ಮಾವಿನ ಹಣ್ಣಿನ ಸೀಸನ್ ಶುರು ಆಗಿದೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನದ್ದೇ ಕಾರುಬಾರು. ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರೂ ಬಾಯಿಚಪ್ಪರಿಸಿಕೊಂಡು ಈ ಹಣ್ಣುನ್ನು ತಿನ್ನುತ್ತಾರೆ. ಅದರಲ್ಲೂ ನಮ್ಮ ಮಲೆನಾಡು ಹಾಗೂ ಕರಾವಳಿಯಲ್ಲಿ ಸಿಗುವ ಕಾಟುಮಾವಿನ ಹಣ್ಣು ಅಡುಗೆಯಲ್ಲಿ ತನ್ನ ಅಗ್ರಸ್ಥಾನವನ್ನು ಹೊಂದಿದೆ.
ಮಾವಿನ ಹಣ್ಣಿನಲ್ಲಿ ಪೋಷಕಾಂಶವು ಹೇರಳವಾಗಿದ್ದು ಪೊಟ್ಯಾಷಿಯಂ, ಪ್ರೋಟೀನ್, ವಿಟಮಿನ್‌ಎ, ಬಿ, ಸಿಯನ್ನು ಹೊಂದಿದ್ದು ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ದೇಹದ ತೂಕವನ್ನು ನಿಯಂತ್ರಿಸಲು ಇದು ಸಹಕಾರಿಸುತ್ತದೆ ಆದ್ದರಿಂದ ಮಾವಿನ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
ಮಾವಿನ ಹಣ್ಣಿನ ಖಾದ್ಯ ಒಂದಕ್ಕಿಂತ ಒಂದು ರುಚಿ. ಉದಾಃ ಮಾವಿನ ಹಣ್ಣಿನ ಗೊಜ್ಜು, ಸಾರು, ಐಸ್‌ಕ್ರಿಮ್, ಹೋಳಿಗೆ , ಉಪ್ಕರಿ ಹೀಗೆ ಒಂದೇ ಎರಡೇ. ಹಾಗಾದರೆ ನಾವು ನಿಮಗೆ ಇವತ್ತು ಕಾಟು ಮಾವಿನ ಹಣ್ಣಿನಿಂದ ಮಾಡುವ ಉಪ್ಕರಿ ರೆಸಿಪಿಯನ್ನು ತಿಳಿಸುತ್ತೇವೆ.
ಹಾಗಾದರೆ ಇನ್ನೇಕೆ ತಡ ರುಚಿ-ರುಚಿಯಾದ “ಮಾವಿನ ಹಣ್ಣಿನ ಉಪ್ಕರಿ” ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ….
Related Articles
ಬೇಕಾಗುವ ಸಾಮಗ್ರಿಗಳು
ಕಾಟು ಮಾವಿನ ಹಣ್ಣು -8 ರಿಂದ 10, ಹಸಿಮೆಣಸು-3, ಒಣಮೆಣಸು(ಬ್ಯಾಡಗಿ ಮೆಣಸಿನಕಾಯಿ)-3, ಬೆಲ್ಲ-ಸ್ವಲ್ಪ, ಮೈದಾಹಿಟ್ಟು-1 ಚಮಚ, ಸಾಸಿವೆ-1ಚಮಚ, ಉದ್ದಿನ ಬೇಳೆ-1ಚಮಚ, ತೆಂಗಿನೆಣ್ಣೆ-3ಚಮಚ, ಕರಿಬೇವಿನ ಗರಿ-2, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ಸುಲಿದು ಒಂದು ಪಾತ್ರೆಗೆ ಹಾಕಿರಿ. ನಂತರ ಸಿಪ್ಪೆಗೆ ಸ್ವಲ್ಪ ನೀರನ್ನು ಹಾಕಿ ಕೈಯಿಂದ ಚೆನ್ನಾಗಿ ಕಿವುಚಿ ರಸ ಹಿಂಡಿ ತೆಗೆಯಿರಿ. ಆ ಬಳಿಕ ರಸ ಮಾತ್ರ ಪಾತ್ರೆಯಲ್ಲಿರುವ ಹಣ್ಣುಗಳೊಟ್ಟಿಗೆ ಹಾಕಿರಿ. ಆಮೇಲೆ ಸ್ವಲ್ಪ ಬೆಲ್ಲವನ್ನು ಹಾಕಿ ಪಾತ್ರೆಯನ್ನು ಒಲೆಯ ಮೇಲೆ ಇಡಿ. ತದನಂತರ ಅದಕ್ಕೆ ಹಸಿಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೇಯಿಸಿಕೊಳ್ಳಿ. ನಂತರ ಒಂದು ಸಣ್ಣ ಪಾತ್ರೆಗೆ ಮೈದಾವನ್ನು ನೀರಿನೊಟ್ಟಿಗೆ ಕಲಸಿಕೊಳ್ಳಿ(ಗಂಟ್ಟು ಕಟ್ಟಬಾರದು). ನಂತರ ಬೆಂದ ಮಾವಿನ ಹಣ್ಣಿಗೆ ಕಲಸಿಟ್ಟ ಮೈದಾವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನೀರು ಬೇಕಾದರೆ ಸೇರಿಸಿಕೊಳ್ಳಿ. ತದನಂತರ ಚೆನ್ನಾಗಿ ಕುದಿ ಬಂದ ಮೇಲೆ ಒಲೆಯಿಂದ ಇಳಿಸಿರಿ. ಒಂದು ಬಾಣಲೆಗೆ 3ಚಮಚ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು ಒಗ್ಗರಣೆ ಮಾಡಿ ಅದಕ್ಕೆ ಹಾಕಿದರೆ ರುಚಿಯಾದ ಮಾವಿನ ಹಣ್ಣಿನ ಉಪ್ಕರಿ ಸವಿಯಲು ಸಿದ್ಧ ಇದನ್ನು ಅನ್ನದ ಜೊತೆಗೆ ತಿಂದರೆ ರುಚಿಯಾಗಿರುತ್ತದೆ.