ಬೆಂಗಳೂರು: ನಗರದ ಹಾಪ್‌ಕಾಮ್ಸ್ ಮಳಿಗೆಗಳಲ್ಲೀಗ ಮಾವು, ಹಸಿನ ಘಮಲು ಶುರುವಾಗಿದೆ. ರಸಪುರಿ, ದಸೇರಿ, ಮಲಗೋವ, ತೋತಾಪುರಿ ಸೇರಿದಂತೆ ಸುಮಾರು ಹದಿನೈದು ಜಾತಿಯ ಬಣ್ಣ ಬಣ್ಣದ ಮಾವಿನ ಹಣ್ಣುಗಳು ಒಂದೇ ಕಡೆ ಸಿಗಲಿದ್ದು, ಮಾವು ಪ್ರಿಯರು ಹಣ್ಣು ಸವಿದು ಬಾಯಿ ಚಪ್ಪರಿಸಬಹುದಾಗಿದೆ. ಜತೆಗೆ ಹಲಸಿನ ಹಣ್ಣನ್ನೂ ಸವಿಯಬಹುದಾಗಿದೆ.
ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಮ್ಸ್) ವತಿಯಿಂದ ಆಯೋಜಿಸಿರುವ ರಿಯಾಯ್ತಿ ದರದ ಮಾವು ಮತ್ತು ಹಲಸು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಹಡ್ಸನ್ ವೃತ್ತದ ಹಾಪ್‌ಕಾಮ್ಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಚಾಲನೆ ನೀಡಿದರು.
ಒಂದುವರೆ ತಿಂಗಳ ಕಾಲ ಮೇಳ ನಡೆಯಲಿದ್ದು, ನಗರದ ಸುಮಾರು 300 ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಶೇ.10ರ ರಿಯಾಯ್ತಿ ದರದಲ್ಲಿ ಮಾವು ಮತ್ತು ಹಲಸಿನ ಹಣ್ಣುಗಳ ಮಾರಾಟ ನಡೆಯಲಿದೆ. ಈ ವೇಳೆ ಮಾತನಾಡಿದ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ದಳ್ಳಾಳಿಗಳನ್ನು ದೂರವಿಟ್ಟು ಹಾಪ್‌ಕಾಮ್ಸ್, ರೈತರಿಂದ ನೇರವಾಗಿ ಹಣ್ಣು, ತರಕಾರಿ ಖರೀದಿಸುತ್ತದೆ. ರೈತರ ಹಿತಕಾಯುವ ಕಾರ್ಯ ಹೀಗೇ ಮುಂದುವರಿಸಲಿ ಎಂದರು.
ಕಡಿಮೆ ಬೆಲೆಗೆ ನೀಡಿ: ತರಕಾರಿ ಸೇರಿದಂತೆ ಇನ್ನಿತರ ಪದಾರ್ಥಗಳ ಬೆಲೆ ಹಾಪ್‌ಕಾಮ್ಸ್‌ನಲ್ಲಿ ಮಾರುಕಟ್ಟೆಗಿಂತಲೂ ಅಧಿಕವಾಗಿದೆ. ಇದನ್ನು ಮತ್ತಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ಆಲೋಚಿಸಬೇಕಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಪ್ರತಿದಿನ ತರಕಾರಿ ದರಪಟ್ಟಿಯನ್ನು ಹಾಕಬೇಕು. ಹೀಗೆ ಮಾಡಿದರೆ ಹಾಪ್‌ಕಾಮ್ಸ್ ಮತ್ತಷ್ಟು ಜನ ಸ್ನೇಹಿಯಾಗಿ ಬೆಳೆಯಬಹುದು ಎಂದರು. ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಇದ್ದರು.
ಸಾವಿರ ಮೆಟ್ರಿಕ್ ಟನ್ ಗುರಿ: ನಿಫಾ ವೈರಸ್ ಜನರಲ್ಲಿ ಆತಂಕ ಹುಟ್ಟುಹಾಕಿದ ಹಿನ್ನೆಲೆಯಲ್ಲಿ ಕಳೆದ ಬಾರಿ ಅಂದುಕೊಂಡಷ್ಟು ವಹಿವಾಟು ನಡೆದಿರಲಿಲ್ಲ. ಆದರೂ, 750 ಮೆ.ಟನ್ ಮಾವು ಮತ್ತು 150 ಮೆ.ಟನ್ ಹಲಸಿನ ಹಣ್ಣು ಮಾರಾಟವಾಗಿತ್ತು. ಈ ಬಾರಿ ಒಂದು ಸಾವಿರ ಮೆ.ಟನ್ ಮಾವು ಮತ್ತು 200 ಮೆ.ಟನ್ ಹಲಸಿನ ಹಣ್ಣಿನ ಮಾರಾಟದ ಗುರಿ ಹೊಂದಲಾಗಿದೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ಹೇಳಿದರು.
ಮಾವಿನ ತಳಿಗಳು ದರ (ಕೆ.ಜಿ.ಗೆ)
ತೋತಾಪುರಿ 28
ನಾಟಿ 35
ಕಾಲಪಾಡು 80
ಸೆಂದೂರ 48
ಬೈಗಾನ್‌ಪಲ್ಲಿ 65
ರಸಪುರಿ 65
ಬಾದಾಮಿ 80
ದಸೇರಿ 85
ಮಲ್ಲಿಕಾ 80
ಮಲಗೋವ 120
ಸಕ್ಕರೆಗುತ್ತಿ 80
ಅಮರ್‌ಪಲ್ಲಿ 80
ಕೇಸರ 75
ಹಲಸಿನ ಹಣ್ಣು 20
ಈ ಬಾರಿ ಮಾವಿನ ಫಸಲು ಕಡಿಮೆ. ಆದರೂ, ಹಣ್ಣುಗಳ ಬೆಲೆ ಏರಿಕೆಯಾಗಿಲ್ಲ. ಗ್ರಾಹಕರಿಗೆ ರಾಸಾಯನಿಕ ಮುಕ್ತ, ರುಚಿಕರ ಹಣ್ಣುಗಳನ್ನು ನೀಡುವುದು ಹಾಪ್‌ಕಾಮ್ಸ್‌ನ ಆದ್ಯತೆಯಾಗಿದೆ.
-ಎ.ಎಸ್.ಚಂದ್ರೇಗೌಡ, ಹಾಪ್‌ಕಾಮ್ಸ್ ಅಧ್ಯಕ್ಷ