*ವಿಶೇಷ ವರದಿ
ಹಾವೇರಿ: ಕೊರೊನಾ ಕರಿನೆರಳು ಬಿದ್ದಿದ್ದು, ಮಾವು ವ್ಯಾಪಾರದ ಮೇಲೂ ಬಿದ್ದಿದ್ದು, ವ್ಯಾಪಾರ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಕಳೆದ ವರ್ಷ ಇದೇ ಸಮಯಕ್ಕೆ ಲಾಕ್ ಡೌನ್ ಜಾರಿಯಾಗಿತ್ತು. ಆಗಲೂ ಮಾವು ವ್ಯಾಪಾರ ಸರಿಯಾಗಿ ನಡೆದಿರಲಿಲ್ಲ. ಇದರಿಂದ ರೈತರು, ವ್ಯಾಪಾರಿಗಳ ಜತೆಗೆ ಉತ್ತಮ ಹಣ್ಣು ಖರೀದಿಸಲಾಗದೆ ಗ್ರಾಹಕರೂ ತೊಂದರೆಗೆ ಸಿಲುಕಿದ್ದರು. ಈ ವರ್ಷವೂ ಇದೇ ಪರಿಸ್ಥಿತಿ ಮರುಕಳಿಸಿದೆ. ಹೀಗಾಗಿ ಬೆಳೆಗಾರರು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಈ ವರ್ಷವೂ ಮಾವು ಹುಳಿಯಾಗಿ ಪರಿಣಮಿಸಿದೆ.
ಮಾವಿನ ಹಂಗಾಮು ಬಂತೆಂದರೆ ಜಿಲ್ಲೆಯಲ್ಲಿ ಆಪೂಸ್, ಕಲ್ಮಿ ಸಿಂಧೂರ, ಮಲ್ಲಿಕಾ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಲಗ್ಗೆಯಿಡುತ್ತಿದ್ದವು. ವ್ಯಾಪಾರಸ್ಥರು ಹಾನಗಲ್ಲ, ಆನವಟ್ಟಿ, ಹುಬ್ಬಳ್ಳಿ, ದಾವಣಗೆರೆ, ಹರಿಹರ ಸೇರಿದಂತೆ ವಿವಿಧ ಕಡೆಗಳಿಂದ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಆದರೆ ಕರ್ಫ್ಯೂ ಕಾರಣದಿಂದ ವಿವಿಧ ಭಾಗಗಳಿಂದ ಬರುತ್ತಿದ್ದ ವೈವಿಧ್ಯಮಯ ತಳಿಯ ಮಾವಿನ ಹಣ್ಣುಗಳು ಈ ಬಾರಿ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಬಂದಿಲ್ಲ.
ನಗರದ ಮಾರುಕಟ್ಟೆಯಲ್ಲಿ ಆಪೂಸ್ ತಳಿ ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದು, ಇತರೆ ತಳಿಯ ಹಣ್ಣುಗಳು ಕಾಣುತ್ತಿಲ್ಲ. ನೈಸರ್ಗಿಕ ಹಣ್ಣಿಗೆ ಬೇಡಿಕೆ: ಮಾರುಕಟ್ಟೆಗೆ ಬಂದಿರುವ ಮಾವನ್ನು ಹೆಚ್ಚಾಗಿ ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡಲಾಗಿರುತ್ತದೆ ಎಂಬ ಭಾವನೆಯೇ ಹೆಚ್ಚು ಜನರಲ್ಲಿ ಇರುವುದರಿಂದ ಹಾಗೂ ಕೊರೊನಾ ಸೋಂಕಿನ ಭಯದಿಂದ ಮಾರುಕಟ್ಟೆಯಲ್ಲಿ ಮಾವು ಖರೀದಿಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.
ನೈಸರ್ಗಿಕವಾಗಿ ಮಾಗಿಸಿದ ಅಂದರೆ ಹಣ್ಣಾಗಿಸಿದ ಮಾವಿಗೆ ಭಾರೀ ಬೇಡಿಕೆ ಇದ್ದು, ಅದು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಹೀಗಾಗಿ ಕೆಲವರು ರೈತರ ಹೊಲಗಳಿಗೆ ಹೋಗಿ ಮಾವಿನಕಾಯಿಗಳನ್ನು ತಂದು ಮನೆಯಲ್ಲಿಯೇ ಹುಲ್ಲು ಹಾಕಿ ಮಾಗಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲ ರೈತ ಸಂಘಟನೆಗಳು ರೈತರಿಂದ ಖರೀದಿಸಿದ ಮಾವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಮುಂದಾಗಿವೆಯಾದರೂ ಉತ್ತಮ ತಳಿಯ ಹಣ್ಣುಗಳು ಸಿಗದೆ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.