Advertisement

ಮಾವು ಬೆಳೆಗಾರನಿಗೆ ದಲ್ಲಾಳಿ-ಕರ್ಫ್ಯೂ ಶಾಕ್‌

06:06 PM May 17, 2021 | Team Udayavani |

ರವಿ ಲಕ್ಷ್ಮೇಶ್ವರ

Advertisement

ಹಾನಗಲ್ಲ: ದಲ್ಲಾಳಿಗಳ ಕೈಗೊಂಬೆಯಾಗಿರುವ ಮಾವು ಬೆಳೆದ ರೈತ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಸಂಕಷ್ಟದ ಸುಳಿಗೆ ಸಿಲುಕಿದ್ದಾನೆ.

ಹಾನಗಲ್ಲ ತಾಲೂಕಿನಲ್ಲಿ 3.5 ಸಾವಿರ ಹೆಕ್ಟೇರ್‌ನಷ್ಟು ಮಾವು ತೋಟಗಳಿವೆ. ಎರಡು ಮೂರು ದಶಕಗಳಿಂದ ಪೋಷಿಸಿಕೊಂಡು ನಾಲ್ಕಾರು ರೂ. ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರನ ಕನಸು ಹುಸಿಯಾಗಿ ಹತಾಶ ಸ್ಥಿತಿಗೆ ತಲುಪಿದ್ದಾನೆ. ದಲ್ಲಾಳಿಗಳ ಬಿಗಿ ಪಟ್ಟಿನ ಪೆಟ್ಟು ತಿಂದು ಕಂಗಾಲಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕೊರೊನಾ ಶಾಕ್‌ಗೆ ಸಂಚಲನವನ್ನೇ ಕಳೆದುಕೊಂಡಿದ್ದಾನೆ.

ತೋಟಗಾರಿಕೆ ಇಲಾಖೆ ಮಾವು ವಿಮೆ ವಿಷಯದಲ್ಲಿ ನಮ್ಮ ಪಾತ್ರವಿಲ್ಲ. ಅದು ಹವಾಮಾನ ಆಧಾರಿತ ವಿಮಾ ಪರಿಹಾರ ಎಂದು ಕೈ ಚೆಲ್ಲುತ್ತದೆ. ವಾಸ್ತವದ ಅರಿವು ತೋಟಗಾರಿಕೆ ಇಲಾಖೆಗಿದ್ದರೂ ಅಸಹಾಯಕವಾಗಿದೆ. ಕಳೆದ ವರ್ಷ ಇದೇ ರೀತಿ ಕೊರೊನಾ ಹಾಗೂ ದಲ್ಲಾಳಿಗಳ ಹೊಡೆತಕ್ಕೆ ಸಿಕ್ಕು ರೈತರು ಕಷ್ಟಪಟ್ಟು ಬೆಳೆದ ಮಾವು ತೋಟದಲ್ಲಿಯೇ ಕೊಳೆತು ಹೋಯಿತು. ಹಲವರು ಹತ್ತಾರು ವರ್ಷಗಳಿಂದ ಕಾಳಜಿಯಿಂದ ಬೆಳೆಸಿದ ಮಾವಿನ ಗಿಡಗಳನ್ನು ಕಡಿದು ಹಾಕಿದರು. ಇನ್ನೊಂದೆಡೆ ಮಾವಿನ ತೋಪಿನಲ್ಲಿಯೇ ಕೆಲವರು ಭವಿಷ್ಯದ ಆಶಾದಾಯಕ ಮನಸ್ಥಿತಿಯಿಂದ ಅಡಕೆ ಗಿಡ ನೆಟ್ಟಿದ್ದಾರೆ. ಆದರೆ, ಮಾವು ತೋಪಿನ ಆದಾಯವನ್ನೇ ನೆಚ್ಚಿಕೊಂಡವರಿಗೆ ಎರಡು ವರ್ಷ ಮೇಲೆಳಲಾರದ ಹೊಡೆದ ಬಿದ್ದಿದೆ. ಈ ನಡುವೆ ಕಳೆದ ವರ್ಷದ ಮಾವು ವಿಮೆಯಲ್ಲಿ ಭಾರೀ ಏರುಪೇರಾಗಿದೆ.

