Advertisement

ಮಾವು ದುಬಾರಿ: ಖರೀದಿಗೆ ಮುಂದಾಗದ ಗ್ರಾಹಕ

02:39 PM Jul 16, 2019 | Suhan S |

ತುಮಕೂರು: ಹಣ್ಣುಗಳ ರಾಜ ಮಾವಿನ ಹಣ್ಣಿಗೆ ಈ ಬಾರಿ ನಿರೀಕ್ಷೆಯಷ್ಟು ಬೇಡಿಕೆ ಮಾರುಕಟ್ಟೆಯಲ್ಲಿ ಇನ್ನೂ ಬಂದಿಲ್ಲ. ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ಕೆಲವು ಕಡೆ ಮಾವಿನಕಾಯಿ ಉದುರಿದ ಪರಿಣಾಮ ಇಳುವರಿ ಕಡಿಮೆಯಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬಂದಿರುವ ಮಾವಿಗೆ ಈ ಹಿಂದಿನ ವರ್ಷಗಳಿಗಿಂತ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಮನೆಗಳಿಗೆ ಸಾಕಾಗುವಷ್ಟು ಮಾವಿನ ಹಣ್ಣು ಕೊಂಡೊಯ್ಯುತ್ತಿದ್ದ ಜನ ಈಗ ಸ್ವಲ್ಪ ಬೆಲೆ ದುಬಾರಿಯಾಗಿರುವುದರಿಂದ ಹೆಚ್ಚು ಕೊಳ್ಳಲು ಹಿಂದೆ ಮುಂದೆ ನೋಡುವಂತಾಗಿದೆ.

ಬೇಸಿಗೆ ಬಂದರೆ ತಂಪು ಪಾನೀಯಗಳು, ಎಳನೀರು, ಐಸ್‌ಕ್ರೀಮ್‌ ಪಾಲರ್‌ರ್ಗಳಲ್ಲಿ ವ್ಯಾಪಾರ ಜೋರು ಜೋರಾಗಿ ನಡೆಯುತ್ತಿದೆ. ಹಾಗೆಯೇ, ಹಣ್ಣುಗಳಿಗೂ ಬೇಡಿಕೆ ಇದ್ದೇ ಇರುತ್ತದೆ. ಆದರೆ, ಈ ಬಾರಿ ಎಲ್ಲಾ ಬೆಲೆ ಏರಿಕೆ ಯಾಗಿರುವುದರಿಂದ ಹಣ್ಣುಗಳ ಬೆಲೆಯೂ ದುಬಾರಿಯಾಗಿದ್ದು, ಜನಸಾಮಾನ್ಯರು ಹೆಚ್ಚು ಉಪಯೋಗಿಸುವ ಮಾವಿನ ಹಣನ ಬೆಲೆಯೂ ತೀವ್ರಗೊಂಡಿದೆ.

ದುಬಾರಿ ಬೆಲೆ, ಕೊಳ್ಳಲು ಹಿಂದೇಟು: ನಗರದ ಬಹುತೇಕ ಅಂಗಡಿಗಳಲ್ಲಿ ಮಾವಿನ ಹಣ್ಣುಗಳು ಇನ್ನೂ ಅಷ್ಟಾಗಿ ಕಂಡು ಬರದಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವಿನ ಮಾರಾಟದ ಭರಾಟೆ ಅಷ್ಟೊಂದು ಜೋರಾಗಿ ನಡೆಯುತ್ತಿಲ್ಲ.

ಈ ವರ್ಷ ಅಕಾಲಿಕ ಮಳೆ ಬಂದ ಹಿನ್ನೆಲೆಯಲ್ಲಿ ಮಾವಿನ ಫ‌ಸಲಿನಲ್ಲಿ ವ್ಯತ್ಯಯ ಉಂಟಾಗಿ ನಿರೀಕ್ಷಿಸಿದ ಮಟ್ಟಿಗೆ ಮಾವಿನ ಹಣ್ಣು ಇನ್ನೂ ಹೇರಳವಾಗಿ ಬರದ ಕಾರಣ ಹಿಂದಿನಷ್ಟು ಮಾವಿನ ಭರಾಟೆ ಇಲ್ಲ. ಆದರೂ, ಇರುವ ಮಾವಿನ ಹಣ್ಣುಗಳಲ್ಲಿ ಸಾಮಾನ್ಯ ಜನರು ಕೊಳ್ಳಲಾರದಷ್ಟು ದುಬಾರಿಯಾಗಿದೆ.

Advertisement

ಬಗೆ ಬಗೆಯ ಮಾವಿನ ಹಣ್ಣು: ಮೇ ತಿಂಗಳ ಹೊತ್ತಿಗೆ ಜಿಲ್ಲೆಯ ಎಲ್ಲಾ ಕಡೆ ಮಾವಿನ ಮಾರಾಟ ವ್ಯಾಪಕವಾಗಿ ನಡೆಯುತ್ತಿತ್ತು.

