Advertisement

ಅಕಾಲಿಕ ಮಳೆ: ಮಾವಿಗೆ ಹಾನಿ

08:02 PM May 02, 2021 | Team Udayavani |

ಅಂಕೋಲಾ: ಹಣ್ಣುಗಳ ರಾಜ ತಾಲೂಕಿನ ಕರಿ ಈಶಾಡ ಮಾವು ಬೆಳೆ ಈ ಬಾರಿ ಅಕಾಲಿಕ ಮಳೆಗೆ ತುತ್ತಾಗಿ ಇಳುವರಿ ಬಾರದೆ ಮಾರುಕಟ್ಟೆಯಲ್ಲಿ ಅತ್ಯಂತ ವಿರಳವಾಗಿದ್ದರೆ ಕೊರೊನಾದಿಂದ ಮಾವಿನ ಹಣ್ಣಿಗೆ ದರ ಇಲ್ಲದಂತಾಗಿದೆ. ಅಕಾಲಿಕ ಮಳೆಯಿಂದ ಬೆಳೆ ಕುಂಠಿತಗೊಂಡಿದ್ದು ಮಾವಿನ ಇಳುವರಿ ಕಡಿಮೆಯಾಗಲು ಕಾರಣವಾಗಿದೆ. ಇದರಿಂದಾಗಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.

Advertisement

ಕಡಿಮೆ ಇಳುವರಿ ಬಂದರು ಮಾರುಕಟ್ಟೆಯಲ್ಲಿ ಅದನ್ನಾದರು ಮಾರಿಕೊಂಡು ಜೀವವನೋಪಾಯ ಮಾಡಲು ಮುಂದಾದರೆ ಸರಿಯಾದ ಸಮಯದಲ್ಲಿಯೇ ಕೊರೊನಾ ಕಾಟದಿಂದ ಬೆಲೆಯು ಇಲ್ಲದಂತಾಗಿ ಮಾವು ಬೆಳೆದ ರೈತನ ಬದುಕು ಮಾತ್ರ ಅತಂತ್ರವಾಗಿ ಬಿಟ್ಟಿದೆ.

ಕೊರೊನಾ ಎರಡನೇ ಅಲೆಯಿಂದ ಮಾವಿನ ಮಾರಾಟಕ್ಕೂ ಅಡ್ಡಿಯಾಗುವ ಸಂಭವವಿದೆ. ಮಾರುಕಟ್ಟೆ ದೊರೆಯದೆ ಬೆಲೆ ಕುಸಿಯುವ ಭೀತಿ ಬೆಳೆಗಾರರು ಹಾಗೂ ವ್ಯಾಪಾರಿಗಳನ್ನು ಕಾಡುತ್ತಿದೆ. ಮಾವು ಬೆಳೆ ಮತ್ತು ನಿರ್ವಹಣೆ ರೈತರಿಗೆ ಹೊರೆಯಾಗಿದೆ. ಸಾಮಾನ್ಯವಾಗಿ ಮಾರ್ಚ್‌, ಏಪ್ರಿಲ್‌ ತಿಂಗಳು ಮಾವು ಕಾಯಿ ಬಿಡುವ ಸಮಯ. ಈ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಹೂ ಸಹ ಬಿಟ್ಟಿದ್ದವು. ಆದರೆ ಆಗಾಗ ಸುರಿದ ಅಕಾಲಿಕ ಮಳೆ, ಮೋಡದ ವಾತಾವರಣದಿಂದಾಗಿ ಮಾವಿನ ಗಿಡಗಳಿಗೆ ರೋಗ ಬಂದು ಹೂವು ಚಿಗುರು ಅರ್ಧದಷ್ಟು ಆಗಲೇ ಉದುರಿ ಬಿಟ್ಟಿತ್ತು. ಅಂಕೋಲಾ ತಾಲೂಕಿನಲ್ಲಿ ಸುಮಾರು 753 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇದರಲ್ಲಿ ಕರಿ ಇಶಾಡು ಹಾಗೂ ಆಪೂಸ್‌ ಹೆಚ್ಚು.

ಈ ವರ್ಷ ವಾತಾವರಣದಲ್ಲಿ ಉಂಟಾದ ಏರುಪೇರಿನಿಂದಾಗಿ ಮಾವಿನ ಹೂಗಳು ಪ್ರಾರಂಭದ ಹಂತದಲ್ಲೇ ಒಣಗಿವೆ. ಮಾವಿನಕಾಯಿ ನಿಂತಿಲ್ಲ. ಕೆಲವು ಮರಗಳಲ್ಲಿ ಹೂ ಬಿಡದ ಸ್ಥಿತಿಯೂ ಉಂಟಾಗಿದೆ. ಅಂಕೋಲಾದ ಕರಿ ಇಶಾಡ ಮಾವಿಗೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಬೇಡಿಕೆ ಇದೆ. ಸುವಾಸನೆ ಭರಿತ ಈ ಮಾವು ತಿನ್ನಲು ಸಹ ರುಚಿಕರ. ಆದರೆ ಈ ಬಾರಿ ಬೆಳೆ ಅತ್ಯಂತ ಕಡಿಮೆಯಾಗಿದೆ. ಇದರಿಂದಾಗಿ ಬೆಲೆಯೂ ಹೆಚ್ಚಾಗುವ ಸಾಧ್ಯತೆಗಳಿದ್ದವು.

ಕಳೆದ ಸಾಲಿನಲ್ಲಿಯು ಇಳುವರಿ ಬಂದರು ಮಾವಿನ ಹಣ್ಣು ಕೊರೊನಾದಿಂದ ರಫ್ತಾಗಲಿಲ್ಲ. ಈಬಾರಿ ಹಣ್ಣಿಗೆ ಬೆಲೆಯು ಇಲ್ಲದಂತಾಗಿದೆ. ವಿಪರೀತ ಬೆಲೆ ಇದ್ದರೂ ಗ್ರಾಹಕರು ಮಾತ್ರ ಉತ್ಸಹದಿಂದ ಖರೀದಿಸುತ್ತಿದ್ದರು. ಈ ಮಾವಿನ ಹಣ್ಣಿಗೆ ಮಳೆಗಾಲದ ತಂಪು ವಾತಾವರಣ ಹೊಂದಿಕೆಯಾಗುವುದಿಲ್ಲ. ಹಣ್ಣುಗಳಲ್ಲಿ ಹುಳುಗಳಾಗಿ ಮೆತ್ತಗಾಗುತ್ತವೆ. ಇದರ ರುಚಿ ಕೂಡ ಕೆಡುತ್ತದೆ. ಆದ್ದರಿಂದ ಗ್ರಾಹಕರು ಮಾವಿನ ಹಣ್ಣನ್ನು ಖರೀದಿಸಲು ಮುಂದಾಗುವುದಿಲ್ಲ. ಮಾರುಕಟ್ಟೆಯಲ್ಲಿ ದೊಡ್ಡ ಗಾತ್ರದ ಹಣ್ಣು ಇದೀಗ ಡಜನ್‌ ಗೆ 30 ರೂ. ಬೆಲೆ ಇದ್ದರೂ ಕೇಳುವವರೆ ಇಲ್ಲದಂತಾಗಿದೆ. ಕೆಲವು ಮರಗಳಲ್ಲಿ ಈಗ ತಾನೇ ಮಾವಿನ ಹೂ ಬಿಟ್ಟಿದೆ. ಒಟ್ಟಿನಲ್ಲಿ ಮಾವು ಬೆಳೆಗಾರರ ಸ್ಥಿತಿ ಅತಂತ್ರವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next