ಬೆಂಗಳೂರು: ಹಣ್ಣುಗಳ ರಾಜ ಮಾವಿನ ಹಣ್ಣಿನ ಎಷ್ಟು ಪ್ರಕಾರಗಳು ನಿಮಗೆ ಗೊತ್ತು? ಐದು ಅಬ್ಬಬ್ಟಾ ಎಂದರೆ ಹತ್ತು. ಆದರೆ, ನಗರದಲ್ಲಿ 550 ಮಾವಿನ ತಳಿಗಳ ದರ್ಶನ ನಿಮಗೆ ಸಿಗಲಿದೆ. ಅಷ್ಟೇ ಅಲ್ಲ, ಅದನ್ನು ಸವಿಯುವ ಅವಕಾಶವೂ ನಿಮ್ಮದಾಗಲಿದೆ. ಪ್ರತಿಷ್ಠಿತ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಈ ಅವಕಾಶ ಕಲ್ಪಿಸುತ್ತಿದೆ.
ಹಾಗೇ, ಸುಮಾರು 80 ಪ್ರಕಾರದ ಹಲಸಿನ ಹಣ್ಣುಗಳನ್ನೂ ಬೆಂಗಳೂರಿಗರು ನೋಡಿ, ಸವಿಯಬಹುದು. ನಗರದ ಹೊರವಲಯ ಮತ್ತು ಹೃದಯಭಾಗ ಎರಡೂ ಕಡೆಗಳಲ್ಲಿ ಪ್ರತ್ಯೇಕವಾಗಿ ಎರಡೆರಡು ದಿನಗಳ ಕಾಲ ಐಐಎಚ್ಆರ್ ಈ ಬಾರಿ ಮಾವು ಮತ್ತು ಹಲಸಿನ ವೈವಿಧ್ಯತಾ ಮೇಳ ಹಮ್ಮಿಕೊಂಡಿದೆ. ಮೇ 28 ಮತ್ತು 29ರಂದು ಹೆಸರಘಟ್ಟದಲ್ಲಿರುವ ಐಐಎಚ್ಆರ್ ಆವರಣದಲ್ಲಿ ಹಾಗೂ ಜೂನ್ 1 ಮತ್ತು 2ರಂದು ಚಿತ್ರಕಲಾ ಪರಿಷತ್‌ನಲ್ಲಿ ಮೇಳ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್. ದಿನೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಮೊದಲು ಐಐಎಚ್ಆರ್ ಆವರಣದಲ್ಲಿ ಮಾತ್ರ ಮೇಳ ನಡೆಯುತ್ತಿತ್ತು. ಆದರೆ, ನಗರವಾಸಿಗಳಿಗೆ ಮಾವು ಮತ್ತು ಹಲಸಿನ ವೈವಿಧ್ಯತೆಯನ್ನು ಪರಿಚಯಿಸಲು ಇದೇ ಮೊದಲ ಬಾರಿಗೆ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದೆ. ಐಐಎಚ್ಆರ್‌ನಲ್ಲಿ ಸುಮಾರು 728 ಪ್ರಕಾರದ ಮಾವಿನ ತಳಿಗಳು ಮತ್ತು 170 ಹಲಸಿನ ತಳಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳ ಡಿಎನ್‌ಎ, ಎಲ್ಲಿಂದ ತೆಗೆದುಕೊಂಡು ಬರಲಾಗಿದೆ ಎಂಬುದನ್ನು ತಿಳಿಸುವ ಪಾಸ್‌ಪೋರ್ಟ್ ಡಾಟಾ ಸೇರಿದಂತೆ ಪ್ರತಿ ತಳಿಯ ವೈಜ್ಞಾನಿಕ ವಿವರ ಸಹಿತ ಪ್ರದರ್ಶನಕ್ಕಿಡಲಾಗುವುದು. ಆಯ್ದ ರೈತರು ಕೂಡ ಮಾವು ಮತ್ತು ಹಲಸಿನ ಪ್ರದರ್ಶನದಲ್ಲಿ ಮಳಿಗೆಗಳನ್ನು ಹಾಕಲಿದ್ದು, ಮಾರಾಟಕ್ಕೂ ಲಭ್ಯ ಇರಲಿದೆ ಎಂದು ವಿವರಿಸಿದರು.
10 ಸಾವಿರ ಜನರ ನಿರೀಕ್ಷೆ: ಈಗಾಗಲೇ ನಗರದಲ್ಲಿ ನಡೆಯುತ್ತಿರುವ ಮೇಳಗಳಿಗೂ ಐಐಎಚ್ಆರ್ ಹಮ್ಮಿಕೊಂಡ ಮೇಳಕ್ಕೂ ಸಾಕಷ್ಟು ವ್ಯತ್ಯಾಸ ಇದ್ದು, ಇದು ಸಂಶೋಧನಾ ಆಧಾರಿತ ಮೇಳವಾಗಿದೆ. ಇಲ್ಲಿ ಈ ಎರಡೂ ಹಣ್ಣುಗಳ ವೈವಿಧ್ಯತೆಯ ಪರಿಚಯ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಾ.ದಿನೇಶ್, ಮೇಳದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ರಾಜೇಂದ್ರ ಪ್ರಸಾದ್, ಕೃಷಿ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸುಮಾರು 10 ಸಾವಿರ ಜನ ಭೇಟಿ ನೀಡುವ ನಿರೀಕ್ಷೆ ಇದೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ, 27 ಮತ್ತು 28ರಂದು ‘ಮಾವು ಮತ್ತು ಹಲಸಿನ ಬೆಳೆಗಳಲ್ಲಿ ಉದ್ದಿಮೆ ಅವಕಾಶಗಳು’ ಕುರಿತು ತರಬೇತಿ ಕಾರ್ಯಾಗಾರ ಕೂಡ ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾರ್ಯಾಗಾರಕ್ಕೆ ಆಸಕ್ತರು ಮುಂಚಿತವಾಗಿ ಹೆಸರು ನೋಂದಂಣಿ ಮಾಡಬೇಕು. ಮಾಹಿತಿಗೆ ಮೊ: 77608 35475 ಸಂಪರ್ಕಿಸಬಹುದು.