Advertisement

ಆಲಿಕಲ್ಲು ಮಳೆಗೆ ನೆಲಕ್ಕಚ್ಚಿದ‌ ಮಾವು

11:32 AM Jun 02, 2019 | Team Udayavani |

ದೇವನಹಳ್ಳಿ: ತಾಲೂಕಿನ ಹಲವರು ಕಡೆಗಳಲ್ಲಿ ಇತ್ತಿಚೆಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ಮಾವಿನ ತೋಟಗಳಲ್ಲಿ ಮಾವಿನ ಕಾಯಿಗಳೂ ನೆಲಕ್ಕೆ ಬಿದ್ದು ನಾಶವಾಗಿದೆ. ಧಾರಾಕಾರವಾಗಿ ಮಳೆಸುರಿದಿದ್ದರಿಂದ ಜನತೆ ಸಂತೋಷ ಪಡುತ್ತಿದ್ದರೆ, ಮತ್ತೂಂದೆಡೆ ಮಾವಿನ ಫಸಲು ಮಳೆ ಗಾಳಿಗೆ ಸಿಲುಕಿ ಹಾಳಾಗಿರುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದ್ದು, ರೈತರು ಕಂಗಾಲಾಗಿದ್ದಾರೆ.

Advertisement

ಅಕಾಲಿಕ ಮಳೆಗೆ ರೈತರು ಕಂಗಾಲು: ಈ ಬಾರಿ ಉತ್ತಮ ಫಸಲು ಬಂದಿದೆ ಎಂಬುವ ಖುಷಿಯಲ್ಲಿದ್ದ ಮಾವು ಬೆಳೆಗಾರರು ತಮ್ಮ ತೋಟಗಳನ್ನು ನೆರೆಯ ಆಂಧ್ರಪ್ರದೇಶದ ಮಾರಾಟಗಾರರಿಗೆ ನೀಡಿದ್ದರು. ಆದರೆ ಮಾರಾಟಗಾರರು ಮಾವಿನ ಕಾಯಿಗೆ ಒಳ್ಳೆ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಇನ್ನೊಂದು ಕಡೆ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ ಎಂಬುವ ನಿರೀಕ್ಷೆಯಲ್ಲಿದ್ದವರು. ಆಲಿಕಲ್ಲು ಮಳೆಗೆ ಮಾವಿನ ಫ‌ಸಲು ಸಂಪೂರ್ಣವಾಗಿ ಹಾಳಾಗಿದೆ. ಹೀಗಾಗಿ ಮುಂಗಡ ಹಣವನ್ನು ವಾಪಸ್ಸು ಕೇಳುವ ದುಸ್ಥಿತಿ ಬಂದೆರಗಿದೆ. ರೋಗ ಬಾಧೆಯ ನಡುವೆಯೂ ಮಾವು ರೈತರ ಬದುಕಿಗೆ ನೆರವಾಗುತ್ತದೆ ಎಂಬ ಭ್ರಮೆಯಲ್ಲಿ ಸಾಲ ಸೋಲ ಮಾಡಿ, ರೋಗ ಬಾಧೆ ತಡೆಗೆ ಔಷಧ ಸಿಂಪಡಿಸಿ ಸಕಾಲಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಮಳೆಯಿಂದ ಹೆಚ್ಚಿನ ತೊಂದರೆ ಅನುಭವಿಸುವಂತ್ತಾಗಿದೆ. ಬೆಳೆಗೆ ಅಕಾಲಿಕ ಮಳೆ ರೈತರ ಆಸೆಗೆ ತಣ್ಣೀರೆರಚಿದೆ. ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.

ಪರಿಹಾರ ಘೋಷಣೆಗೆ ಮನವಿ: ಇದೇ ರೀತಿ ಮುಂದುವರೆದರೆ ರೈತರು ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳು ನಿರ್ಮಾಣವಾಗಿ ರೈತರ ಬದುಕು ಬೀದಿಗೆ ಬೀಳಲಿದೆ. ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಮಾವು ಬೆಳೆಗಾರರ ನಷ್ಟ ಪರಿಹಾರ ಘೋಷಿಸಿದರೆ ಒಂದಿಷ್ಟು ಅನುಕೂಲವಾಗುತ್ತದೆ ಎಂದು ರೈತರು ಸರ್ಕಾರವನ್ನು ಕೋರಿದ್ದಾರೆ.

