Advertisement
ಮೇಳದಲ್ಲಿ ಮಲ್ಗೊವಾ, ದಶಹರಿ, ಸಕ್ಕರೆಗುತ್ತಿ, ಪೈರಿ, ಮುಂಡಾ, ಬೇಗನ್‌ಪಲ್ಲಿ, ಸಿಂಧೂರ, ಶುಗರ್ ಬೇಬಿ, ಕೇಸರ್, ಆಪೂಸ್, ಹಿಮಾಯತ್, ಮಲ್ಲಿಕಾ, ರಸಪೂರಿ, ಬಾದಾಮಿ, ಸೇಂದೂರು, ಸೋತಾಪುರಿ, ಸುವರ್ಣರೇಖ ಸೇರಿದಂತೆ 10ರಿಂದ 15ಕ್ಕೂ ಅಧಿಕ ವೈವಿಧ್ಯಮಯ ತಳಿಯ ಮಾವುಗಳನ್ನು ಗ್ರಾಹಕರು ಖರೀದಿಸಿ ಮಾವಿನ ರುಚಿ ಸವಿದರು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ನೀಡುವ ಉದ್ದೇಶದಿಂದ, ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಕಾರಣದಿಂದ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಮಾವುಗಳನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಾವು ಮೇಳಗಳನ್ನು ಆಯೋಜಿಸಲಾಗುತ್ತಿದೆ.
ರವಿವಾರ ರಜಾದಿನವಾದ್ದರಿಂದ ಮಾವು ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಮುಂಜಾನೆಯಿಂದಲೇ ಮಾವು ಮೇಳದತ್ತ ಆಗಮಿಸಿದ ಜನರು ತಮಗೆ ಇಷ್ಟವಾದ ತಳಿಯ ಮಾವುಗಳನ್ನು ಖರೀದಿಸಿದರು. ಕಳೆದ ಎರಡು ದಿನಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಮೇಳಕ್ಕೆ ರವಿವಾರ ಉತ್ತಮ ಸ್ಪಂದನೆ ವ್ಯಕ್ತವಾಯಿತು.