ಮಾರುಕಟ್ಟೆಗಳಲ್ಲಿ, ಹಣ್ಣಿನ ಅಂಗಡಿಗಳಲ್ಲಿ ಕಾಣಿಸುತ್ತಿದ್ದ ವ್ಯಾಪಾರದ ರಂಗು ಈಗ ಇನ್ನೂ ಅಷ್ಟಾಗಿ ಕಂಡು ಬಂದಿಲ್ಲ. ನಗರದ ಕೆಲವೇ ಅಂಗಡಿಗಳಲ್ಲಿ, ತಳ್ಳುವ ಗಾಡಿಗಳಲ್ಲಿ ಹಾಗೂ ತಲೆ ಮೇಲೆ ಬುಟ್ಟಿ ಹೊತ್ತು ಮಾರಾಟ ಮಾಡುವುದು ಮಾತ್ರ ಕಂಡುಬರುತ್ತಿದೆ. ಅದರಲ್ಲೂ ಬಾಯಿಗೆ ರುಚಿ ನೀಡುವ ರಸಪುರಿ, ಮಲಗೂಬ, ಬಾದಾಮಿ, ತೋತಾಪುರಿ ಸೇರಿದಂತೆ ಹಲವಾರು ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಕಾಲಿಡುತ್ತಿವೆ.

ಮಾವು ಇಳುವರಿ ಕ್ಷೀಣ: ಕಳೆದ ವರ್ಷ ನಗರಕ್ಕೆ ಹಲವಾರು ಕಡೆಗಳಿಂದ ಅಪಾರ ಪ್ರಮಾಣದ ಮಾವು ಬಂದ ಹಿನ್ನೆಲೆಯಲ್ಲಿ ಎಲ್ಲೆಡೆಯೂ ಮಾವು ಹೇರಳವಾಗಿ ಸಿಗುತ್ತಿತ್ತು. ಆದರೆ, ಈ ಬಾರಿ ಮಾವು ಹೆಚ್ಚಾಗಿ ಬಾರದ ಕಾರಣ ಮಾವಿನ ಬೆಲೆ ದುಬಾರಿಯಾಗಿದೆ.

ಮಾವಿನ ಹಣ್ಣಿಗೆ ಹುಡುಕಾಟ: ನಗರಕ್ಕೆ ಬಂದಿರುವ ಮಾವು ಇನ್ನೂ ಮಾಗದೆ ಕಾಯಿಗಳಾಗಿಯೇ ಕಂಡು ಬರುತ್ತಿದ್ದು, ಈ ಹಣ್ಣುಗಳನ್ನು ಕಾರ್ಬನ್‌ನಿಂದ ಹಣ್ಣು ಮಾಡಿ ಮಾರಾಟ ಮಾಡುವುದರಿಂದ ಪ್ರಾಕೃತಿಕವಾಗಿ ಸಿಗುವ ಹಣ್ಣಿನ ರುಚಿ ಇಲ್ಲದಂತಾಗಿದೆ.

ಆದ್ದರಿಂದ, ಕೆಲವರು ಪ್ರಾಕೃತಿಕವಾಗಿ ಹಣ್ಣಾಗಿರುವ ಮಾವಿನ ಹಣ್ಣುಗಳನ್ನು ಹುಡುಕಿಕೊಂಡು ನಗರದ ಜನತೆ ಹಳ್ಳಿಗಳತ್ತ ಹೋಗಿರುವುದು ಉಂಟು.

ರಸಾಯನಿಕ ಬಳಸಿ ಹಣ್ಣಾಗಿಸುವಿಕೆ: ರಸಾಯನಿಕ ಬಳಸಿ ಹಣ್ಣು ಮಾಡುವ ಮಾವಿನ ಹಣ್ಣುಗಳಿಗೂ ಪ್ರಾಕೃತಿಕವಾಗಿ ಹಣ್ಣಾಗುವ ಹಣ್ಣುಗಳಿಗೂ ವ್ಯತ್ಯಾಸವಿರುತ್ತದೆ ಎನ್ನುತ್ತಾರೆ ಮಾವಿನ ಹಣ್ಣಿನ ಪ್ರಿಯರು.

ಪ್ರಾಕೃತಿಕವಾಗಿ ಹಣ್ಣಾಗಿರುವ ಮಾವು ಒಳ್ಳೆಯ ರುಚಿ ಹಾಗೂ ಹೆಚ್ಚು ದಿನ ಬಾಳುತ್ತದೆ. ಮಾವು ಮಾಡಿದ ಹಣ್ಣುಗಳು ಹೆಚ್ಚು ದಿನ ಬಾಳಿಕೆಯೂ ಬರುವುದಿಲ್ಲ. ಆರೋಗ್ಯಕ್ಕೂ ಹಿತಕರವಾಗಿರುವುದಿಲ್ಲ ಎನ್ನಲಾಗುತ್ತದೆ.

ಕೆ.ಜಿ.ಗೆ 30ರೂ.ನಿಂದ 80ರೂ.: ನಗರದ ಪ್ರಮುಖ ರಸ್ತೆಗಳಲ್ಲಿ ಮಾವಿನ ಹಣ್ಣು ಮಾರಾಟ ನಡೆಯುತ್ತಿದೆ. ಒಂದು ಕೆ.ಜಿ. ಮಾವಿಗೆ ಹಣ್ಣಿನ ಆಧಾರದ ಮೇಲೆ ಬೆಲೆ ನಿಗದಿಯಾಗಿದ್ದು, ಮಾವಿನ ಹಣ್ಣುಗಳು ಕೆ.ಜಿ.ಗೆ 30ರೂ.ನಿಂದ 80ರೂ. ವರೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next