ಈ ಬಾರಿ ಮಳೆಯಾಗದೆ ಬರಗಾಲದ ಛಾಯೆ ಸೃಷ್ಠಿಯಾಗಿದೆ. ಮಾವು ತೋಟಗಳಲ್ಲಿ ತೇವಾಂಶ ಕೊರತೆಯಿಂದ ಮಾವಿನ ಮರಗಳಲ್ಲಿ ಬೆರಳೆಣಕೆಯಷ್ಟು ಹೂಬಿಟ್ಟು ಪೀಚುಗಳು ಮಾವಿನ ಕಾಯಿಗಳಾಗಿ ಮೂಡಿತ್ತು. ಮೋಡ ಕವಿದು ಮಿಂಚು ಗುಡುಗು ಸಹಿತ ಆಲಿಕಲ್ಲು ಮಳೆ ಹೊಡೆತಕ್ಕೆ ಮಾವಿನ ಕಾಯಿಗಳು ನೆಲಕಚ್ಚಿರುವುದು ರೈತರ ಮನದಲ್ಲಿ ನಿರಾಸೆ ಮೂಡಿಸುವಂತೆ ಆಗಿದೆ. ಕಳೆದ ವರ್ಷ ಸಕಾಲಕ್ಕೆ ಮಳೆಯಾಗಿ ಮಾವು ಬೆಳೆಗಾರರು ಉತ್ತಮವಾಗಿ ಬೆಳೆ ಫಸಲು ಮಾರುಕಟ್ಟೆಯಲ್ಲಿ ಕೇಳುವವರಿಲ್ಲದೆ, ತೋಟದಲ್ಲಿಯೇ ಕೊಳೆತು ನೆಲದ ಪಾಲಾಗಿತ್ತು ಎಂದು ರೈತರು ಹೇಳುತ್ತಾರೆ.

ವ್ಯಾಪಾರಸ್ತರ ಹೇಳಿಕೆ: ತಾಲೂಕಿನ ದೊರೆಕಾವಲು ಬಳಿ ಇರುವ ಮಾವಿನ ತೋಟವನ್ನು ಖರೀದಿಸಲಾಗಿತ್ತು. ಆದರೆ ಮಳೆ ಗಾಳಿ ಆಲಿಕಲ್ಲು ಮಳೆಯಿಂದ ಸುಮಾರು 6ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಮಾವಿನ ಹಣ್ಣು ಕಾಯಿ ಕೀಳಲು ಕೂಲಿಗಾರರಿಗೆ ಒಂದು ಲಕ್ಷದಷ್ಟು ಕೂಲಿಯನ್ನು ನೀಡಿದ್ದೇವೆ. ಆ ಹಣವೂ ಸಹ ಬಂದಿರುವುದಿಲ್ಲ, ಸುಮಾರು 20 ಟನ್‌ಗಳಷ್ಟು ಕಾಯಿ ಹಣ್ಣು ನಷ್ಟವಾಗಿದೆ. ಆಂದ್ರ ಪ್ರಧೇಶದ ಕದಿರಿಯಿಂದ ಬಂದು ಇಲ್ಲಿ ತೋಟವನ್ನು ಖರೀದಿಸಲು ಬಂದಿದ್ದೇವೆ. ಸುಮಾರು 8 ತೋಟಗಳಿಂದ ನಷ್ಟವನ್ನು ಅನುಭವಿಸಿದ್ದೇವೆ ಎಂದು ವ್ಯಾಪಾರಸ್ಥೆ ಮಹಮ್ಮದ್‌ ರಫಿಕ್‌ ಹೇಳಿದರು.

Advertisement

● ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next