರ ಹೂಬಿಡುವ ಕಾಲದಲ್ಲಿ, “”ನನಗೆ ಸ್ವಲ್ಪ ಮಿಡಿ ಸಿಗಬಹುದೆ?”, “”ಒಂದು ನೂರು, ಇಲ್ದಿದ್ರೆ ಐವತ್ತಾದ್ರೂ ಆಗಬಹುದು” ಅಂತ ಇಪ್ಪತ್ತೈದು ಜನ ಕೇಳಿರುತ್ತಾರೆ.

ಯಾರಿಗೆಂದು ಕೊಡಲಿ? ಯಾರಿಗೆ ಕೊಡದಿರಲಿ? ಅಷ್ಟಕ್ಕೂ, ಇದು ನಮ್ಮ ಮನೆಯ ಎದುರಿಗಿರುವ ನಮ್ಮದಲ್ಲದ ನಮ್ಮದೇ ಮರ. ಆವರಣ ಗೋಡೆಯ ಹೊರಗೆ ರಸ್ತೆ ಬದಿಯಲ್ಲಿದ್ದರೂ, ನಮ್ಮದಲ್ಲವೆಂದು ಒಪ್ಪಿಕೊಳ್ಳಲಾಗದ ಭಾವನಾತ್ಮಕ ಬಂಧ. ವೃಕ್ಷಕ್ಕೇ ನಾದರೂ ಕಣ್ಣಿರುತ್ತಿದ್ದರೆ, ನಮ್ಮ ಕಣ್ಣುಗಳು ದಿನಕ್ಕೆ ಹತ್ತಾರು ಬಾರಿ ಸಂಧಿ ಸುತ್ತಿದ್ದವೋ ಏನೋ. ನಮ್ಮ ಮರ ನಮ್ಮ ಹೆಮ್ಮೆ ಎಂದೇ ನಮ್ಮ ಭಾವನೆ. ಎಲ್ಲವೂ ಸರಿ, ಆದರೆ ಸಮಸ್ಯೆ ಆರಂಭವಾಗುವುದು ಮರ ಹೂಬಿಟ್ಟು ನಿಂತಾಗ. ನಮ್ಮ ಹೆಮ್ಮೆಯ ಬಲೂನಿಗೆ ಸೂಜಿ ಚುಚ್ಚಿದಂತಾಗುವುದು ಆಗಲೇ.

ಈ ಬಾರಿಯೂ ನಮ್ಮ ಮಾಮರ ಮದುಮಗಳಂತೆ ಹೂ ಮುಡಿದು ನಳನಳಿಸುತ್ತಿತ್ತು. ದಾರಿಹೋಕರು ಒಂದು ಬಾರಿ ನಿಂದು, ದಿಟ್ಟಿಸಿ, ನಿಟ್ಟುಸಿರಿಟ್ಟೇ ಮುಂದೆ ಸಾಗುತ್ತಿದ್ದರು. ಹೂವು ಹಸಿರುಗೋಲಿಯಾದಾಗಲಂತೂ ಕರುಬುವ ಕಣ್ಣುಗಳಿಗೆ ಕೊರತೆ ಇರಲಿಲ್ಲ. ಹಲವರು ತಡೆಯದೇ, “”ನೀವು ಕೊಯ್ಯುವಾಗ ನಮ್ಮನ್ನು ಮರೀಬೇಡಿ” ಎಂದು ನಯವಾಗಿ ಅಪ್ಪಣೆ ಕೊಟ್ಟು ಮುಂದೆ ಸಾಗುತ್ತಾರೆ.

Advertisement

ನಾಲ್ಲದಿರುವಾಗ ಯಾರಾದರೂ ಕೂಯ್ಯಬಹುದೆಂಬ ಆತಂಕ ನಮಗೆ ಒಳಗೊಳಗೆ. ಆದರೆ, ಮರದ ತುಂಬ ಇರುವ ಕೆಂಪಿರುವೆಗಳು ಕಳ್ಳರನ್ನು ಅಷ್ಟು ಸುಲಭವಾಗಿ ಬಿಡಲಾರವೆಂಬ ಭರವಸೆ.

ಮತ್ತೋರ್ವ ಬಂದು, ತಾನು ಒಂದಿಷ್ಟು ಕೀಳಲು ಅನುಮತಿ ಪಡೆಯುತ್ತಾನೆ. ಆಗೆಲ್ಲ ನಮಗೆ ನಮ್ಮದೇ ಮರವೆಂಬ ಭ್ರಮೆ ನಿಜವಾಗಿರ ಬೇಕೆಂದೆನಿಸುತ್ತದೆ. ನಮ್ಮ ಹಮ್ಮನ್ನು ಒಮ್ಮೆ ನಯವಾಗಿ ತೀಡಿದಂತಾಗುತ್ತದೆ. ಹೀಗೆ ಕೇಳಿದವರಿಗೆ, ಅರ್ಧದಷ್ಟು ನಮಗೆ ಕೊಡಬೇಕೆಂಬ ಷರತ್ತು ಹಾಕುತ್ತ, ಕೊಯ್ದ ಬಳಿಕ ಚೌಕಾಶಿ ಮಾಡಿ ಅರ್ಧಕ್ಕಿಂತ ಜಾಸ್ತಿಯೇ ಇಟ್ಟುಕೊಳ್ಳುತ್ತೇವೆ.

