ಚಿಕ್ಕಬಳ್ಳಾಪುರ, ಮೇ. 27: ಜಿಲ್ಲೆಯಲ್ಲಿ ಮಳೆಗಿಂತ ಬಿರುಗಾಳಿಯ ಅಬ್ಬರವೇ ಜೋರಾಗಿದ್ದು, ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಬಿರುಗಾಳಿ ಸಮೇತ ಬಿದ್ದಿರುವ ಮಳೆಗೆ 364 ಹೆಕ್ಟೇರ್‌ನಷ್ಟು ಮಾವು, ದ್ರಾಕ್ಷಿ, ಬಾಳೆ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳು ನೆಲ ಕಚ್ಚಿರುವುದು ಜಿಲ್ಲೆಯ ಅನ್ನದಾತರನ್ನು ಸಂಕಷ್ಟಕ್ಕೀಡು ಮಾಡಿದೆ.
364 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ: ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ನಡೆಸಿರುವ ಪ್ರಾಥಮಿಕ ಸಮೀಕ್ಷೆಯಲ್ಲಿ 364 ಹೆಕ್ಟೇರ್‌ನಷ್ಟು ಕೊಯ್ಲಿಗೆ ಬಂದಿದ್ದ ಮಾವು, ದ್ರಾಕ್ಷಿ, ಬಾಳೆ ತೋಟ ಹಾಗೂ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಳು ನೆಲಕಚ್ಚಿದ್ದು, ಜಿಲ್ಲೆಯಲ್ಲಿ ಶಿಡ್ಲಘಟ್ಟ ತಾಲೂಕಿನಲ್ಲಿ ಹೆಚ್ಚಿನ ಬೆಳೆ ಹಾನಿಯಾಗಿದೆ.
ಶಿಡ್ಲಘಟ್ಟ ತಾಲೂಕು ಒಂದರಲ್ಲಿಯೇ 258 ಹೆಕ್ಟೇರ್ ಪ್ರದೇಶದಲ್ಲಿ ಮಾವು, ದ್ರಾಕ್ಷಿ, ತರಕಾರಿ ಬೆಳೆಗಳು ನೆಲಕಚ್ಚಿವೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ ಸೋಮವಾರ ಉದಯವಾಣಿಗೆ ಬೆಳೆ ನಷ್ಟದ ಕುರಿತು ಮಾಹಿತಿ ನೀಡಿದರು.
ಉಳಿದಂತೆ ಗೌರಿಬಿದನೂರು ಕ್ಷೇತ್ರದಲ್ಲಿ 11, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 33, ಬಾಗೇಪಲ್ಲಿ 1, ಚಿಂತಾಮಣಿ 16 ಹಾಗೂ ಶಿಡ್ಲಘಟ್ಟ 258 ಸೇರಿ ಒಟ್ಟು ಜಿಲ್ಲೆಯಲ್ಲಿ 364 ಹೇಕ್ಟರ್ ಪ್ರದೇಶದಲ್ಲಿ ಕೊಯ್ಲಿನ ಹಂತಕ್ಕೆ ಬಂದಿದ್ದ ವಾಣಿಜ್ಯ ಬೆಳೆಗಳು ನಾಶವಾಗಿದೆ.
Advertisement
ವಾಣಿಜ್ಯ ಬೆಳೆಗಳು ಮಣ್ಣುಪಾಲು: ಹಲವು ದಿನಗಳಿಂದ ಮಳೆಗಾಗಿ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದ ರೈತರಿಗೆ ಒಂದೆಡೆ ಮಳೆಯ ದರ್ಶನ ಸಹವಾಗಿಯೇ ಸಂತಸ ತಂದಿದ್ದರೂ ಮತ್ತೂಂದೆಡೆ ಜಿಲ್ಲೆಯಲ್ಲಿ ಕಳೆದ ಭಾನುವಾರ ಹಾಗೂ ಸೋಮವಾರ ರಾತ್ರಿ ಸುರಿದಿರುವ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ವಾಣಿಜ್ಯ ಬೆಳೆಗಳು ಮಣ್ಣು ಪಾಲಾಗಿರುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಮತ್ತೂಂದೆಡೆ ಬೆಳೆ ರಕ್ಷಣೆ ಮಾಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಪಾಲಿಹೌಸ್‌ಗಳು ಗಾಳಿಗೆ ಚದುರಿ ಹೋಗಿ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ.
