Advertisement

ಮಾವು ಬೆಲೆ ಕುಸಿತ, ಕಂಗಾಲಾದ ರೈತ

06:55 AM Jun 04, 2018 | |

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಅನ್ನದಾತರಿಗೆ ಮಾವು ಕೈ ಕೊಟ್ಟಿದೆ. ಈ ವರ್ಷ ಮಾವು ಬೆಳೆ ದಿಢೀರ್‌ ಕುಸಿತಗೊಂಡು ಬೆಳೆಗಾರರು ಕಣ್ಣೀರಿಡುವಂತಾಗಿದೆ. ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ಬದಾಮಿ, ಸಿಂಧೂರ, ನೀಲಂ ಹಾಗೂ ತೋತಾಪುರಿಗಳ ಬೆಲೆ ಭಾರೀ ಕುಸಿದಿದೆ. ಮತ್ತೂಂದಡೆ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ಕೊಯ್ಲಿಗೆ ಬಂದಿರುವ ದ್ರಾಕ್ಷಿ ಬೆಲೆ ಕೂಡ ಕುಸಿತಗೊಂಡು ಬೆಳೆಗಾರರು ಬೀದಿಗೆ ಬರುವಂತಾಗಿದೆ.

Advertisement

ಚಿಕ್ಕಬಳ್ಳಾಪುರ: ಉಭಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ತೋತಾಪುರಿ, ಮಲಗೋವಾ,ಬದಾಮಿ, ಸಿಂಧೂರ ಹಾಗೂ ನೀಲಂ ಮಾವುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ಬರೀ 7-8 ರೂ.ಗೆ ಮಾರಾಟವಾಗುತ್ತಿದೆ.

ಇದರಿಂದ ರೈತರು ಕಂಗಾಲಾಗಿದ್ದಾರೆ. ಸಾಧಾರಣವಾಗಿ ಮಾವು ಪ್ರತಿವರ್ಷ ಮೇ ತಿಂಗಳ ಆರಂಭಕ್ಕೆ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಕಳೆದ ವರ್ಷ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಅಕಾಲಿಕ ಮಳೆ ಬಿದ್ದ ಪರಿಣಾಮ ತೇವಾಂಶ ಹೆಚ್ಚಳವಾಗಿ ಮಾವಿನ ಮರಗಳಲ್ಲಿ ಹೂ, ಕಾಯಿ ಬಿಡುವುದು ತಡವಾಯಿತು.

ಇದರಿಂದಾಗಿ ಮೇ ತಿಂಗಳ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಬೇಕಿದ್ದ ಮಾವು, ಮೇ ಎರಡನೇ ವಾರದಲ್ಲಿ ಮಾರುಕಟ್ಟೆ ಬಂತು. ಸಾಮಾನ್ಯವಾಗಿ ಅವಳಿ ಜಿಲ್ಲೆಯ ಮಾವು ಜ್ಯೂಸ್‌ ತಯಾರಿಕೆಗೆ ಹೆಚ್ಚು ಬಳಸಲ್ಪಡುತ್ತದೆ.ಬೇಸಿಗೆ ಮುಗಿದು ಮಳೆಗಾಲ ಆರಂಭಗೊಳ್ಳುತ್ತಿರುವುದರ ಪರಿಣಾಮ ಜ್ಯೂಸ್‌ ಫ್ಯಾಕ್ಟರಿಗಳು ಮಾವು ಖರೀದಿಗೆ ನಿರಾಸಕ್ತಿ ತೋರುತ್ತಿವೆ.

ಮತ್ತೂಂದಡೆ ನೆರೆಯ ಆಂಧ್ರಪ್ರದೇಶದ ಚಿತ್ತೂರು ಹಾಗೂ ದೊಮಲಚೆರವು ಮತ್ತಿತರ ಕಡೆಗಳಿಂದ ವ್ಯಾಪಕ ಪ್ರಮಾಣದಲ್ಲಿ ಮಾವು ಬಂತು. ಇದರಿಂದ ಜಿಲ್ಲೆಯ ಮಾವಿಗೆ ಬೇಡಿಕೆ ಕಡಿಮೆಯಾಗಿ, ಬೆಲೆ ಕುಸಿದಿದೆ.

Advertisement

ಸಾಗಾಟ ವೆಚ್ಚ ಕೂಡಾ ಸಿಗುತ್ತಿಲ್ಲ: ಈ ಕುರಿತು ಮಾತನಾಡಿದ ಶಿಡ್ಲಘಟ್ಟ ಮಾವು ಬೆಳೆಗಾರ ರಾಮಚಂದ್ರಪ್ಪ, ಬದಾಮಿ, ಸಿಂಧೂರ ಹಾಗೂತೋತಾಪುರಿ ಬೆಳೆದಿರುವ ಮಾವು ಬೆಳೆಗಾರರಿಗೆ ತೋಟದಿಂದ ಮಾರುಕಟ್ಟೆಗೆ ತರುವ
ಸಾಗಾಟದ ವೆಚ್ಚ ಕೂಡ ಕೈ ಸೇರುತ್ತಿಲ್ಲ.

