ಅಂಕೋಲಾ: ಉತ್ತರ ಕನ್ನಡದ ಅಂಕೋಲಾಕ್ಕೂ ಸಿಕ್ಕಿಂ ರಾಜ್ಯಕ್ಕೂ ಸಾವಿರಾರು ಕಿಮೀ ದೂರ. ಆದರೆ ಕರಿಈಸಾಡು ಮಾವು ದೂರದ ಸಿಕ್ಕಿಂಗೂ ಅಂಕೋಲಾಗೂ ಸಂಪರ್ಕ ಸೇತುವೆಯಾಗಿದೆ. ಕರಿಈಸಾಡಿನ ಘಮ ಸಿಕ್ಕಿಂವರೆಗೂ ಹೋಗಿದೆ.
ಮೊದಲಿನಿಂದಲೂ ಅಂಕೋಲಾದ ಕರಿಈಸಾಡು ಪ್ರಸಿದ್ಧಿಯಾಗಿದ್ದು, ಜಿಲ್ಲೆಯ ಬೇರೆ ಬೇರೆ ಭಾಗದಿಂದ ಹಾಗೂ ಹೊರ ಜಿಲ್ಲೆಗಳಿಂದ ಬಂದು ಕೊಂಡೊಯ್ಯುವುದು ಸಹಜ. ಜತೆಗೆ ಕಳೆದ ಮೇ 21 ಮತ್ತು 22 ರಂದು ಅಂಕೋಲಾ ಬೆಳೆಗಾರರ ಸಮಿತಿಯಿಂದ ಮಾವಿನ ಮೇಳವನ್ನು ಆಯೋಜಿಸಿದ್ದರು. ಇದು ಮತ್ತಷ್ಟು ಪ್ರಚಾರ ನೀಡಿದೆ.
ಮೇಳದಲ್ಲಿ ಅಪಾರ ಪ್ರಮಾಣದಲ್ಲಿ ಮಾವು ವ್ಯಾಪಾರವಾಗಿ ರೈತರಿಗೆ ಮತ್ತು ಗ್ರಾಹಕರಿಗೆ ಸಂತೋಷವಾಗಿತ್ತು. ಮಾವು ಮೇಳದ ನಂತರ ಅನೇಕ ರೈತರಿಗೆ ಮಾವು ಪ್ರಿಯರು ಸಂಪರ್ಕಿಸಿ ಬೆಳೆಗಾರರ ಮನೆಗೆ ಬಂದು ಮಾವನ್ನು ಕೊಂಡೊಯ್ಯುತ್ತಿದ್ದಾರೆ. ಮುಂದಿನ ವರ್ಷವೂ ಬರುತ್ತೇವೆ, ನಮಗೆ ಮಾವು ಕಾದಿಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಈ ಮಾವಿನ ಮೇಳ ದೂರದ ಸಿಕ್ಕಿಂವರೆಗೂ ಕರಿಈಸಾಡುವಿನ ಘಮ ಪಸರಿಸಿದೆ. ಸಿಕ್ಕಿಂ ರಾಜ್ಯದ ಮಾವಿಗೆ ದೂರದ ಗ್ಯಾ೦ಗಟಕನಿಂದ ಬೇಡಿಕೆ ಬಂದಿದ್ದು. ಮಾವು ಮೇಳದಲ್ಲಿ ಭಾಗವಹಿಸಿದ ಬೆಂಗಳೂರಿನ ಡಾ. ನಂದಿನಿ ಡಿ. ಎನ್ನುವವರು ಇನ್ಸ್ಟಾಗ್ರಾಮದಲ್ಲಿ ಅಂಕೋಲೆಯ ಈಶಾಡ ಮಾವಿನ ಬಗ್ಗೆ ಬರೆದಿದ್ದರು. ಇದನ್ನು ನೋಡಿದ ಸಿಕ್ಕಿಂ ರಾಜ್ಯದ ಗ್ಯಾ೦ಗಟಕ ನಿವಾಸಿ ಪ್ರೊ. ಬಿನು ಥೋಮಸ್ ಎನ್ನುವವರು ಬೆಳ೦ಬಾರದ ಮಹಾದೇವ ಗೌಡರನ್ನು ಸಂಪರ್ಕಿಸಿ ಈಶಾಡ ಮಾವಿನ ಹಣ್ಣು ತಮಗೆ ಕಳಿಸುವಂತೆ ಕೇಳಿಕೊಂಡಿದ್ದಾರೆ. ತಕ್ಷಣವೇ ಸ್ಪಂದಿಸಿದ ಮಹಾದೇವ ಗೌಡ ಸಿಕ್ಕಿಂಗೆ ಪೋಸ್ಟ್ ಮುಖಾ೦ತರ ಈಷಾಡ ಮಾವಿನ ಕಾಯಿ ಕಳುಹಿಸಿದ್ದಾರೆ.
ಮಹಾದೇವ ಅವರು ಕಳಿಸಿದ ಮಾವು ಸಿಕ್ಕಿಂಗೆ ತಲುಪಲು ಕನಿಷ್ಠ 6 ದಿನ ಹಿಡಿಯಲಿದ್ದು, ಅಲ್ಲಿಯವರೆಗೆ ಅದು ಹಣ್ಣಾಗುತ್ತದೆ. ಅಂಕೋಲಾ ಬೆಳೆಗಾರರ ಸಮಿತಿಯವರ ಶ್ರಮ ಸಾರ್ಥಕವಾಗಿದೆ. ಈ ಮಾವು ಹಾಗೂ ಮೇಳ ಉತ್ತರ ಕನ್ನಡದ ಅಂಕೋಲಾ ಮತ್ತು ದೂರದ ಸಿಕ್ಕಿಂ ನಡುವೆ ನಂಟು ಬೆಳೆಸಿದೆ.