Related Articles
Advertisement
ಶಿಡ್ಲಘಟ್ಟದಲ್ಲಿ ಮಾವು, ಚಿಕ್ಕಬಳ್ಳಾಪುರದಲ್ಲಿ ದ್ರಾಕ್ಷಿ: ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ದ್ರಾಕ್ಷಿ ಹಾಗೂ ಮಾವು ಸಿಲುಕಿದ್ದು, ರೇಷ್ಮೆ ನಗರಿ ಶಿಡ್ಲಘಟ್ಟದಲ್ಲಿ ಅಪಾರ ಪ್ರಮಾ ಣದಲ್ಲಿ ಮಾವು ಹಾಗೂ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ದ್ರಾಕ್ಷಿ ಬಿರುಗಾಳಿಗೆ ಸಿಲುಕಿದೆ.
ಚಿಕ್ಕಬಳ್ಳಾಪುರದ ಜಾತವಾರ, ಹೊಸವುಡ್ಯ, ನಾಯನಹಳ್ಳಿ, ನಂದಿ, ಇನಿಮಿಂಚೇನಹಳ್ಳಿ, ಆರೂರು, ಹಾರೋ ಬಂಡೆ, ಕೇಶವಾರ, ಅಂದಾರ‌್ಲಹಳ್ಳಿ ಮತ್ತಿತರ ಕಡೆ ಹೇರಳ ಪ್ರಮಾಣದಲ್ಲಿ ಕೊಯ್ಲಿಗೆ ಬಂದಿರುವ ದ್ರಾಕ್ಷಿ ಮಳೆ ಹಾಗೂ ಆಲಿಕಲ್ಲು ಮಳೆಗೆ ಮಣ್ಣು ಪಾಲಾಗಿ ರೈತರು ಕಣ್ಣೀರು ಸುರಿಸುವಂತಾದರೆ, ಶಿಡ್ಲಘಟ್ಟ ತಾಲೂ ಕಿನ ಕಸಬಾ ಹೋಬಳಿಯ ಹೈಹುಣಿಸೇನಹಳ್ಳಿ, ಸೊಣ್ಣ ಹಳ್ಳಿ, ವೀರಾಪುರ, ಬಶೆಟ್ಟಿಹಳ್ಳಿ, ಹುಜಗೂರು, ಗೊರ ಮಡಗು ಮತ್ತಿತರ ಕಡೆಗಳಲ್ಲಿ ಮಾವು ಬಿರುಗಾಳಿಗೆ ನೆಲಕ್ಕುರುಳಿದೆ.
ಹಿಪ್ಪುನೇರಳೆ ಸೊಪ್ಪಿಗೆ ಸಂಕಷ್ಟ: ತೀವ್ರ ಬಿರುಗಾಳಿ ಮಳೆಗೆ ವಾಣಿಜ್ಯ ಬೆಳೆಗಳು ಮಾತ್ರವಲ್ಲದೇ ರೇಷ್ಮೆ ಸೊಪ್ಪಿಗೆ ಸಂಕಷ್ಟ ಎದುರಾಗಿದೆ. ರೇಷ್ಮೆಗೂಡಿಗೆ ಅಗತ್ಯವಾದ ಹಿಪ್ಪುನೇರಳೆ ಸೊಪ್ಪು ನೆಲಕಚ್ಚಿರುವುದರಿಂದ ರೇಷ್ಮೆ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಮಳೆ ಯಿಂದ ನೆನೆಯುತ್ತಿರುವ ರೇಷ್ಮೆ ಸೊಪ್ಪುನಿಂದ ರೇಷ್ಮೆಗೂಡು ಉತ್ಪಾದನೆ ಕುಸಿತದ ಭೀತಿ ಎದುರಿಸು ವಂತಾಗಿದೆ.