ಶಿಡ್ಲಘಟ್ಟದಿಂದ 1 ಟನ್‌ ಸಿಂಧೂರ ತಂದಿದ್ದೆವು. ಮಾರುಕಟ್ಟೆಯಲ್ಲಿ ಟನ್‌ಗೆ 7,000 ರಿಂದ 8,000 ರೂ.ಗೆ ಮಾರಾಟವಾಗಿದೆ. ಅಲ್ಲಿಂದ ಚಿಕ್ಕಬಳ್ಳಾಫ‌ುರ ಮಾರುಕಟ್ಟೆಗೆ ತರಬೇಕಾದರೆ ಟೆಂಪೋ ಬಾಡಿಗೆ 2,500 ರಿಂದ 3,000 ರೂ.ಕೇಳುತ್ತಾರೆ. ಮಾವು ಕೊಯ್ಲು ಮಾಡುವ ಕಾರ್ಮಿಕರಿಗೆ 1,000 ದಿಂದ 1,500 ಸಾವಿರ ರೂ, ಖರ್ಚು ಬರುತ್ತದೆ. ಕಳೆದ ವರ್ಷ ಸಿಂಧೂರ ಮಾವು ಮಂಡಿಗಳಲ್ಲಿ ಟನ್‌ 13,000 ರಿಂದ 15,000 ರೂ. ವರೆಗೂ ಮಾರಾಟವಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ವ್ಯಾಪಾರಸ್ಥರ ಕೈ ಕಚ್ಚಿದ ಬೆಲೆ ಕುಸಿತ: ಇನ್ನು, ಮಾವು ಬೆಳೆಗಾರರ ತೋಟದಿಂದಲೇ ನೇರವಾಗಿ ಮಾವು ಖರೀದಿಸಿ ಮಾರುಕಟ್ಟೆಗೆ ತರುತ್ತಿರುವ ಚಿಲ್ಲರೆ ವ್ಯಾಪಾರಸ್ಥರಿಗೂ ಸಹ ಬೆಲೆ ಕುಸಿತ ಕೈ ಕಚ್ಚುತ್ತಿದೆ. ಒಂದರೆಡು ತಿಂಗಳ ಮೊದಲೇ ಮುಂಗಡವಾಗಿ ಹಣ ಕೊಟ್ಟು ಖರೀದಿಸಿ, ತೋಟಗಳಿಂದ ಮಾವು ಕೊಯ್ಲು ಮಾಡಿಕೊಂಡು ಮಂಡಿಗಳಿಗೆ ತರುತ್ತಿರುವ
ವ್ಯಾಪಾರಸ್ಥರಿಗೆ ಬೆಲೆ ಕುಸಿತದ ಬರೆ ಬೀಳುತ್ತಿದೆ. ಹಾಕಿದ ಬಂಡವಾಳ ಕೈ ಸೇರದೇ ಅವರೂ ಕೂಡ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಸ್ಕರಣೆಗೆ ದಾರಿ ಇಲ್ಲದೆ ಮಂಡಿಗಳಲ್ಲಿ ಕೈಗೆ ಬಂದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಕೆಲವು ತಳಿಯ ಮಾವುಗಳ ಫ‌ಸಲಿಲ್ಲ: ಜಿಲ್ಲೆಯಲ್ಲಿ ಬದಾಮಿ, ತೋತಾಪುರಿ ನೀಲಂ ಹಾಗೂ ಸಿಂಧೂರ, ರಾಜಗಿರಿ ಬೆಲೆ ಕುಸಿತಗೊಂಡರೂ ಮಲ್ಲಿಕಾ, ಬೇನಿಷಾ, ಮಲಗೋವಾ, ರಸಪೂರಿ ಮಾವಿಗೆ ಉತ್ತಮ ಬೆಲೆ ಇದೆ. ಆದರೆ, ಮಳೆಯಿಂದ ಈ ಮಾವುಗಳ ಉತ್ಪಾದನೆ ಕಳೆದ ವರ್ಷಕ್ಕಿಂತ ಈ ಬಾರಿ ಜಿಲ್ಲೆಯಲ್ಲಿ ಸಾಕಷ್ಟು ಕುಸಿತಗೊಂಡಿದೆ.
ಬೇನಿಷಾ ಟನ್‌ಗೆ 20 ಸಾವಿರ ರೂ.ಇದ್ದರೆ,ಮಲಗೋವಾ ಟನ್‌ 20,000 ರಿಂದ 25,000 ರೂ.ಗಡಿ ದಾಟಿದೆ. ಮಲ್ಲಿಕಾ ಕೂಡ ಟನ್‌ ಗೆ 15,000 ರಿಂದ 16,00 ಸಾವಿರ ರೂ.ದೆ.ರಸಪೂರಿ ಟನ್‌ 12,000 ರಿಂದ 13,000
ಸಾವಿರ ರೂ.ವರೆಗೂ ಮಾರಾಟಗೊಳ್ಳುತ್ತಿದೆ.

