Advertisement

ಬಿಸಿಲು, ಆಲಿಕಲ್ಲು ಮಳೆಗೆ ಉದುರಿದ ಮಾವು

03:49 PM May 22, 2019 | Team Udayavani |

ಮಾಸ್ತಿ: ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿ, ಮಾವಿನ ಮರಗಳಲ್ಲಿ ಹೂವಿನ ಪ್ರಮಾಣ ಕಡಿಮೆಯಾಗಿ, ಇಳುವರಿಯಲ್ಲಿ ಭಾರೀ ಕುಸಿತವಾಗಿದೆ. ಮೇ ಮುಗಿಯುತ್ತ ಬಂದರೂ ಮಾವು ಇನ್ನೂ ಮಾಗುವ ಸ್ಥಿತಿಯಲ್ಲಿದ್ದು, ರೈತರನ್ನು ಚಿಂತಿಗೀಡುಮಾಡಿದೆ.

Advertisement

ಆರಂಭದಲ್ಲಿ ಮರದ ತುಂಬಾ ಹೂ ಬಿಟ್ಟು ನಿರೀಕ್ಷೆ ಹುಟ್ಟಿಸಿತ್ತು. ಆದರೆ, ವಾತಾವರಣದಲ್ಲಿನ ಏರುಪೇರು ರೈತನ ಲೆಕ್ಕಾಚಾರ ತಲೆಕೆಳಗಾಗಿಸಿದೆ. ಪ್ರತಿ ವರ್ಷ ಒಂದು ಗಿಡದಿಂದ 60 ರಿಂದ 70 ಕೆ.ಜಿ. ಮಾವಿನ ಫ‌ಲ ಬರುತ್ತಿತ್ತು. ಆದರೆ, ಈ ಬಾರಿ 30 ರಿಂದ 40ಕ್ಕೆ ಇಳಿದಿದೆ. ಹಿಂದಿನಂತೆ ಈ ಬಾರಿಯೂ ಬರಗಾಲ, ಬಿಸಿಲಿನ ತಾಪ ಹೆಚ್ಚಾಗಿ ಗಿಡಕ್ಕೆ 30 ಕೆ.ಜಿ. ಹಣ್ಣು ಬಂದರೆ ಹೆಚ್ಚು ಎನ್ನುವಂತಾಗಿದೆ.

ಇನ್ನು ಒಂದು ಟನ್‌ ಮಾವು ಬಿಟ್ಟ ಗಿಡಗಳಲ್ಲಿ ಈಗ ಒಂದು ಕಾಯಿಯೂ ಕಾಣಿಸಿಗುತ್ತಿಲ್ಲ. ಹಣ್ಣುಗಳ ಗಾತ್ರದಲ್ಲಿ ಕೂಡ ವ್ಯತ್ಯಾಸ ಕಂಡು ಬರುತ್ತಿದೆ. ಕಳೆದ ವರ್ಷ ಮೂರು ಹಣ್ಣುಗಳಿಗೆ ಒಂದು ಕೆ.ಜಿ. ತೂಗುತ್ತಿತ್ತು. ಈಗ ಏಳು ಹಣ್ಣುಗಳು ಸೇರಿದರೂ ಕೆ.ಜಿ. ತೂಗುತ್ತಿಲ್ಲ.

ಮಣ್ಣು ಪಾಲು: ಮಾವು ಹೂ ಬಿಡುವ ಸಮಯದಲ್ಲಿ 30 ರಿಂದ 35 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಬೇಕು. ಆದರೆ, ಮಾಲೂರು ತಾಲೂಕಿನಲ್ಲಿ ಪ್ರಸ್ತುತ ಬಿಸಿಲಿನ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿಕೆಯಾಗಿ ಬಿಸಿಲಿಗೆ ಮಾವಿನ ಹೂ ಉದುರಿ ಹೋಗಿವೆ. ಅದರಲ್ಲೂ ಕಳೆದ 1 ತಿಂಗಳಿಂದ ಬಿಸಿಲಿನ ತಾಪಮಾನದಿಂದ ಮಾವಿನ ಕಾಯಿಗಳು ಸಹ ಉದುರಿಹೋಗಿವೆ. ಭೂಮಿಯಲ್ಲಿ ನೀರಿನ ಅಂಶ ಇಲ್ಲದ ಕಾರಣ ಮರಗಳು ಒಣಗುತ್ತಿದ್ದು, ಗಿಡಗಳಲ್ಲಿನ ಕಾಯಿಯ ಗೊಂಚಲುಗಳು ಮಣ್ಣಿನ ಪಾಲಾಗುತ್ತಿವೆ.