ತರಹೇವಾರಿ ಉಪ್ಪಿನಕಾಯಿಗಳು! ಜತೆಗೆ ಐವತ್ತು-ನೂರು ಕೇಳಿದ ಬೆರಳಣಿಕೆಯ ಮಂದಿಗೂ ಪೂರೈಕೆಯಾಗುತ್ತದೆ. ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಜಾಣ ನಡೆ. ಇಲ್ಲದಿದ್ದರೆ ದುಬಾರಿ ಮಜೂರಿ ಕೊಟ್ಟು ಕೀಳಿಸುವುದು ಆಗುವ ಮಾತೇ? ಆದರೂ ಕೊಡಲಾಗದವರಿಗೆ ನಮ್ಮ ಮೇಲೆ ಸಣ್ಣ ಮನಸ್ತಾಪ ಇದ್ದೇ ಇರುತ್ತದೆ.

ಮಿಡಿಯ ಆಸೆಗಾಗಿ ಮರದ ಕೊಂಬೆ ಕಡಿಯಲು ಬಂದವರೆಷ್ಟು ಜನ. ಮರ ಹತ್ತಿ ಕೀಳಲು ಕೆಂಪಿರುವೆ ಆಕ್ರಮಣದ ಹೆದರಿಕೆ. ಚಿನ್ನದ ಮೊಟ್ಟೆ ಇಡುತ್ತದೆಯೆಂದು ಕೋಳಿಯನ್ನೇ ಕಡಿಯುವ ಯೋಚನೆ ಇವರಿಗೆ. ಅಂತಹ ಪ್ರಸ್ತಾಪಗಳನ್ನು ಮಾತ್ರ ನಾವು ಸಾರಾಸಗಟಾಗಿ ತಿರಸ್ಕರಿಸಿದೆವು. ಈ ಜನ ನಮ್ಮನ್ನು ಮನದಲ್ಲೇ ಶಪಿಸಿರಬಹುದು. ಇನ್ನು ಹಲವರಿಗೆ ಅವರನ್ನೇನು ಕೇಳುವುದು ಎಂಬ ಧಿಮಾಕು. ಇವರಿಗೇಕಿಷ್ಟು ಮಾವಿನಕಾಯಿ ಎಂಬ ಅಸೂಯೆ!

ಹಲವಾರು ಬಾರಿ, ನಮಗೆ ಬೇಕಾದಷ್ಟು ಕಿತ್ತು ಸುಮ್ಮನಾ ಗೋಣವೆಂದು ಬಿಟ್ಟರೂ, ಬಿಡದೀ ಮಾಮರವೆಂಬ ಮಾಯೆ. ಯಾರು ಅದನ್ನು ದಿಟ್ಟಿಸಿದರೂ ಅದೇನೋ ಕಸಿವಿಸಿ. ಎಲ್ಲಿ ದೃಷ್ಟಿ ತಾಕುತ್ತದೆಯೋ ಎಂಬ ಆತಂಕ. ಕಣ್ಣು ತಪ್ಪಿಸಿ ಕೊಯ್ಯುತ್ತಾರೋ ಎಂಬ ಭಯ. ಈ ನಡುವೆ ಅಲ್ಲಲ್ಲಿ ಉಳಿದ ಕಾಯಿಗಳು ಬಲಿಯತೊಡಗಿವೆ. ಹಣ್ಣುಗಳ ರಾಜ ಮಾವೆಂದರೆ, ಕೇವಲ ಉಪ್ಪಿನಕಾಯಿಯೇ? ಬಾಯಲ್ಲಿ ನೀರೂರಿಸುವ ಹಲವಾರು ಖಾದ್ಯಗಳು ಮನದಲ್ಲಿ ಮೂಡಿಬರುತ್ತಿದ್ದವು. ಆದರೆ, ಅದೊಂದು ದಿನ, ಗಾಢ ಹಸಿರು ದಿರಿಸಿನ ಜನ ಬಂದು ಕೆಂಪಿರುವೆಗಳನ್ನೂ ಲೆಕ್ಕಿಸದೇ, ವಿದ್ಯುತ್‌ ಕಂಬಕ್ಕೆ ತಾಗುತ್ತದೆಯೆಂದು ದೊಡ್ಡ ರೆಂಬೆಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಹಾಕಿದರು. ಸಿಕ್ಕಿದಷ್ಟು ಹೆಕ್ಕಿ, ಇನ್ನೊಂದಿಬ್ಬರು ಐವತ್ತು ನೂರು ಗಿರಾಕಿಗಳಿಗೆ ಹಂಚಿದೆವು.
ಬ್ರಹ್ಮರಥದಂತೆ ಎಲ್ಲರ ದೃಷ್ಟಿ ತಾಗುವಂತಿದ್ದ ನಮ್ಮ ಮರ ಇಂದು ಬೆತ್ತಲಾಗಿ ನಿಂತಿದೆ. ಬಡಕಲಾಗಿದೆ. ಯಾರ ಕೆಟ್ಟ ದೃಷ್ಟಿ ತಾಗಿತೋ. ದಿಟ್ಟಿಸುವ ಜನಕ್ಕೆ ಅಥವಾ ಮಿಡಿ ಪಡೆದವರಿಗೆ ಏನೂ ಅನಿಸದಿರಬಹುದು. ಆದರೆ, ನಮಗಾದ ಸಂಕಟ ಹೇಳ ತೀರದು. ಅದಕ್ಕೇ ಅದು ನಮ್ಮ ಮರ.

– ಇಂದಿರಾ ಆಚಾರ್ಯ

 

Advertisement

Udayavani is now on Telegram. Click here to join our channel and stay updated with the latest news.

Next