Advertisement

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾವು ; ಒಟ್ಟು 500 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಬೆಳೆ

06:31 AM May 26, 2020 | mahesh |

ಹರಪನಹಳ್ಳಿ: ಕೋವಿಡ್ ಲಾಕ್‌ಡೌನ್‌ ಸಡಿಲಗೊಂಡ ಹಿನ್ನೆಲೆಯಲ್ಲಿ ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿನ ಸುಗ್ಗಿ ಎಲ್ಲೆಡೆ ಆರಂಭವಾಗಿದ್ದು ಹರಪನಹಳ್ಳಿ ಮಾರುಕಟ್ಟೆಗೆ ಇದೀಗ ಮಾವಿನ ಹಣ್ಣು ಮಾರಾಟಕ್ಕೆ ಆಗಮಿಸುತ್ತಿವೆ. ತಾಲೂಕಿನ ವಿವಿಧೆಡೆ ಬೆಳೆದಿರುವ ಬೇಲಿಸಾ, ಮಲಗಾವ್‌, ಮಲ್ಲಿಕಾ, ತೋತಾಪುರಿ, ರಸಪೂರಿ ಮಾವು ಜೊತೆಗೆ ಇತರೆ ವಿವಿಧ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

Advertisement

ಈಗ ಮಾರುಕಟ್ಟೆಯಲ್ಲಿರುವ ಮಲಗಾವ್‌-60, ಮಲ್ಲಿಕಾ-60, ತೋತಾಪುರಿ-50, ರಸಪೂರಿ 60 ರಿಂದ 70ರೂ ಬೆಲೆಗೆ ಮಾರಾಟ ಆಗುತ್ತಿವೆ. ಹಣ್ಣಿನ ಮಾರುಕಟ್ಟೆ, ಮಾರಾಟ ಸ್ಥಳವಾದ ಚಿತ್ರಮಂದಿರದ ಆಸುಪಾಸು, ಹೊಸ ಬಸ್‌ ನಿಲ್ದಾಣ ಬಳಿ ಹೋದರೆ ಮಾವಿನ ವಾಸನೆ ಒಮ್ಮೆ ಕತ್ತು ತಿರುಗಿಸುವಂತೆ ಮಾಡುತ್ತಿವೆ. ಬಿಸಿಲಿನ ಝಳವಿದ್ದರೂ ಆತಂಕದಲ್ಲಿಯೇ ಒಮ್ಮೆ ರುಚಿ ನೋಡುವ ಆಸೆಯಿಂದ ಖರೀದಿಯೂ ನಡೆಯುತ್ತಿದೆ.

ಮಾವು ಬೆಳೆದ ರೈತರು ಬಹುತೇಕ ಸ್ಥಳೀಯ ಹಣ್ಣಿನ ವ್ಯಾಪಾರಿಗಳನ್ನು ನಂಬಿಕೊಂಡಿರುವುದರಿಂದ ಕೆಲವು ಸಲ ಮಾರುಕಟ್ಟೆ ದರದಲ್ಲಿ ವ್ಯತ್ಯಾಸವಾಗಿ ಮಾವು ಬೆಳೆಗಾರರು ನಷ್ಟ ಅನುಭವಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ರೈತರು ಬೆಳೆದ ಮಾವಿನ ಹಣ್ಣುಗಳಿಗೆ ಉತ್ತಮ ಬೆಲೆ ಪಡೆಯಲು ತಾವೇ ಹೊಲ ಮತ್ತು ರಸ್ತೆ ಬಳಿ ಮಾರಾಟಕ್ಕಿಳಿದಿರುವುದು ಕಂಡುಬರುತ್ತಿದೆ. ಕಳೆದ ಬಾರಿ ಈ ಹೊತ್ತಿನಲ್ಲಿ ಮಾವಿನ ಬೆಲೆ ಇನ್ನೂ ಹೆಚ್ಚಿತ್ತು. ಈ ಬಾರಿ ಕೋವಿಡ್ ಇರುವುದರಿಂದ ಸ್ವಲ್ಪ ಕಡಿಮೆಯಿದೆ. ಇನ್ನೂ ಮಾವಿನ ವ್ಯಾಪಾರ ಕುದುರಿಲ್ಲ. ಜತೆಗೆ ಈ ಬಾರಿ ಹಣ್ಣು ಕೂಡ ಕಡಿಮೆಯಿದೆ. ಕಳೆದ ವರ್ಷ ಈ ಹೊತ್ತಿಗೆ ಸಾಕಷ್ಟು ವ್ಯಾಪಾರ ಮಾಡಿದ್ದೇವು ಎನ್ನುತ್ತಾರೆ ಮಾವು ವ್ಯಾಪಾರಿ ದುರುಗಮ್ಮ ಮತ್ತು ಊರಮ್ಮ. ಪಟ್ಟಣದ ಕೊಟ್ಟೂರು ರಸ್ತೆಯ ತೋಟದ ಬಳಿ ಮಾರಾಟಕ್ಕಿಟ್ಟಿರುವ ಬದಾಮಿ-80, ರಸಪೂರ-70,
ಮಲಗೋವಾ-80, ಸಿಂಧೂರ-60 ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೇವೆ. ಲಾಕ್‌ಡೌನ್‌ ನಂತರ ವ್ಯಾಪಾರ ಜೋರಾಗಿದೆ.