ಆದರೆ, ಈ ಬಾರಿ ಫ‌ಸಲು ಕುಸಿತಗೊಂಡಿರುವುದರಿಂದ ಬೆಲೆ ಇರುವ ಮಾವು ಮಾರುಕಟ್ಟೆಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಬದಾಮಿ ಟನ್‌ಗೆ 6,000 ರಿಂದ 7,000 ರೂ., ಸಿಂಧೂರ ಟನ್‌ 8,000 ರಿಂದ 9000 ಸಾವಿರ ರೂ.ವರೆಗೂ ಮಾರಾಟಗೊಳ್ಳುತ್ತಿದೆ. ತೋತಾಪುರಿ ಮಾವು ಟನ್‌ಗೆ ಬರೀ 7,000 ರಿಂದ 8,000 ರೂ.

ಮಾವು ಕೊಯ್ಲಿಗೆ ಮಳೆ ಅಡ್ಡಿ: ಒಂದಡೆ ಬೆಲೆ ಕುಸಿತದಿಂದ ಕಂಗಾಲಾಗಿರುವ ಜಿಲ್ಲೆಯ ಮಾವು ಬೆಳೆಗಾರರಿಗೆ ಮತ್ತೂಂದಡೆ ಜಿಲ್ಲಾದ್ಯಂತ ಸುರಿಯುತ್ತಿರುವ ವರ್ಷಾಧಾರೆ ಮಾವು ಕೊಯ್ಲಿಗೆ ತೀವ್ರ ಅಡ್ಡಿಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸಿದರೂ ಮಾವು ಕೊಯ್ಲು ಸಾಧ್ಯವಾಗುತ್ತಿಲ್ಲ. ಇದರಿಂದ ಅರ್ಧಕ್ಕೆ ಅರ್ಧ ಮಾವು ತೋಟಗಳಲ್ಲಿ ಇದೆ. ಮಳೆ ಇನ್ನಷ್ಟು ತೀವ್ರಗೊಂಡರೆ ಬಿರುಗಾಳಿ ಜತೆಗೆ ತೇವಾಂಶ ಹೆಚ್ಚಾಗಿ ಮಾವು ಮರಗಳಲ್ಲಿಯೆ ಕೊಳೆಯುವ ಅತಂಕ ಬೆಳೆಗಾರರನ್ನು ಕಾಡುತ್ತಿದೆ.

ಮಾವು ಮಂಡಿಗಳಲ್ಲಿ ರಸಪೂರಿ, ಮಲ್ಲಿಕಾ, ಬೇನಿಷಾ ಮಾವುಗೆ ಉತ್ತಮ ಬೆಲೆ ಇರುವುದು ಬಿಟ್ಟರೆ ತೋತಾಪುರಿ, ಮಲಗೋವಾ, ಬದಾಮಿ, ಸಿಂಧೂರ ಹಾಗೂ ನೀಲಂಗಳಿಗೆ ಬೆಲೆ ಇಲ್ಲ. ರೈತರಿಗೆ ಸಾಗಾಟದ ವೆಚ್ಚ ಕೂಡ ಬರುತ್ತಿಲ್ಲ. ಈ ವರ್ಷ ತಿಂಗಳು ತಡವಾಗಿ ಮಾವಿನ ಫ‌ಸಲು ಬಂದಿದ್ದರಿಂದ ಮಾವು ಬೆಲೆ ಕುಸಿತಕ್ಕೆ ಕಾರಣವಾಗಿದೆ.
– ಕೆ.ಶ್ರೀನಿವಾಸಗೌಡ, ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ

ಬೆಂಗಳೂರಿನ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಮಾವು ಬೆಲೆ ಇಳಿದಿಲ್ಲ. ಮಾವು ಮೇಳಕ್ಕೆ ಉತ್ತಮ ಸ್ಪಂದನೆ
ದೊರೆಯುತ್ತಿದ್ದು ಯಥಾಸ್ಥಿತಿ ಮಾರಾಟ ಆಗುತ್ತಿದೆ. ಬೆಲೆ ಇಳಿದಿದೆ ಎಂದು ರಾಮನಗರ, ಶ್ರೀನಿವಾಸಪುರದಲ್ಲಿ
ರೈತರು ಮಾವು ರಸ್ತೆಗೆ ಸುರಿದಿದ್ದಾರೆ ಎಂಬ ಸುದ್ದಿ ಬಂದಿದೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಮಾಹಿತಿ
ಪಡೆಯಲಾಗುವುದು.
– ಚಂದ್ರೇಗೌಡ, ಹಾಪ್‌ಕಾಮ್ಸ್‌ ಅಧ್ಯಕ್ಷ

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next