ತಲೆ ಮೇಲೆ ಕೈಹೊತ್ತ ರೈತ: ಮಾಸ್ತಿ ಹೋಬಳಿ 50 ಹೆಕ್ಟೇರ್‌ ಭೂ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ತೋತಾಪುರಿ, ನೀಲಂ, ಬಾದಾಮಿ, ಮಲ್ಲಿಕಾ, ರಸಪುರಿ, ಬೇಗಂಪಲ್ಲಿ, ಅಲ್ಪೋನ್ಸಾ ಸೇರಿ ಹಲವು ಜಾತಿಯ ಮಾವಿನ ಗಿಡಗಳನ್ನು ನಾಟಿ ಮಾಡಿದ್ದು, ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ, ಬಿಸಿಲಿನ ಬೇಗೆಯಿಂದ ಮಾವಿನ ಗಿಡಗಳಲ್ಲಿ ಇಳುವರಿ ಕಡಿಮೆಯಾಗಿರುವುದರಿಂದ ಇದನ್ನೇ ನಂಬಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

Advertisement

ಹೂಜಿ ನೊಣಗಳ ಕಾಟ: ಈಗಾಗಲೇ ಮಾರುಕಟ್ಟೆ ಸೇರಿ ಹಣ್ಣಿನ ಅಂಗಡಿಗಳಿಗೆ ವಿವಿಧ ಜಾತಿಯ ಮಾವಿನ ಹಣ್ಣುಗಳು ಬಂದಿವೆ. ಇಳುವರಿ ಕುಸಿತವಾಗಿರುವುದರಿಂದ ಬೆಲೆಯಲ್ಲಿಯೂ ಏರಿಕೆಯಾಗಿದೆ. ಮಾಸ್ತಿ ಸೇರಿ ತಾಲೂಕಿನ ವಿವಿಧೆಡೆ ಅಲ್ಪ ಸ್ವಲ್ಪ ಮಳೆಯಾಗುತ್ತಿದೆ. ಬಾಡಿದ್ದ ಮಾವಿನ ಗಿಡಗಳಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ಆದರೂ ಬಿಸಿಲಿನ ತಾಪ ಕಡಿಮೆಯಾಗುತ್ತಿಲ್ಲ.

ಹೂಜಿ ನೊಣಗಳ ಕಾಟ: ಅದರಲ್ಲೂ ಗಿಡಗಳಲ್ಲಿ ಉಳಿದಿರುವ ಕಾಯಿಗಳಿಗೆ ಹೂಜಿ ನೊಣಗಳ ಕಾಟ ಹೆಚ್ಚಾಗುತ್ತಿದೆ. ಕಾಯಿಯೊಳಗೆ ಹೂಜಿ ಪ್ರವೇಶಿಸಿದರೆ ಸಾಕು ಆ ಕಾಯಿಯನ್ನು ತಿನ್ನಲು ಆಗುವುದಿಲ್ಲ. ಸರ್ಕಾರ ಮಾವು ಬೆಳೆಯಿಂದ ನಷ್ಟ ಅನುಭವಿಸಿರುವ ರೈತರಿಗೆ ನಷ್ಟ ಪರಿಹಾರ ನೀಡಬೇಕಾಗಿದೆ.

ಕಾಯಿ ಕಟ್ಟಿಲ್ಲ: ಬಿಸಿಲಿನ ತಾಪ ಹೆಚ್ಚಾಗಿರುವುದರ ಜತೆಗೆ ಕೊಳವೆ ಬಾವಿಯಲ್ಲಿ ಅಂತರ್ಜಲದ ಮಟ್ಟ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದಿಂದ ಗಿಡದಲ್ಲಿ ಹಿಂದೆ ಬಿಟ್ಟಿದ್ದ ಹೂವು ಉದುರಿದೆ. ಇದರಿಂದ ಮಾವಿನ ಇಳುವರಿ ಕುಂಠಿತವಾಗಿದೆ. ಸಾಮಾನ್ಯವಾಗಿ ಗಿಡದಲ್ಲಿ 200 ರಿಂದ 300 ಕಾಯಿ ಕಟ್ಟುತ್ತಿದ್ದವು. ಆದರೆ, ಈ ಬಾರಿ 30 ರಿಂದ 60 ಕಾಯಿ ಬಿಟ್ಟಿವೆ. ತೋಟದಲ್ಲಿ ಗಿಡಗಳ ಮಧ್ಯೆ ಟ್ರ್ಯಾಕ್ಟರ್‌ನಿಂದ ಭೂಮಿ ಹಸನು ಮಾಡಿ, ಗಿಡಗಳಿಗೆ ಔಷಧ ಸಿಂಪರಣೆ ಸೇರಿ ಎಕರೆಗೆ ಸಾವಿರಾರು ರೂ. ವೆಚ್ಚ ಮಾಡಲಾಗಿದೆ. ಆದರೆ, ಈ ವರ್ಷ ಇಳುವರಿ ಕಡಿಮೆಯಾಗಿದೆ ಎಂದು ರೈತರು ಅಳಲಾಗಿದೆ.

.ಎಂ.ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next