ಯಾವುದೇ ಪೌಡರ್‌ ಬಳಸದೇ ಭತ್ತದ ಹುಲ್ಲಿನಲ್ಲಿ ಹೊತ್ತೆ ಹಾಕಿ ಹಣ್ಣು ಮಾಡಿರುವುದರಿಂದ ಈ ಭಾಗದಲ್ಲಿ ಸಂಚರಿ  ಸುವ ಪ್ರಯಾಣಿಕರು ಮತ್ತು ಪಟ್ಟಣದ ಜನರು ಇಲ್ಲಿಗೆ ಬಂದು ಹಣ್ಣುಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ಕೊಟ್ಟೂರು ರಸ್ತೆಯ 5 ಎಕರೆ ಮತ್ತು ಅನ್ಯ ಕಡೆಯ 18 ಎಕರೆ ತೋಟದ ಬೆಳೆಯ ಹಣ್ಣನ್ನು ಇಲ್ಲಿಯೇ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ರೈತ ಕಸವನ ಹಳ್ಳಿ ದಾಸಪ್ಪರ ಪರಮೇಶ್ವರಪ್ಪ.

ಬಹುತೇಕ ಹಣ್ಣುಗಳಿಗೆ ಪೌಡರ್‌ ಹಾಕಿ ಹಣ್ಣು ಮಾಡುತ್ತಿರುವುದರಿಂದ ಅವುಗಳ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದರೆ ರೈತರು ತೋಟದಲ್ಲಿಯೇ ಮಾವಿನ ಕಾಯಿ ಹೊತ್ತೆ ಹಾಕಿ ಯಾವುದೇ ಪೌಡರ್‌ ಬಳಸದೇ ಹಣ್ಣು ಮಾಡಿರುವುದರಿಂದ ಉತ್ತಮ ರುಚಿ ಇರುತ್ತವೆ. ಹೀಗಾಗಿ ಪಟ್ಟಣದಿಂದ ಇಲ್ಲಿಗೆ ಬಂದು ಮಾವಿನ ಹಣ್ಣು ತೆಗೆದುಕೊಂಡು ಹೋಗುತ್ತೇವೆ. ಸಿ.ಗಂಗಾಧರ್‌, ಸೋಗಿ ಮಲ್ಲಿಕಾರ್ಜುನ್‌, ಗ್ರಾಹಕರು

Advertisement

ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 500 ಹೆಕ್ಟೆರ್‌ ಪ್ರದೇಶದಲ್ಲಿ ಮಾವಿನ ಬೆಳೆ ಹಾಕಲಾಗಿದೆ. ಕಂಚಿಕೇರಿ, ಕ್ಯಾರಕಟ್ಟೆ, ಹಳ್ಳಿಕೆರೆ, ತೆಲಿಗಿ ಕೆ.ಕಲ್ಲಹಳ್ಳಿ ಸೇರಿದಂತೆ ವಿವಿಧೆಡೆ ಫಸಲು ಬಂದಿದೆ. ಪ್ರತಿ ಒಂದು ಹೆಕ್ಟೇರ್‌ ಪ್ರದೇಶದಿಂದ 5ರಿಂದ 6 ಟನ್‌ ಹಣ್ಣು ನಿರೀಕ್ಷೆ ಮಾಡಲಾಗಿದೆ. ಇಡೀ ತಾಲೂಕಿನ ಒಟ್ಟು 2000ರಿಂದ 2500 ಸಾವಿರ ಟನ್‌ ಹಣ್ಣು ಸಿಗುವ ನಿರೀಕ್ಷೆಯಿದೆ. ಕಳೆದ ಬಾರಿಗಿಂತ ಈ ಬಾರಿ ಫಸಲು ಕಡಿಮೆ ಬಂದಿದೆ.
ಜಯಸಿಂಹ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ

ಎಸ್‌.ಎನ್‌. ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next