ರಾಯಚೂರು: ಹಣ್ಣಿನ ರಾಜ ಎಂದೇ ಕರೆಸಿಕೊಳ್ಳುವ ಮಾವಿಗೂ ಈ ಬಾರಿ ಬರದ ಬರೆ ಜೋರಾಗಿಯೇ ಬಿದ್ದಿದೆ. ಸತತ ಬರದಿಂದ ಇಳುವರಿಯಲ್ಲಿ ಭಾರೀ ಕುಸಿತ ಕಂಡಿದ್ದು, ಹಣ್ಣಿನ ದರ ದುಪ್ಪಟ್ಟಾಗಿದೆ.
ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಈ ಬಾರಿ ಮಾರುಕಟ್ಟೆಗೆ ಬಂದ ಸ್ಥಳೀಯ ಮಾವಿನ ಹಣ್ಣಿನ ಪ್ರಮಾಣ ಕೇವಲ ಶೇ.25ರಷ್ಟು ಮಾತ್ರ. ಅಂದರೆ ಬರದ ಹೊಡೆತಕ್ಕೆ ಶೇ.75ರಷ್ಟು ಮಾವು ಇಳುವರಿ ಕೈಕೊಟ್ಟಿದೆ. ಇದರಿಂದ ಮಾರುಕಟ್ಟೆಗೆ ಮಹಾರಾಷ್ಟ್ರ, ಆಂಧ್ರಪ್ರದೇಶದಿಂದ ಅಧಿಕ ಪ್ರಮಾಣದಲ್ಲಿ ಮಾವು ಆಮದು ಆಗುತ್ತಿದ್ದು, ವರ್ತಕರು ದರದಲ್ಲಿ ರಾಜಿಯಾಗುತ್ತಿಲ್ಲ.
ಸಾಮಾನ್ಯವಾಗಿ ಜಿಲ್ಲೆಯಲ್ಲಿ 1800-2000 ಎಕರೆ ಪ್ರದೇಶದಲ್ಲಿ ಮಾವು ಬೆಳೆಯುವ ರೈತರಿದ್ದಾರೆ. ಎಕರೆಗೆ ಕನಿಷ್ಠ 10 ಟನ್‌ನಿಂದ ನಿಂದ 15 ಟನ್‌ವರೆಗೆ ಇಳುವರಿ ತೆಗೆಯಬಹುದು. ಆದರೆ, ಈ ಬಾರಿ ಕೇವಲ ಮೂರರಿಂದ ನಾಲ್ಕು ಟನ್ ಮಾತ್ರ ಇಳುವರಿ ಬಂದಿದೆ. ಅದು ಕೂಡ ಉತ್ತಮ ಫಸಲು ಎನ್ನುವಂತಿಲ್ಲ. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಹೂ ಬಿಡುವ ಹೊತ್ತಿನಲ್ಲಿ ಮಾವಿನ ಗಿಡಗಳಿಗೆ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಒಂದು ವೇಳೆ ಸಮರ್ಪಕ ನೀರು ಸಿಗದಿದ್ದರೆ ಕಾಯಿ ಕಟ್ಟದೇ ಹೂಗಳೆಲ್ಲ ಉದುರಿ ಹೋಗುತ್ತದೆ. ಇದರಿಂದ ಇಳುವರಿ ಕುಂಠಿತಗೊಂಡಿದೆ.
ಸತತ ಬರ: ಕಳೆದ ಎರಡು ವರ್ಷಗಳ ಸತತ ಬರ ಮಾವು ಇಳುವರಿಯನ್ನು ನೆಲಕಚ್ಚುವಂತೆ ಮಾಡಿದೆ. ಜಿಲ್ಲೆಯ ಬಹುತೇಕ ರೈತರು ಮಾವು ಬೆಳೆಗೆ ಬೋರ್‌ವೆಲ್ ನೀರನ್ನೇ ನೆಚ್ಚಿದ್ದಾರೆ. ಕೆಲ ರೈತರು ಮಳೆ ನೀರು ನಂಬಿಕೊಂಡಿದ್ದಾರೆ. ಕಳೆದ ವರ್ಷ ಎದುರಾದ ಬರದಿಂದ ಮಳೆಯಾಶ್ರಿತ ರೈತರು ಮಾತ್ರ ಸಂಕಷ್ಟಕ್ಕೆ ತುತ್ತಾಗಿದ್ದರು. ಆದರೆ, ಈ ಬಾರಿ ಭೀಕರ ಬರ ಎದುರಾಗಿ ಅಂತರ್ಜಲವೂ ಕುಸಿತ ಕಂಡಿದೆ. ಇದರಿಂದ ಮಾವು ಬೆಳೆಗೆ ಅಗತ್ಯದಷ್ಟು ನೀರು ಸಿಗುತ್ತಿಲ್ಲ.
ದರ ಹೆಚ್ಚಳ: ಜಿಲ್ಲೆಯಲ್ಲಿ ಶೇ.90ಕ್ಕೂ ಹೆಚ್ಚು ರೈತರು ಬೆನ್‌ಶ್ಯಾನ್ ತಳಿಯ ಮಾವುಗಳನ್ನೇ ಬೆಳೆಯುತ್ತಾರೆ. ಇಲ್ಲಿನ ವಾತಾವರಣಕ್ಕೆ ಅದು ಹೆಚ್ಚು ಸೂಕ್ತವಾಗಿದೆ. ಅದು ಬಿಟ್ಟರೆ ಅಲ್ಲಲ್ಲಿ ಬ್ಲೆಸರಿ ತಳಿಯ ಮಾವು ಬೆಳೆಯಲಾಗುತ್ತದೆ. ಆದರೆ, ಈಗ ಇಳುವರಿಯೇ ಇಲ್ಲದ ಕಾರಣ ವ್ಯಾಪಾರಿಗಳು ಬೇರೆ ರಾಜ್ಯಗಳಿಂದ ಹಣ್ಣು ಆಮದು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬೆಲೆಯೂ ಹೆಚ್ಚಾಗಿದೆ. ಕಳೆದ ವರ್ಷ 30 ರೂಪಾಯಿಗೆ ಕೆಜಿ ಇದ್ದ ಮಾವು ಈ ಬಾರಿ 50-60 ರೂ.ಗಿಂತ ಕಡಿಮೆ ಹೇಳುತ್ತಿಲ್ಲ. ಇವುಗಳ ಜತೆಗೆ ಮಲಗೋಬಾ, ತೋತಾಪುರಿ, ರಸಪುರಿ, ಸಿಂಧೂರಿ ಸೇರಿ ವಿವಿಧ ತಳಿಯ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಯಾವುದೇ ಹಣ್ಣುಗಳು ಬಡವರ ಕೈಗೆಟುಕುವ ದರದಲ್ಲಿ ಸಿಗುತ್ತಿಲ್ಲ. ಬೇಸಿಗೆಯಲ್ಲಿ ರುಚಿ ನೀಡುತ್ತಿದ್ದ ಮಾವು ಮಾರುಕಟ್ಟೆ ನಲುಗಿ ಹೋಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮಾವು ಬೆಳೆಗಾರರು ಮಾವು ಬೆಳೆಯಿಂದ ವಿಮುಖರಾಗುವ ಸಾಧ್ಯತೆಗಳೇ ಹೆಚ್ಚು.
•ಸಿದ್ಧಯ್ಯಸ್ವಾಮಿ ಕುಕನೂರು