ತೋಟಗಾರಿಕಾ ಇಲಾಖೆಯಲ್ಲಿ ವಿಚಾರಿಸಿದರೆ, ಇದು ನಮ್ಮ ಕೈಯಲ್ಲಿಲ್ಲ ಎಂದು ಅಧಿಕಾರಿಗಳು ಕೈಚೆಲ್ಲುವುದು ಸಹಜವಾಗಿದೆ. ಅಕ್ಕಪಕ್ಕದ ಗ್ರಾಪಂಗಳಲ್ಲಿಯೇ ವಿಪರೀತ ವ್ಯತ್ಯಾಸ ಬೆಳೆ ವಿಮೆ ಕಂಪನಿಯಿಂದ ಆಗಿದೆ ಎಂಬ ಸತ್ಯ ಇಲಾಖೆಗೆ ಗೊತ್ತಿದೆ. ಹವಾಮಾನ ಆಧಾರಿತ ಎಂದು ಹೇಳುವ ತೋಟಗಾರಿಕೆ ಇಲಾಖೆಗೆ ವಾಸ್ತವ ತಿಳಿದಿದೆ. ಆದರೂ, ಕಣ್ಣಿದ್ದೂ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಒಂದೇ ಮಳೆ ಮಾಪನ ಕೇಂದ್ರ, ಅದೇ ವಾತಾವರಣದಲ್ಲಿದ್ದ ಮಾವು ಬೆಳೆಗೆ ಭಾರೀ ಪ್ರಮಾಣದ ನಷ್ಟವಾದರೂ ಅತ್ಯಂತ ಕಡಿಮೆ ವಿಮೆ ಪರಿಹಾರ ಬಂದಿದೆ. ಈ ಬಗ್ಗೆ ರೈತ ಮಾತ್ರ ಅಸಹಾಯಕನಾಗಿದ್ದಾನೆ. ತೋಟಗಳು ಸಂಪೂರ್ಣ ಹಾಳಾಗಿದ್ದರೂ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಬೆಳೆ ವಿಮೆ ಪರಿಹಾರ ದೊರೆಯತ್ತಿದೆ. ಪ್ರಸಕ್ತ ವರ್ಷ ಹತ್ತಾರು ಬಾರಿ ಮಳೆ ಬಂದು ಮಾವು ಫಸಲು ಪೂರ್ಣ ಪ್ರಮಾಣದಲ್ಲಿ ಕಲೆಯಾಗಿ ಕೆಟ್ಟು ಹೋಗಿದೆ. ಬೆಳೆಯ ಪ್ರಮಾಣವೂ ತೀರ ಕಡಿಮೆ. ಇದರ ನಡುವೆ ಮಾವು ಖರೀದಿಸುವವರೂ ರೈತರೊಂದಿಗೆ ಆಟವಾಡುತ್ತಿದ್ದಾರೆ.

Advertisement

ಬಾಯಿಗೆ ಬಂದ ಬೆಲೆಗೆ ಇರುವಷ್ಟು ಮಾವು ಮಾರಿ ರೈತರು ಊರಿಗೆ ಮರಳುತ್ತಿದ್ದಾರೆ. ಮಾವಿನ ಮಂಡಿಗಳ ಮಾಲೀಕರು ಒಂದು ಕೆ.ಜಿಗೆ 20 ರಿಂದ 25 ರೂ.ಗೆ ಖರೀದಿಸುತ್ತಿದ್ದಾರೆ. ಹಾಗಾಗಿ, ಬೇರೆ ದಾರಿ ಇಲ್ಲದೇ ರೈತ ಸೋತು ಹೋಗಿದ್ದಾನೆ. ಪ್ರಸಕ್ತ ವರ್ಷದ ಮಾವಿಗೆ ಬೆಳೆ ವಿಮೆ ಯಾವ ಪ್ರಮಾಣದಲ್ಲಿ ಬರಬಹುದು ಎಂಬ ಬಗ್ಗೆಯೂ ರೈತ ವಿಶ್ವಾಸ ಕಳೆದುಕೊಂಡಿದ್ದಾನೆ. ಕಳೆದ ವರ್ಷದ ತಾರತಮ್ಯ ಈ ವರ್ಷವೂ ಮುಂದುವರಿಯುವುದೇ? ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾವು ಬೆಳೆ ಹಾನಿಯಾಗಿದ್ದರೂ ತೋಟಗಾರಿಕೆ ಇಲಾಖೆ ರೈತನ ಪರವಾಗಿ ಎಲ್ಲಿಯೂ ಸಹಾಯಕ್ಕೆ ಬಂದಿಲ್ಲ. ರೈತನ ಅಳಲು ಕೇಳಿಲ್ಲ. ಹವಾಮಾನ ಆಧಾರಿತ ಎಂಬ ಕಾರಣಕ್ಕೆ ಇಲಾಖೆ ಅಸಹಾಯಕ ಎಂದು ರೈತನೂ ಕೈಚೆಲ್ಲಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next